ಗೊಂದಲದ ಗೂಡಾದ 5 ಮತ್ತು 8ನೇ ತರಗತಿ ಪಬ್ಲಿಕ್ ಪರೀಕ್ಷೆ!!

ಈ ಬಾರಿಯ ಬಹು ಅನಿರೀಕ್ಷಿತ, ರಾಜ್ಯ ಸರ್ಕಾರದ 5 ಮತ್ತು 8ನೇ ತರಗತಿಯ ಪಬ್ಲಿಕ್ ಪರೀಕ್ಷೆ ಮಕ್ಕಳಿಗೆ, ಪೋಷಕರಿಗೆ ಹಾಗೂ ಶಿಕ್ಷಕರಿಗೆ ನುಂಗಲಾರದ ತುತ್ತಾಗಿದೆ.

ಕರೋನ ಕಾರಣದಿಂದ ಮಕ್ಕಳಲ್ಲಿ ಆದ ಕಲಿಕಾ ಹಿನ್ನಡೆಯನ್ನು ಸರಿದೂಗಿಸುವಲ್ಲಿ ಜಾರಿಗೆ ತಂದ. ಕಲಿಕಾ ಚೇತರಿಕಾ ಕಾರ್ಯಕ್ರಮ ನಿಜಕ್ಕೂ, ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ, ಎಂಬುದು ಸತ್ಯ ಸಂಗತಿ. ಆದರೆ! ಶಿಕ್ಷಣ ಇಲಾಖೆ ಡಿಸೆಂಬರ್ ತಿಂಗಳಲ್ಲಿ  ಆದೇಶ ಒಂದನ್ನು ಹೊರಡಿಸುತ್ತದೆ. ಅದುವೇ 2022- 23ನೇ ಸಾಲಿನ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ, ಶಾಲೆಗಳಲ್ಲಿ 5 ಮತ್ತು 8ನೇ ತರಗತಿಗಳಿಗೆ ವಾರ್ಷಿಕ ಪರೀಕ್ಷೆ/ಮೌಲ್ಯಾಂಕನ ಎಂಬ ಹೆಸರಿನ ಪಬ್ಲಿಕ್ ಪರೀಕ್ಷೆ ನಡೆಸುವ ತೀರ್ಮಾನ.

ಶಿಕ್ಷಣ ಇಲಾಖೆಯ ಆದೇಶದ ಅನುಸಾರ ಮಾರ್ಚ್ 9 ರಿಂದ 17ರವರೆಗೆ ಪರೀಕ್ಷೆಯನ್ನು ನಡೆಸಲು, ಮಾರ್ಚ್ 21 ರಿಂದ 28 ರ ವರೆಗೆ ಮೌಲ್ಯಮಾಪನ ಕಾರ್ಯ, ಮಾರ್ಚ್ 31 ರಿಂದ ಏಪ್ರೀಲ್ 5 ರ ವರೆಗೆ ಫಲಿತಾಂಶ ಸಿದ್ಧತೆ, ಏಪ್ರೀಲ್ 8 ರಂದು 5ನೇ ತರಗತಿ ಮತ್ತು  10 ರಂದು  8ನೇ ತರಗತಿ ಫಲಿತಾಂಶ ಪ್ರಕಟಿಸುವುದು ಎಂದು ನಮೂದಿಸಲಾದೆ. ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ, ಪರೀಕ್ಷಾ ನೋಂದಣಿ ಪ್ರಕ್ರಿಯೆಯು ಎಸ್ ಎ ಟಿ ಎಸ್ ನಲ್ಲಿ ನೊಂದಣಿ ಕಾರ್ಯ ಪೂರ್ಣಗೊಂಡಿದ್ದು, ಪರೀಕ್ಷಾ ಕೇಂದ್ರಗಳ ಸ್ಥಾಪನೆ, ಪರೀಕ್ಷಾ ಕಾರ್ಯ ನಿರ್ವಹಣೆ,  ಇನ್ನಿತರೆ ಕಾರ್ಯಗಳು ಮುಗಿಯುವ  ಹಂತಕ್ಕೆ ತಲುಪಿದ್ದು, ಇಲ್ಲಿ ಗಮನಿಸಬಹುದಾದ ಬಹು ಮುಖ್ಯವಾದ ಅಂಶವೆಂದರೆ, ಪ್ರಶ್ನೆ ಪತ್ರಿಕೆ ಈ ವಿಚಾರವಾಗಿ ಇಲಾಖೆ ಜನವರಿ ತಿಂಗಳ ಎರಡನೇ ವಾರದಲ್ಲಿ ಮಾದರಿ ಪ್ರಶ್ನೆ ಪತ್ರಿಕೆಯನ್ನು ಇಲಾಖೆ ವೆಬ್ ಸೈಟ್ ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸೂಚಿಸಿತ್ತು. ಆದರೆ ಜನವರಿ ತಿಂಗಳು ಮುಗಿದು ಫೆಬ್ರವರಿ ಬಂದರು, ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆಯಾಗಿಲ್ಲ.

 ಆದೇಶದಲ್ಲಿ ಮಾದರಿ ಪ್ರಶ್ನೆ ಪತ್ರಿಕೆಯ ರಚನೆಗೆ ಸಂಬಂಧಿಸಿದಂತೆ 40 ಅಂಕದ ಲಿಖಿತ ಪರೀಕ್ಷೆ, 10 ಅಂಕದ ಮೌಖಿಕ ಪರೀಕ್ಷೆಗಾಗಿ ವಿಂಗಡಿಸಲಾಗಿದೆ. ಇದರಲ್ಲಿ 40 ಅಂಕದ ಲಿಖಿತ ಪರೀಕ್ಷೆಯಲ್ಲಿ 20 ಅಂಕದ ಎಮ್ ಸಿ ಕ್ಯೂ ಪ್ರಶ್ನೆಗಳು ಹಾಗೂ ಉಳಿದ 20 ಅಂಕದ ಪ್ರಶ್ನೆಗಳು ವಾಕ್ಯ ರೂಪದಲ್ಲಿನ ಬರವಣಿಗೆಯನ್ನಾದರಿಸಿದೆ ಎಂದು ನಮೂದಿಸಲಾಗಿದ್ದು, ಈ 20 ಅಂಕದ ವಾಕ್ಯರೂಪದಲ್ಲಿನ ಬರವಣಿಗೆ ಹೇಗೆ? ಯಾವ ರೀತಿ ವಿಂಗಡಿಸಲಾಗಿದೆ ಎನ್ನುವುದನ್ನು ಇಲ್ಲಿಯವರೆಗೂ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. ಈ ವಿಚಾರವಾಗಿ ರಾಜ್ಯದ 5ನೇ ತರಗತಿಯ 57, 933 ಶಾಲಾ ವಿದ್ಯಾರ್ಥಿಗಳು  ಮತ್ತು 8ನೇ ತರಗತಿಯ 24, 400  ಶಾಲಾ  ವಿದ್ಯಾರ್ಥಿಗಳ ಭವಿಷ್ಯ ಅಡಗಿದೆ.  

ಇನ್ನು ಈ ತರಗತಿಗಳ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧತೆ ನಡೆಸಲು ನಿಗಧಿಪಡಿಸಿದ ಪಠ್ಯಕ್ರಮ ಗೊಂದಲದ ಗೂಡಾಗಿದೆ. ಇಲಾಖಾ ಅಧಿಕಾರಿಗಳ ಆದೇಶದ ಅನುಸಾರ ಪಠ್ಯಕ್ರಮವು,  ಪಠ್ಯಪುಸ್ತಕ ಮತ್ತು  ಕಲಿಕಾ ಚೇತರಿಕೆ ಎರಡನ್ನು ಒಳಗೊಂಡಿರುತ್ತದೆ ಮತ್ತು  ಮಾದರಿ ಪ್ರಶ್ನೆ ಪತ್ರಿಕೆಯು ಈ ಎರಡು ವಿಷಯಗಳನ್ನು ಒಳಗೊಡಿರುತ್ತದೆ ಎಂದಿದೆ.  ಇಲ್ಲಿ ಗೊಂದಲದ ವಿಚಾರವೆಂದರೆ,  ಪಠ್ಯಪುಸ್ತಕ ನವೆಂಬರ್ ನಿಂದ ಮಾರ್ಚ್ ಮೊದಲ ವಾರದ ವರೆಗೆ ಶಿಕ್ಷಕರು  ನಿರ್ವಹಿಸಿದ ಪಠ್ಯಕ್ರಮ ಅಲ್ಲದೆ ಈ ವಿಚಾರವಾಗಿ ಕೋರ್ ವಿಷಯಗಳು 8ನೇ ತರಗತಿ ಮಾತ್ರ  ಭಾಗ-1 ಮತ್ತು ಭಾಗ-2 ಎಂದಿದ್ದು ಯಾವುದೇ ಸಮಸ್ಯೆ ಇಲ್ಲ, ಆದರೆ ಭಾಷಾ ವಿಷಯಗಳಲ್ಲಿ ಸಾಕಷ್ಟು ಗೊಂದಲವಿದೆ. ಇನ್ನು 5ನೇ ತರಗತಿಯ ಪಠ್ಯಕ್ರಮ ಗಣಿತ ಮಾತ್ರ ಭಾಗ-1 ಮತ್ತು ಭಾಗ-2 ಇದ್ದು, ಪರಿಸರ ಅಧ್ಯಯನ ಹಾಗೂ ಭಾಷಾ ವಿಷಯಗಳು ಭಾಗಗಳು ಇಲ್ಲದೇ ಇರುವುದು ಸೂಕ್ತ ಮಾರ್ಗದರ್ಶನ ಇಲ್ಲದಂತಾಗಿದೆ.

ಕಲಿಕಾ  ಚೇತರಿಕೆಗೆ ಸಂಬಂಧಿಸಿದಂತೆ ಇರುವ ಎಲ್ಲಾ ಕಲಿಕಾ ಹಾಳೆಗಳು ಪಬ್ಲಿಕ್  ಪರೀಕ್ಷೆಗೆ   ತಯಾರಿ ನಡೆಸಬೇಕು ಎಂದು ಸೂಚಿಸಲಾದೆ. ಇಲ್ಲಿ ಮತ್ತೊಂದು ಸಮಸ್ಯೆ ಎಂದರೆ, ಕಲಿಕಾ ಚೇತರಿಕೆ ಹಾಳೆಗಳ ಇಡೀ ಪುಸ್ತಕ  ಒಳಗೊಂಡಿರುವುದೇ ಅಥವಾ ನವೆಂಬರ್ ನಿಂದ ಮಾರ್ಚ್ ವರೆಗೆ ಎಂಬುದರ ಬಗ್ಗೆ ಯಾವುದೇ ಇಲಾಖಾ ಅಧಿಕಾರಿಗಳ ಬಳಿ ಸರಿಯಾದ ಮಾಹಿತಿ ಇಲ್ಲ,  ಇಷ್ಟೇಲ್ಲಾ ಸಮಸ್ಯೆಗಳ ಕೂಪವಾಗಿರುವ ಪಬ್ಲಿಕ್ ಪರೀಕ್ಷೆ ನಡೆಸುವ ತೀರ್ಮಾನ ಹೊರಡಿಸಿದ್ದು ಡಿಸೆಂಬರ್ ತಿಂಗಳಿನಲ್ಲಿ.  

ಇನ್ನು ಕೆಲವು ಸರ್ಕಾರಿ ಶಾಲೆಗಳಿಗೆ ಸರಿಯಾದ ರೀತಿಯಲ್ಲಿ ಪಠ್ಯಪುಸ್ತಕ ಹಾಗೂ ಕಲಿಕಾ ಚೇತರಿಕೆ ಪುಸ್ತಕಗಳು ಸರಬರಾಜು ಆಗೇ ಇಲ್ಲ ಎಂಬುದು ಕೆಲವು ಸರ್ಕಾರಿ ಶಾಲೆಗಳ ಅಳಲು. ಅದರಲ್ಲೂ  ಖಾಸಗಿ ಶಾಲೆಗಳ ಮಕ್ಕಳ, ಶಿಕ್ಷಕರ ಗೋಳು ಹೇಳತೀದಾಗಿದೆ. ಒಂದು ಕಡೆ ಆಡಳಿತ ಮಂಡಳಿಗೆ ಮೆಚ್ಚಿಸುವುದೋ, ಪೋಷಕರಿಗೆ ಮೆಚ್ಚಿಸುವುದೋ, ಶಿಕ್ಷಣ ಇಲಾಖೆಗೆ ಮೆಚ್ಚಿಸುವುದೋ  ತಿಳಿಯದಂತಾಗಿದೆ.

 ಕೆಲವು ಖಾಸಗಿ ಶಾಲೆಗಳು ಹೆಸರಿಗೆ ಸಿ ಬಿ ಎಸ್ಸಿ,  ಐ ಸಿಎಸ್‌ ಸಿ ಎಂದು ಮಕ್ಕಳನ್ನು ದಾಖಲು ಮಾಡಿಕೊಂಡು ಇದೀಗ ರಾಜ್ಯ ಪಠ್ಯಕ್ರಮ ಎಂದಾಕ್ಷಣ ಆಡಳಿತ ಮಂಡಳಿ ಮತ್ತು ಪೋಷಕರ ಮಧ್ಯೆ ಜಟಾಪಟಿ ನಡೆಯುತ್ತಿರುವ ವಿಚಾರ ಅಲ್ಲಿ ಇಲ್ಲಿ ಕೇಳಿ ಬರುತ್ತಿದೆ. ಪರೀಕ್ಷೆಗೆ ಕೇವಲ ಒಂದು ತಿಂಗಳು ಬಾಕಿ ಇದ್ದು ಈ ವಿಚಾರವಾಗಿ ಮಾನ್ಯ ಶಿಕ್ಷಣ ಸಚಿವರು, ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಇದಕ್ಕೆ ಸೂಕ್ತ ತೀರ್ಮಾನ ಕೈಗೊಂಡು ಆದಷ್ಟು ಬೇಗ ಸಮಸ್ಯೆಗಳ ಸರಮಾಲೆಗಳಿಗೆ ಪರಿಹಾರ ಒದಗಿಸಿ ಎಂಬುದು ರಾಜ್ಯದ ಮಕ್ಕಳ, ಪೋಷಕರ ಮತ್ತು ಶಿಕ್ಷಕರ ಅಳಲಾಗಿದೆ.

-ಎನ್.  ಜಿ.  ತಿಪ್ಪೇಸ್ವಾಮಿ

4 thoughts on “ಗೊಂದಲದ ಗೂಡಾದ 5 ಮತ್ತು 8ನೇ ತರಗತಿ ಪಬ್ಲಿಕ್ ಪರೀಕ್ಷೆ!!

  1. Private school gallallli kalika chetarike book illa mathu third language kannada students ge yava riti kalika chetarike book pdf idyaa please sariyada mahiti Kodi

  2. ನಮ್ಮ ಘನ ಕರ್ನಾಟಕ ರಾಜ್ಯ ಸರ್ಕಾರವು ಪ್ರಸಕ್ತ ಸಾಲಿನಲ್ಲಿ ಐದನೇ ಮತ್ತು ಎಂಟನೇ ತರಗತಿಯ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆ ನಡೆಸುತ್ತಿರುವುದು ಉತ್ತಮವಾಗಿದೆ, ಆದರೆ ಪರೀಕ್ಷೆ ಪೂರ್ವ ತಯಾರಿಗೆ ಮಕ್ಕಳಿಗೆ ಪರೀಕ್ಷೆ ಬಗ್ಗೆ ಮಾಹಿತಿ ನೀಡಲು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ನೀಡುವುದು ಮಕ್ಕಳ ಕಲಿಕೆಯ ಪುನರಾವರ್ತನೆ ಗೆ ಅಗತ್ಯವಾಗಿದೆ. ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ಮಕ್ಕಳನ್ನು ಅನುತ್ತಿರಣಗೊಳಿಸದೆ ಪರಿಹಾರ ಬೋಧನೆ ನೀಡಿ, ಸಪ್ಲಿಮೆಂಟರಿ ಪರೀಕ್ಷೆ ಮಾಡಿ ಉತ್ತಿರಣಗೊಳಿಸಿ, ಮುಂದಿನ ತರಗತಿಗೆ ಅರ್ಹಗೊಳಿಸಬೇಕು.

Leave a Reply

Your email address will not be published. Required fields are marked *