ಚಿತ್ರದುರ್ಗ ಡಿ.16 :
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯಡಿ (PMFBY) 2020–21ರಿಂದ 2024–25ನೇ ಸಾಲಿನವರೆಗೆ ಚಿತ್ರದುರ್ಗ ಜಿಲ್ಲೆಯ ರೈತರಿಗೆ ಒಟ್ಟು ರೂ.559.91 ಕೋಟಿ ಬೆಳೆ ವಿಮಾ ಪರಿಹಾರ ವಿತರಿಸಲಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವ ಶ್ರೀ ರಾಮನಾಥ ಟಾಕೂರ್ ಅವರು ಸಂಸತ್ತಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಸಂಸದ ಗೋವಿಂದ ಎಂ. ಕಾರಜೋಳ ಅವರು ಸಂಸತ್ ಅಧಿವೇಶನದಲ್ಲಿ ಕೇಂದ್ರ ಕೃಷಿ ಸಚಿವರಿಗೆ ಪ್ರಶ್ನೆಗಳನ್ನು ಕೇಳಿದ್ದರು. 2024–25ನೇ ಸಾಲಿನ ಬೆಳೆ ವಿಮಾ ದಾವೆಗಳ ಕುರಿತು ರೈತರಿಂದ ಸರ್ಕಾರಕ್ಕೆ ದೂರುಗಳು ಬಂದಿವೆಯೇ, ಬೆಳೆ ಹಾನಿಯ ನಿಖರ ಅಂದಾಜಿಗೆ ಕೈಗೊಳ್ಳಲಾಗುತ್ತಿರುವ ಕ್ರಮಗಳೇನು, ಕಳೆದ ಐದು ವರ್ಷಗಳಲ್ಲಿ ಕರ್ನಾಟಕದ ಜಿಲ್ಲಾವಾರು ವಿಮಾ ಪರಿಹಾರದ ವಿವರಗಳು ಹಾಗೂ ವಿಮಾ ದಾವೆಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಅವರು ಪ್ರಶ್ನಿಸಿದರು.
ಸಂಸದರ ಪ್ರಶ್ನೆಗೆ ಉತ್ತರಿಸಿದ ಸಚಿವ ರಾಮನಾಥ ಟಾಕೂರ್ ಅವರು, ಚಿತ್ರದುರ್ಗ ಜಿಲ್ಲೆಯಲ್ಲಿ 5,81,527 ರೈತರು ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯಲ್ಲಿ ನೋಂದಣಿ ಮಾಡಿಕೊಂಡಿದ್ದು, ಸುಮಾರು ರೂ.80 ಕೋಟಿ ಪ್ರೀಮಿಯಂ ಪಾವತಿಸಿದ್ದಾರೆ. ಈ ಪೈಕಿ 2,48,212 ರೈತರಿಗೆ ರೂ.559.91 ಕೋಟಿ ವಿಮಾ ಪರಿಹಾರ ದೊರೆತಿದೆ ಎಂದು ಮಾಹಿತಿ ನೀಡಿದರು.
ರಾಜ್ಯ ಮಟ್ಟದಲ್ಲಿ, 1,29,95,086 ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಂಡಿದ್ದು, ರೂ.1,584 ಕೋಟಿ ಪ್ರೀಮಿಯಂ ಪಾವತಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಕರ್ನಾಟಕದ ರೈತರಿಗೆ ಒಟ್ಟು ಸುಮಾರು ರೂ.10,000 ಕೋಟಿ ಬೆಳೆ ವಿಮಾ ಪರಿಹಾರ ದೊರೆತಿದೆ ಎಂದು ಸಚಿವರು ತಿಳಿಸಿದರು.
ವಿಮಾ ಕಂಪನಿಗಳು ನಿಗದಿತ ಅವಧಿಯೊಳಗೆ ದಾವೆ ಪಾವತಿಸದಿದ್ದರೆ, ಮುಂಗಾರು 2024ರಿಂದ ರಾಷ್ಟ್ರೀಯ ಬೆಳೆ ವಿಮೆ ಪೋರ್ಟಲ್ (NCIP) ಮೂಲಕ ಶೇಕಡಾ 12ರಷ್ಟು ದಂಡವನ್ನು ಸ್ವಯಂಚಾಲಿತವಾಗಿ ವಿಧಿಸಲಾಗುತ್ತಿದೆ. ಇದೇ ರೀತಿ ರಾಜ್ಯ ಸರ್ಕಾರವೂ ತನ್ನ ಪ್ರೀಮಿಯಂ ಸಬ್ಸಿಡಿಯನ್ನು ವಿಳಂಬವಾಗಿ ಬಿಡುಗಡೆ ಮಾಡಿದಲ್ಲಿ, ರಾಜ್ಯ ಸರ್ಕಾರಕ್ಕೂ ಸಹ ಶೇಕಡಾ 12ರಷ್ಟು ದಂಡ ವಿಧಿಸುವ ವ್ಯವಸ್ಥೆ ಈ ಯೋಜನೆಯಲ್ಲಿ ಅಳವಡಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ರೈತರಿಗೆ ಯೋಜನೆಯ ಕುರಿತು ಹೆಚ್ಚಿನ ಅರಿವು ಮೂಡಿಸಲು, ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳು, ವಿಮಾ ಕಂಪನಿಗಳು, ಹಣಕಾಸು ಸಂಸ್ಥೆಗಳು ಹಾಗೂ ಸಾಮಾನ್ಯ ಸೇವಾ ಕೇಂದ್ರಗಳ (CSC) ಜಾಲದ ಮೂಲಕ ಜಾಗೃತಿ ಚಟುವಟಿಕೆಗಳಿಗೆ ಸಕ್ರಿಯ ಬೆಂಬಲ ನೀಡುತ್ತಿದೆ. ಮುಂಗಾರು 2021ರಿಂದ ‘ಬೆಳೆ ವಿಮಾ ವಾರ’ ಅಥವಾ ‘ಫಸಲ್ ಭಿಮಾ ಸಪ್ತಾಹ’ ಎಂಬ ಸಂರಚಿತ ಜಾಗೃತಿ ಅಭಿಯಾನ ಆರಂಭಿಸಲಾಗಿದ್ದು, ಗ್ರಾಮ ಪಂಚಾಯತ್ ಮಟ್ಟದಲ್ಲಿ ಫಸಲ್ ಭಿಮಾ ಪಾಠಶಾಲೆಗಳು ಆಯೋಜಿಸಲಾಗುತ್ತಿವೆ.
ಇದಲ್ಲದೆ, ಯೋಜನೆಯಡಿ ನೋಂದಾಯಿತ ರೈತರಿಗೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ವಿಶೇಷ ಶಿಬಿರಗಳ ಮೂಲಕ ಬೆಳೆ ವಿಮೆ ಪಾಲಿಸಿಯ ಮುದ್ರಿತ ಪ್ರತಿಗಳನ್ನು ವಿತರಿಸಲಾಗುತ್ತಿದೆ ಎಂದು ಕೇಂದ್ರ ಕೃಷಿ ಸಚಿವರು ಸಂಸತ್ತಿಗೆ ಮಾಹಿತಿ ನೀಡಿದ್ದಾರೆ.