108 ಅಡಿ ಎತ್ತರದ ಆದಿ ಗುರು ಶಂಕರಾಚಾರ್ಯರ ಪ್ರತಿಮೆ: ಸೆ.​ 21ರಂದು ಸಿಎಂ ಶಿವರಾಜ್​ ಸಿಂಗ್​ ಚೌಹಾಣ್ ಅನಾವರಣ

ಮಧ್ಯಪ್ರದೇಶದಲ್ಲಿ ಸಿಎಂ ಶಿವರಾಜ್ ಸಿಂಗ್​ ಚೌಹಾಣ್​ ಅವರು 108 ಅಡಿ ಎತ್ತರದ ಆದಿಗುರು ಶಂಕರಾಚಾರ್ಯರ ಪ್ರತಿಮೆಯನ್ನು ಸೆಪ್ಟೆಂಬರ್ 21ರಂದು ಅನಾವರಣಗೊಳಿಸಲಿದ್ದಾರೆ.

ಭೋಪಾಲ್ (ಮಧ್ಯಪ್ರದೇಶ ): ಇಲ್ಲಿನ ಪ್ರಮುಖ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಓಂಕಾರೇಶ್ವರ ದೇವಾಲಯದ ಬಳಿ ನಿರ್ಮಿಸಲಾಗಿರುವ ತತ್ವಜ್ಞಾನಿ, ಆಚಾರ್ಯತ್ರಯರಲ್ಲಿ ಮೊದಲಿಗರಾದ ಶ್ರೀ ಆದಿ ಶಂಕರಾಚಾರ್ಯರ ಬೃಹತ್​ ಪ್ರತಿಮೆಯನ್ನು ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾನ್​ ಅನಾವರಣಗೊಳಿಸಲಿದ್ದಾರೆ.

ಖಂಡ್ವಾ ಜಿಲ್ಲೆಯ ಓಂಕಾರೇಶ್ವರದ ನರ್ಮದಾ ನದಿ ತೀರದ ಮಾಂಧಾತಾ ಬೆಟ್ಟದಲ್ಲಿ ನಿರ್ಮಿಸಲಾಗಿರುವ 108 ಅಡಿ ಎತ್ತರದ ಆದಿ ಶಂಕರರ ಮೂರ್ತಿಯನ್ನು ಸೆಪ್ಟೆಂಬರ್​ 21ರಂದು ಲೋಕಾರ್ಪಣೆಗೊಳಿಸಲಾಗುತ್ತಿದೆ. ಎಂಟನೇ ಶತಮಾನ ಅದ್ವೈತ ಸಿದ್ಧಾಂತದ ಪ್ರತಿಪಾದಕರಾದ ಶಂಕರಚಾರ್ಯರ ಪ್ರತಿಮೆಯನ್ನು ಇಲ್ಲಿನ ಓಂಕಾರೇಶ್ವರನಿಗೆ ಅರ್ಪಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಂಕರಾಚಾರ್ಯರು ಸನಾತನ ಧರ್ಮದ ಉಳಿವಿಗಾಗಿ ಕಾಲ್ನಡಿಗೆಯಲ್ಲೇ ದೇಶಾದ್ಯಂತ ಸಂಚರಿಸಿ ತಮ್ಮ ಸಿದ್ಧಾಂತವನ್ನು ಪ್ರತಿಪಾದಿಸಿದರು. ಇವರಿಗೆ ಗೌರವವನ್ನು ಸಲ್ಲಿಸುವ ಉದ್ದೇಶದಿಂದ ಮಧ್ಯಪ್ರದೇಶ ಸರ್ಕಾರವು 108 ಅಡಿ ಎತ್ತರದ ಶಂಕರಾಚಾರ್ಯರ ಮೂರ್ತಿಯನ್ನು ಸ್ಥಾಪಿಸಿದೆ. ಈ ಪ್ರತಿಮೆಯನ್ನು ಏಕಾತ್ಮಕಾ ಕಿ ಪ್ರತಿಮಾ(ಏಕತ್ವದ ಪ್ರತಿಮೆ) ಎಂದು ಕರೆಯಲಾಗಿದ್ದು, ಮಾಂಧಾತಾ ಬೆಟ್ಟ ತುದಿಯಲ್ಲಿ ನಿರ್ಮಾಣ ಮಾಡಲಾಗಿದೆ.

ಈ ಪ್ರತಿಮೆಯನ್ನು ಸಿಎಂ ಶಿವರಾಜ್ ಚೌಹಾನ್​ ಸೆಪ್ಟೆಂಬರ್​ 18ರಂದು ಲೋಕಾರ್ಪಣೆಗೊಳಿಸಬೇಕಿತ್ತು. ಆದರೆ ಈ ಪ್ರದೇಶದಲ್ಲಿ ಭಾರಿ ಮಳೆ ಸುರಿದಿದ್ದರಿಂದ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಇದೀಗ ಸೆಪ್ಟೆಂಬರ್​ 21ರಂದು ಶಂಕರಾಚಾರ್ಯರ ಪ್ರತಿಮೆಯನ್ನು ಲೋಕಾರ್ಪಣೆ ಮಾಡುತ್ತಿದ್ದಾರೆ.

ಈ ಪ್ರತಿಮೆಯನ್ನು ಆಚಾರ್ಯ ಶಂಕರ್ ಸಾಂಸ್ಕೃತಿಕ ಏಕತಾ ನ್ಯಾಸ್ ಮತ್ತು ಮಧ್ಯಪ್ರದೇಶ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಎಂಪಿಎಸ್‌ಟಿಡಿಸಿ) ಮಾರ್ಗದರ್ಶನದಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಪ್ರತಿಮೆಯು ಆದಿ ಶಂಕರಾಚಾರ್ಯರ ಪರಂಪರೆ ಮತ್ತು ಅವರ ಆಳವಾದ ಬೋಧನೆಗಳನ್ನು ಪ್ರತಿಬಿಂಬಿಸುತ್ತದೆ.

ಆದಿ ಶಂಕರಾಚಾರ್ಯರ ಜೀವನ ಮತ್ತು ತತ್ತ್ವಶಾಸ್ತ್ರವನ್ನು ಗೌರವಿಸಲು ಈ ಪ್ರತಿಮೆಯನ್ನು ಮಾಡಲಾಗಿದೆ. ಆದಿ ಗುರು ಶಂಕರಾಚಾರ್ಯರ ಅದ್ವೈತ ಸಿದ್ಧಾಂತ ಮತ್ತು ಬ್ರಹ್ಮಸೂತ್ರ ಭಾಷ್ಯದ ವ್ಯಾಖ್ಯಾನಕ್ಕೆ ಸಂದುವ ಗೌರವವಾಗಿದೆ ಎಂದು ಯೋಜನೆ ರಚನೆಕಾರ ಸಿಪಿ ಕುಕ್ರೇಜಾ ಆರ್ಕಿಟೆಕ್ಟ್ಸ್‌ನ ಪ್ರಾಂಶುಪಾಲ ದಿಕ್ಷು ಕುಕ್ರೇಜಾ ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಸಾಂಸ್ಕೃತಿಕ ಯೋಜನೆಯು ಪ್ರಧಾನಿ ನರೇಂದ್ರ ಮೋದಿಯವರ ವಸುಧೈವ ಕುಟುಂಬಕಂ ಎಂಬ ದೃಷ್ಟಿಕೋನವನ್ನು ಸಾಕಾರ ಮಾಡುತ್ತದೆ. 108 ಅಡಿ ಎತ್ತರದ ಪ್ರತಿಮೆಯೊಂದಿಗೆ ಮಧ್ಯಪ್ರದೇಶವು ಎಲ್ಲಾ ಧರ್ಮಗಳ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕೇಂದ್ರವಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮಧ್ಯಪ್ರದೇಶದ ಬಿಜೆಪಿ ಸರ್ಕಾರವು ಈ ಹಿಂದೆ ಓಂಕಾರೇಶ್ವರದಲ್ಲಿ ಮ್ಯೂಸಿಯಂ ಜೊತೆಗೆ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ನಿರ್ಮಿಸಲು 2,141.85 ಕೋಟಿ ರೂಪಾಯಿಗಳ ಯೋಜನೆಗೆ ಅನುಮೋದನೆ ನೀಡಿತ್ತು.

ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk

ನಮ್ಮ Facebook page: https://www.facebook.com/samagrasudii

Source : https://m.dailyhunt.in/news/india/kannada/etvbhar9348944527258-epaper-etvbhkn/108+adi+ettaradha+aadi+guru+shankaraachaaryara+pratime+se+21randu+siem+shivaraaj+sing+chouhaan+anaavarana-newsid-n539293968?listname=newspaperLanding&topic=homenews&index=13&topicIndex=0&mode=pwa&action=click

Leave a Reply

Your email address will not be published. Required fields are marked *