ವಿಕ್ಸ್ ಡಬ್ಬದ ಮುಚ್ಚಳ ನುಂಗಿ 14 ತಿಂಗಳ ಮಗು ಸಾವು; ಮದುವೆಯಾಗಿ 18ವರ್ಷಗಳ ಬಳಿಕ ಜನಿಸಿದ ಮಗುವಿನ ದುರಂತ ಅಂತ್ಯ.

ರಾಜಸ್ಥಾನ: ಆಟವಾಡುತ್ತಲೇ ವಿಕ್ಸ್ ಡಬ್ಬದ ಮುಚ್ಚಳ ನುಂಗಿ 14 ತಿಂಗಳ ಮಗು ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಬನ್ಸ್ವಾರಾದಲ್ಲಿ ನಡೆದಿದೆ. ಮದುವೆಯಾಗಿ 18 ವರ್ಷಗಳ ಬಳಿಕ ಹುಟ್ಟಿದ ಮಗು ಈಗ ದುರಂತ ಅಂತ್ಯ ಕಂಡಿದ್ದು, ಪೋಷಕರ ಆಕ್ರೋಶ ಮುಗಿಲು ಮುಟ್ಟಿದೆ.

ಸರೆಡಿ ಗ್ರಾಮದ ನಿವಾಸಿ ಹೀರೆನ್ ಜೋಶಿ ಅವರ ಮಗ ಮಾನ್ವಿಕ್(14 ತಿಂಗಳು) ಸೋಮವಾರ ರಾತ್ರಿ ಮನೆಯಲ್ಲಿದ್ದ ವಿಕ್ಸ್ ಡಬ್ಬಿಯ ಜೊತೆಗೆ ಆಟವಾಡುತ್ತಿದ್ದನು. ಮಗು ಆಟವಾಡುತ್ತಿರುವುದನ್ನು ಗಮನಿಸದ ಪೋಷಕರು ತಮ್ಮದೇ ಕೆಲಸದಲ್ಲಿ ತೊಡಗಿದ್ದಾರೆ. ಆದರೆ ಇದಕ್ಕಿದ್ದಂತೆ ಮಗು ಉಸಿರಾಡಲು ಸಾಧ್ಯವಾಗದೇ ನೆಲದಲ್ಲಿ ಬಿದ್ದು ಹೊರಲಾಡುತ್ತಿರುವುದು ಕಂಡುಬಂದಿದೆ. ಈ ವೇಳೆ ಮಗುವಿನ ಪೋಷಕರು ಪರಿಶೀಲಿಸಿದಾಗ ಗಂಟಲಲ್ಲಿ ವಿಕ್ಸ್ ಡಬ್ಬದ ಮುಚ್ಚಳ ಪತ್ತೆಯಾಗಿದೆ.

ಪ್ರಾರಂಭದಲ್ಲಿ ಮಗುವಿನ ಪೋಷಕರು ಮುಚ್ಚಳ ತೆಗೆಯಲು ಪ್ರಯತ್ನಿಸಿದ್ದಾರೆ, ಆದರೆ ಸಾಧ್ಯವಾಗದೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಿದ್ದಾರೆ. ಆದರೆ ಅಲ್ಲಿ ವೈದ್ಯರು ಸಿಗದ ಕಾರಣ ಪೋಷಕರು ಮಗುವನ್ನು ಬಾಂಸ್ವಾಡ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗಲೇ ದಾರಿ ಮಧ್ಯೆ ಮಗು ಉಸಿರು ಚೆಲ್ಲಿದೆ.

ವೈದ್ಯರಿಲ್ಲದ ಕಾರಣ ಸಕಾಲಕ್ಕೆ ಚಿಕಿತ್ಸೆ ದೊರೆಯದೆ ಮಗು ಪ್ರಾಣ ಕಳೆದುಕೊಂಡಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ತಡರಾತ್ರಿ ಕುಟುಂಬಸ್ಥರು ಹಾಗೂ ಸ್ಥಳೀಯರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದ್ದಾರೆ. ಮೃತ ಮಗುವಿನ ತಂದೆ ಹಿರೇನ್ ಜೋಶಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದು, ಇವರಿಗೆ ಈಗಾಗಲೇ ಎರಡು ಹೆಣ್ಣು ಮಕ್ಕಳಿದ್ದಾರೆ. ಆದರೆ ಗಂಡು ಮಗನಿಗಾಗಿ 18ವರ್ಷಗಳಿಂದ ಹಾತೊರೆಯುತ್ತಿದ್ದರು. ಅದರಂತೆ ಗಂಡು ಮಗು ಜನಿಸಿದ್ದು, ಇದೀಗ ಮಗುವಿನ ಅಕಾಲಿಕ ಸಾವು ತೀವ್ರ ಅಘಾತ ಉಂಟುಮಾಡಿದೆ.

Source : https://tv9kannada.com/trending/14-month-old-dies-after-swallowing-vicks-lid-rajasthan-tragedy-aks-951257.html

Leave a Reply

Your email address will not be published. Required fields are marked *