
25 ವರ್ಷಗಳ ಬಳಿಕ ಸೇಡು ತೀರಿಸಿಕೊಂಡ ಭಾರತ
ದುಬೈ: ಕೊನೆಗೂ 140 ಕೋಟಿ ಭಾರತೀಯರ ಕನಸು ನನಸಾಗಿದೆ. ನ್ಯೂಜಿಲೆಂಡ್ (New Zealand) ವಿರುದ್ಧ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ 4 ವಿಕೆಟ್‌ಗಳ ಗೆಲುವು ಸಾಧಿಸುವ ಮೂಲಕ ಭಾರತ 3ನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ (Champions Trophy) ಕಿರೀಟ ಮುಡಿಗೇರಿಸಿಕೊಂಡಿದೆ. 2024ರಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟಿ20 ವಿಶ್ವಕಪ್ ಗೆದ್ದಿದ್ದ ಭಾರತಕ್ಕಿದು ಸತತ 2ನೇ ಐಸಿಸಿ ಟ್ರೋಫಿ ಆಗಿರುವುದು ವಿಶೇಷ.

ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 251 ರನ್ ಗಳಿಸಿತ್ತು. ಸ್ಪರ್ಧಾತ್ಮಕ ಮೊತ್ತದ ಗುರಿ ಬೆನ್ನಟ್ಟಿದ ಭಾರತ (Team India) 49 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 254 ರನ್ ಗಳಿಸಿ ಗೆಲುವು ಸಾಧಿಸಿತು. ಸಂಘಟಿತ ಬೌಲಿಂಗ್, ಬ್ಯಾಟಿಂಗ್ ಪ್ರದರ್ಶನದೊಂದಿಗೆ 2000 ಇಸವಿಯಲ್ಲಿ ಕಿವೀಸ್ ವಿರುದ್ಧ ಫೈನಲ್ ಸೋಲಿಗೆ ಸೇಡು ತೀರಿಸಿಕೊಂಡಿತು.

1998-99ರ ಚೊಚ್ಚಲ ಆವೃತ್ತಿಯಲ್ಲೇ ಚೋಕರ್ಸ್ ದಕ್ಷಿಣ ಆಫ್ರಿಕಾ ಟ್ರೋಫಿ ಮುಡಿಗೇರಿಸಿಕೊಂಡಿತ್ತು. 2000-01ರ ಆವೃತ್ತಿಯಲ್ಲಿ ನ್ಯೂಜಿಲೆಂಡ್ ಟ್ರೋಫಿ ಗೆದ್ದುಕೊಂಡಿತ್ತು. ಆದ್ರೆ 2002-03ರ ಆವೃತ್ತಿಯಲ್ಲಿ 2 ದಿನ ಫೈನಲ್ ನಡೆದರೂ ಮಳೆಗೆ ಪಂದ್ಯ ಬಲಿಯಾಯ್ತು. ಆದ್ದರಿಂದ ಭಾರತ ಮತ್ತು ಶ್ರೀಲಂಕಾವನ್ನ ಜಂಟಿಯಾಗಿ ಚಾಂಪಿಯನ್ಸ್ ಎಂದು ಘೋಷಿಸಲಾಯಿತು. ಇನ್ನೂ 2004ರಲ್ಲಿ ವೆಸ್ಟ್ ಇಂಡೀಸ್, 2006-07, 2009-10ರಲ್ಲಿ ಆಸ್ಟ್ರೇಲಿಯಾ, 2013ರಲ್ಲಿ ಭಾರತ, 2017ರಲ್ಲಿ ಪಾಕಿಸ್ತಾನ ಚಾಂಪಿಯನ್ ಆಗಿತ್ತು. 2000, 2017ರಲ್ಲಿ ಭಾರತ ಫೈನಲ್ ತಲುಪಿದ್ರೂ ಟ್ರೋಫಿ ಗೆಲ್ಲುವ ಅವಕಾಶ ಕಳೆದುಕೊಂಡಿತ್ತು. 2000 ಇಸವಿಯಲ್ಲಿ ಕಿವೀಸ್ ವಿರುದ್ಧ, 2017ರಲ್ಲಿ ಪಾಕಿಸ್ತಾನದ ವಿರುದ್ಧ ಫೈನಲ್‌ನಲ್ಲಿ ಸೋತು ನಿರಾಸೆ ಅನುಭವಿಸಿತ್ತು. ಸದ್ಯ 25 ವರ್ಷಗಳ ಬಳಿಕ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಿವೀಸ್ ವಿರುದ್ಧ ಗೆದ್ದು ಭಾರತ ಸೇಡು ತೀರಿಸಿಕೊಂಡಿದೆ.

ದಾಖಲೆಯ ಶತಕದ ಜೊತೆಯಾಟ:
ಚೇಸಿಂಗ್ ಆರಂಭಿಸಿದ ಟೀಂ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ (Rohit Sharma), ಶುಭಮನ್ ಗಿಲ್ ಸ್ಫೋಟಕ ಇನ್ನಿಂಗ್ಸ್ ಕಟ್ಟುವಲ್ಲಿ ಯಶಸ್ವಿಯಾದರು. 112 ಎಸೆತಗಳಲ್ಲಿ ಈ ಜೋಡಿ 105 ರನ್‌ಗಳ ಜೊತೆಯಾಟ ನೀಡಿತು. ಈ ಮೂಲಕ ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲೇ ಫೈನಲ್ ಪಂದ್ಯದಲ್ಲಿ ಶತಕದ ಜೊತೆಯಾಟ ಎಂಬ ದಾಖಲೆಗೂ ರೋಹಿತ್ ಗಿಲ್ ಪಾತ್ರರಾದರು. ಗಿಲ್ 50 ಎಸೆತಗಳಲ್ಲಿ 31 ರನ್ ಗಳಿಸಿ ಔಟಾದರು. ಈ ಬೆನ್ನಲ್ಲೇ ವಿರಾಟ್ ಕೊಹ್ಲಿ ಕೇವಲ 1 ರನ್ ಗಳಿಸಿ ಎಲ್‌ಬಿಡಬ್ಲ್ಯೂಗೆ ತುತ್ತಾದರು. ಆ ಬಳಿಕವೂ ಕಿವೀಸ್ ಬೌಲರ್‌ಗಳನ್ನು ಬೆಂಡೆತ್ತಿದ ರೋಹಿತ್ 76 ರನ್ (83 ಎಸೆತ, 3 ಸಿಕ್ಸರ್, 7 ಬೌಂಡರಿ) ಗಳಿಸಿ ಪೆವಿಲಿಯನ್‌ಗೆ ಮರಳಿದರು.
Source : https://publictv.in/icc-champions-trophy-2025-team-india-wins-champions-trophy-for-the-3rd-time