ತರಗತಿಯಲ್ಲಿ ಹೃದಯಾಘಾತ : 15 ವರ್ಷದ ವಿದ್ಯಾರ್ಥಿನಿ ಸಾವು,ವಿಡಿಯೊ ವೈರಲ್

ಹೈದರಾಬಾದ್, ಡಿ.14

ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ, ವಿದ್ಯಾರ್ಥಿನಿಯೊಬ್ಬಳು ತರಗತಿಯಲ್ಲಿ ಪಾಠ ಕೇಳುತ್ತಿದ್ದ ವೇಳೆ ಏಕಾಏಕಿ ಕುಸಿದುಬಿದ್ದು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಆಂಧ್ರ ಪ್ರದೇಶದ ಕೊನಸೀಮಾ ಜಿಲ್ಲೆಯ ರಾಮಚಂದ್ರಪುರಂನಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿನಿಯನ್ನು ನಲ್ಲಮಿಲ್ಲಿ ಸಿರಿ (15) ಎಂದು ಗುರುತಿಸಲಾಗಿದೆ. ಶನಿವಾರ ಬೆಳಿಗ್ಗೆ ಸುಮಾರು 9.45ರ ಸಮಯದಲ್ಲಿ, ತರಗತಿಯಲ್ಲಿ ಪ್ರಾಧ್ಯಾಪಕರು ಪಾಠ ಮಾಡುತ್ತಿದ್ದ ವೇಳೆ ಮೊದಲ ಬೆಂಚಿನಲ್ಲಿ ಕುಳಿತು ಶ್ರದ್ಧೆಯಿಂದ ಪಾಠ ಕೇಳುತ್ತಿದ್ದ ಸಿರಿಗೆ ಇದ್ದಕ್ಕಿದ್ದಂತೆ ಹೃದಯಾಘಾತ ಸಂಭವಿಸಿದೆ.

ವಿದ್ಯಾರ್ಥಿನಿ ಏಕಾಏಕಿ ಕುಸಿದುಬೀಳುವ ದೃಶ್ಯ ತರಗತಿಯಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಡಿಯೊದಲ್ಲಿ, ಬೋರ್ಡ್ ಮೇಲೆ ಬರೆಯುತ್ತಿದ್ದ ಪ್ರಾಧ್ಯಾಪಕರು ತಕ್ಷಣ ಧಾವಿಸಿ ಬಂದು ಆಕೆಯನ್ನು ಎತ್ತಿಕೊಳ್ಳುವ ದೃಶ್ಯಗಳು ಕಾಣಿಸುತ್ತವೆ. ಇತರ ವಿದ್ಯಾರ್ಥಿಗಳೂ ಸಹ ಸಹಾಯಕ್ಕೆ ಮುಂದಾಗಿದ್ದಾರೆ.

ತಕ್ಷಣವೇ ನಲ್ಲಮಿಲ್ಲಿ ಸಿರಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಆಕೆ ಈಗಾಗಲೇ ಮೃತಪಟ್ಟಿದ್ದಾಳೆ ಎಂದು ಘೋಷಿಸಿದರು. ಸಿರಿ ಕೊನಸೀಮಾ ಜಿಲ್ಲೆಯ ಪಸಲಪುಡಿ ಗ್ರಾಮದ ನಿವಾಸಿ ಆಗಿದ್ದಾಳೆ.

ಈ ಘಟನೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚಿಕ್ಕ ವಯಸ್ಸಿನಲ್ಲೇ ವಿದ್ಯಾರ್ಥಿನಿಯ ಅಗಲಿಕೆಗೆ ನೆಟ್ಟಿಗರು ತೀವ್ರ ದುಃಖ ಮತ್ತು ಆಘಾತ ವ್ಯಕ್ತಪಡಿಸುತ್ತಿದ್ದಾರೆ.

Leave a Reply

Your email address will not be published. Required fields are marked *