ನಾಗ್ಪುರ್: ಹಿಟ್ & ರನ್ ಘಟನೆಯಲ್ಲಿ ಕೊನೆಯುಸಿರೆಳೆದಿದ್ದ 82 ವರ್ಷದ ಹಿರಿಯ ವ್ಯಕ್ತಿಯೊಬ್ಬರ ಸಾವಿನ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಮಹತ್ವದ ಸುಳಿವು ಸಿಗುವ ಮೂಲಕ ಇದೊಂದು ವ್ಯವಸ್ಥಿತ ಕೊಲೆ ಎಂಬುದು ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.

300 ಕೋಟಿ ರೂ.ಮೌಲ್ಯದ ಆಸ್ತಿಗಾಗಿ ಹತ್ಯೆ:
ಕುಟುಂಬದ 300 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಲಪಟಾಯಿಸುವ ನಿಟ್ಟಿನಲ್ಲಿ ಸೊಸೆಯೇ ಮಾವನನ್ನು ಕೊಲೆ ಮಾಡಿಸಿರುವ ಘಟನೆ ಮಹಾರಾಷ್ಟ್ರದ ನಾಗ್ಪುರ್ ನಲ್ಲಿ ನಡೆದಿದೆ. ನಗರ ಯೋಜನಾ ಇಲಾಖೆಯ ಸಹಾಯಕ ನಿರ್ದೇಶಕಿಯಾಗಿರುವ ಅರ್ಚನಾ ಮನೀಶ್ ಪುಟ್ಟೇವಾರ್ ಎಂಬಾಕೆಯನ್ನು ಕಳೆದ ವಾರ ಬಂಧಿಸಲಾಗಿತ್ತು. ಪುರುಷೋತ್ತಮ್ ಪುಟ್ಟೇವಾರ್ ಅವರಿಗೆ ಕಾರನ್ನು ಡಿಕ್ಕಿ ಹೊಡೆಸಿ ಕೊಲ್ಲಿಸಲಾಗಿತ್ತು.
ಪೊಲೀಸರು ಪಿಟಿಐಗೆ ತಿಳಿಸಿರುವ ಮಾಹಿತಿ ಪ್ರಕಾರ, ಅರ್ಚನಾ ಪುಟ್ಟೇವಾರ್, ಮಾವನನ್ನು ಕೊಲೆಗೈಯಲು ಬಾಡಿಗೆ ಹಂತಕರನ್ನು ಕರೆಯಿಸಿ, ಒಂದು ಕೋಟಿ ರೂಪಾಯಿ ಹಣ ಪಾವತಿಸಿದ್ದಳು. ಈಗಾಗಲೇ ಬಳಸಿರುವ ಕಾರನ್ನು ಖರೀದಿಸಿ, ಮಾವನ ಹತ್ಯೆಗೆ ಸ್ಕೆಚ್ ಹಾಕಿದ್ದರು ಎಂದು ವರದಿ ತಿಳಿಸಿದೆ.
ಕೊಲೆಯನ್ನು ಅಪಘಾತ ಎಂದು ಬಿಂಬಿಸಲು ಎಲ್ಲಾ ರೀತಿಯ ಸನ್ನಿವೇಶ ಸೃಷ್ಟಿಸಿದ್ದರು. ತನ್ನ ಪತಿಯ ಕಾರು ಚಾಲಕ ಬಾಗ್ಡೇ ಹಾಗೂ ಇತರ ಇಬ್ಬರು ಆರೋಪಿಗಳಾದ ನೀರಜ್ ನಿಮ್ಜೇ, ಸಚಿನ್ ಧಾರ್ಮಿಕ್ ಜತೆಗೂಡಿ ಸಂಚು ರೂಪಿಸಲಾಗಿತ್ತು ಎಂದು ಪೊಲೀಸರ ವಿಚಾರಣೆಯಲ್ಲಿ ಬಹಿರಂಗವಾಗಿದೆ.
ಅಂದು ಏನಾಗಿತ್ತು?
ಪುರುಷೋತ್ತಮ್ ಪುಟ್ಟೇವಾರ್ ಅವರು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಪತ್ನಿ ಶಕುಂತಲಾ ಅವರ ಆರೋಗ್ಯ ವಿಚಾರಿಸಲು ತೆರಳಿದ್ದರು. ಆಸ್ಪತ್ರೆಯಿಂದ ಮನೆಗೆ ಮರಳುತ್ತಿದ್ದ ಪುರುಷೋತ್ತಮ್ ಅವರಿಗೆ ಬಾಡಿಗೆ ಕಾರಿನ ಮೂಲಕ ಡಿಕ್ಕಿ ಹೊಡೆಯಲಾಗಿತ್ತು. ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ನಂತರ ತನಿಖೆಯಲ್ಲಿ ಸತ್ಯ ಬಯಲಿಗೆ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಕಾರು, ಚಿನ್ನಾಭರಣ, ಮೊಬೈಲ್ ಫೋನ್ ಗಳನ್ನು ವಶಕ್ಕೆ ತೆಗೆದುಕೊಂಡಿದ್ದು, ಆರೋಪಿಗಳ ವಿರುದ್ಧ ಕೊಲೆ ಮತ್ತು ಮೋಟಾರು ವಾಹನ ಕಾಯ್ದೆಯಡಿ ಎಫ್ ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.