ಭಾರತ ಸರ್ಕಾರ ಆನ್ಲೈನ್ ಗೇಮಿಂಗ್ಗಳನ್ನು ನಿಷೇಧಿಸಿದೆ. ಇದರಿಂದ ಟೀಮ್ ಇಂಡಿಯಾದ ಪ್ರಾಯೋಜಕರಾಗಿದ್ದ ಡ್ರೀಮ್ ಇಲೆವೆನ್ ಹೆಸರನ್ನು ತೆಗೆದುಹಾಕು ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಈ ವೇಳೆ ಏಷ್ಯಾ ಕಪ್ಗೆ ಟೀಮ್ ಇಂಡಿಯಾ ಪ್ರಾಯೋಜಕತ್ವ ಇಲ್ಲದೆ ಕಣಕ್ಕೆ ಇಳಿಯುವ ಬಗ್ಗೆ ವರದಿಗಳು ಬಂದಿದ್ದವು.
ಆದರೆ ಈಗ ಬರುತ್ತಿರುವ ವರದಿಯ ಪ್ರಕಾರ ಟೀಮ್ ಇಂಡಿಯಾದ ಹೊಸ ಜೆರ್ಸಿಯಲ್ಲಿ ಕಂಪನಿಯ ಹೆಸರು ಹಾಗೂ ಹೊಸ ಲೋಗೋ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇದಕ್ಕಾಗಿ ಹಲವು ಕಂಪನಿಗಳು ಈಗಾಗಲೇ ಬಿಸಿಸಿಐಗೆ ಸಂಪರ್ಕಿಸಿವೆ ಎಂದು ತಿಳಿದು ಬಂದಿದೆ. ಏಷ್ಯಾ ಕಪ್ಗೆ ಮುನ್ನ ಟೀಮ್ ಇಂಡಿಯಾ ಜೆರ್ಸಿಗೆ ಹೊಸ ಪ್ರಾಯೋಕರ ಹುಡುಕಾಟ ನಡೆಸಿದೆ.
2023ರಲ್ಲಿ ಬಿಸಿಸಿಐ ಜೆರ್ಸಿ ಪ್ರಾಯೋಕಕತ್ವದ ಹಕ್ಕನ್ನು ಡ್ರೀಮ್ ಇಲೆವೆನ್ಗೆ 358 ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡು ನೀಡಿತ್ತು. ಆದರೆ ಇತ್ತೀಚಿಗೆ ಲೋಕಸಭೆಯಲ್ಲಿ ಸರ್ಕಾರ ಆನ್ಲೈನ್ ಗೇಮಿಂಗ್ಗೆ ಕಡಿವಾಣ ಹಾಕುವ ಕಾನೂನು ಜಾರಿಗೆ ತಂದ ಹಿನ್ನೆಲೆಯಲ್ಲಿ ಡ್ರೀಮ್ ಇಲೆವೆನ್ ಪ್ರಾಯೋಜಕತ್ವದಿಂದ ತನ್ನ ಹೆಸರನ್ನು ಹಿಂದೆ ತೆಗೆದುಕೊಳ್ಳಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ವೇಳೆ ಹೊಸ ಪ್ರಾಯೋಜಕರ ಹುಡುಕಾಟ ಸಹ ಭರದಿಂದ ನಡೆದಿದೆ.
ಟೀಮ್ ಇಂಡಿಯಾದ ಜೆರ್ಸಿಗಾಗಿ ಟೀಮ್ ಇಂಡಿಯಾವನ್ನು ಪ್ರಾಯೋಜಿಸಲು ಎರಡು ಕಂಪನಿಗಳು ಆಸಕ್ತಿ ತೋರಿಸಿವೆ ಎಂದು ತಿಳಿದು ಬಂದಿದೆ. ಈ ಎರಡು ಕಂಪನಿಗಳೆಂದರೆ ಟೊಯೋಟಾ ಮತ್ತು ಫಿನ್ಟೆಕ್. ಬಿಸಿಸಿಐ ಟೊಯೋಟಾ ಮೋಟಾರ್ ಕಾರ್ಪೊರೇಷನ್ನೊಂದಿಗೆ ಹೊಸ ಪ್ರಾಯೋಜಕತ್ವಕ್ಕೆ ಸಹಿ ಹಾಕಬಹುದು ಎಂಬ ಸುದ್ದಿ ಹರಿದಾಡುತ್ತಿದೆ. ಸ್ಟಾರ್ಟ್-ಅಪ್ ಕಂಪನಿ ಫಿನ್ಟೆಕ್ ಕೂಡ ಬಿಸಿಸಿಐ ಜೊತೆ ಒಪ್ಪಂದ ಮಾಡಿಕೊಳ್ಳಲು ತುದಿಗಾಲಿನಲ್ಲಿ ನಿಂತಿದೆ ಎಂದು ತಿಳಿದು ಬಂದಿದೆ.
ಸರ್ಕಾರದ ನಿಲುವಿಗೆ ಬದ್ಧ
ಸೆಪ್ಟಂಬರ್ 9 ರಿಂದ ಯುಎಇನಲ್ಲಿ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ. ಇದಕ್ಕೂ ಮುನ್ನ ಬಿಸಿಸಿಐ ಹೊಸ ಪ್ರಾಯೋಜಕರನ್ನು ಹುಡುಕುತ್ತಿದೆ. ಆದರೆ ಡ್ರೀಮ್ ಇಲೆವೆನ್ನಿಂದ ಇನ್ನು ಅಧಿಕೃತ ಪ್ರಕಟಣೆ ಬರುವುದು ಬಾಕಿ ಇದೆ. ಇನ್ನು ಬಿಸಿಸಿಐ ಮೂಲಗಳ ಪ್ರಕಾರ, ಸರ್ಕಾರದ ಅನುಮತಿಯಿಲ್ಲದ ಯಾವುದನ್ನು ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. ಅಂದರೆ ಡ್ರೀಮ್ ಇಲೆವೆನ್ ಪ್ರಾಯೋಜಕತ್ವ ಮಾಡುವುದು ಸಾಧ್ಯವಿಲ್ಲ ಎಂದು ಇವರ ಮಾತುಗಳಿಂದ ಸ್ಪಷ್ಟವಾಗಿದೆ.
Views: 19