ಕೊಡಗಿನಲ್ಲಿ ವ್ಯಾಪಕ ಮಳೆ: ಹಾರಂಗಿ ಜಲಾಶಯದಿಂದ 20 ಸಾವಿರ ಕ್ಯೂಸೆಕ್​ ನೀರು ಬಿಡುಗಡೆ

ಕೊಡಗಿನಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಕಾವೇರಿ ನದಿ ನೀರಿನ ಮಟ್ಟ ಹೆಚ್ಚಾಗಿದೆ. ಹಾರಂಗಿ ಅಣೆಕಟ್ಟೆಯಿಂದ ನೀರು ಹೊರಬಿಡಲಾಗಿದೆ.

ಕೊಡಗು : ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ನಿರಂತರ ಮಳೆಯಾಗುತ್ತಿದ್ದು, ಜೀವನದಿ ಕಾವೇರಿ ನೀರಿನ ಮಟ್ಟ ಏರಿಕೆಯಾಗಿದೆ.

ಕುಶಾಲನಗರದ ಹಾರಂಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಜಲಾಶಯದಿಂದ ಶನಿವಾರ 4 ಕ್ರೆಸ್ಟ್ ಗೇಟ್​ಗಳ‌ ಮೂಲಕ 20,000 ಕ್ಯೂಸೆಕ್ ನೀರು ಹೊರಬಿಡಲಾಗಿದೆ.

ಹಂತಹಂತವಾಗಿ ಹೆಚ್ಚುವರಿ ನೀರು ಹರಿಸಲಾಗುವುದು. ನದಿಗೆ ನೀರು ಬಿಟ್ಟಿರುವ ಕಾರಣ ನದಿಪಾತ್ರದಲ್ಲಿ ವಾಸಿಸುವ ಜನರು ನೀರಿಗಿಳಿಯದಂತೆ ಎಚ್ಚರಿಕೆ ವಹಿಸಬೇಕು ಎಂದು ಇಂಜಿನಿಯರ್ ತಿಳಿಸಿದರು.

ಶಿರಸಿ ಮಳೆ ವರದಿ: ಭಾರಿ ಮಳೆಯಿಂದಾಗಿ ಮನೆ ಮೇಲೆ ಮರ ಬಿದ್ದು, ಒಂದು ತಿಂಗಳ ಮಗುವಿಗೆ ಗಾಯವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.‌ ಹುಣಸೇಕೊಪ್ಪ ಪಂಚಾಯತಿ ವ್ಯಾಪ್ತಿಯ ಹನುಮಂತಿಯ ಗಣಪತಿ ಹನುಮಂತ ಗೌಡ ಎಂಬವರ ಮನೆ ಮೇಲೆ ಶನಿವಾರ ಮಧ್ಯಾಹ್ನ ಮರ ಬಿದ್ದಿದೆ. ಮನೆ ಭಾಗಶಃ ಜಖಂಗೊಂಡಿದೆ. ಶಿರಸಿಯಲ್ಲಿ ಮನೆ ಮೇಲೆ ಮರ ಬಿದ್ದು ಹಾನಿಯಾಗಿರುವುದು.

ಘಟನೆಯಲ್ಲಿ ಮನೆಯಲ್ಲಿದ್ದ 1 ತಿಂಗಳು 5 ದಿವಸದ ಮಗುವಿಗೆ ಗಾಯವಾಗಿದ್ದು, ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯಾಧಿಕಾರಿಗಳು ಮಗುವಿಗೆ ಯಾವುದೇ ಸಮಸ್ಯೆ ಇಲ್ಲವೆಂದು ತಿಳಿಸಿದ್ದಾರೆ. ಕಳೆದ ಒಂದು ವಾರದಿಂದ ಮನೆ, ರಸ್ತೆಗಳಿಗೆ ಹಾನಿಯಾಗಿದ್ದು, ಶಿರಸಿ ತಾಲೂಕೊಂದರಲ್ಲೇ 4 ಲಕ್ಷ ರೂ.ಗೂ ಅಧಿಕ ನಷ್ಟ ಉಂಟಾಗಿದೆ ಎಂದು ಹೇಳಲಾಗುತ್ತಿದೆ.

ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ ಮುಳುಗಡೆ: ದಕ್ಷಿಣ ಕನ್ನಡದ ಜಿಲ್ಲೆಯ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಮ್ಯಣ್ಯದಲ್ಲಿ ಕುಮಾರಧಾರ ನದಿ ತುಂಬಿ ಹರಿಯುತ್ತಿದೆ. ದೇವಾಲಯದ ಸ್ನಾನಘಟ್ಟ ಮುಳುಗಡೆಯಾಗಿದೆ.

ಚಿಕ್ಕೋಡಿಯಲ್ಲಿ 7 ಸೇತುವೆ ಮುಳುಗಡೆ: ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ನದಿಗಳಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ. ಚಿಕ್ಕೋಡಿ ತಾಲೂಕಿನ ಮಲಿಕವಾಡ -ದತ್ತವಾಡ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಿದೆ. ನಿಪ್ಪಾಣಿ ತಾಲೂಕಿನ ಕಾರದಗಾ-ಭೋಜ, ಭೋಜವಾಡಿ-ಕುನ್ನೂರ, ಸಿದ್ದಾಳ-ಅಕ್ಕೋಳ, ಜತಾಟ-ಭಿವಶಿ, ಮಮದಾಪೂರ-ಹುನ್ನರಗಿ, ಕುನೂರ-ಬಾರವಾಡ ಸೇತುವೆಗಳು ನದಿಯಲ್ಲಿ ಒಳಹರಿವು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಜಲಾವೃತವಾಗಿವೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕು ಕಾರದಗಾ ಗ್ರಾಮದ ಆರಾಧ್ಯ ದೈವ ಬಂಗಾಲಿ ಬಾಬಾ ದರ್ಗಾ ಜಲದಿಗ್ಭಂಧನಕ್ಕೆ ಒಳಗಾಗಿದ್ದು, ಸದ್ಯ ಬಾಬಾನ ದರ್ಶನಕ್ಕೆ ದೂದಗಂಗಾ ನದಿ ನೀರು ತಡೆಯೊಡ್ಡಿದೆ. ಮುಂಜಾಗ್ರತಾ ಕ್ರಮವಾಗಿ ಚಿಕ್ಕೋಡಿ ಹಾಗೂ ನಿಪ್ಪಾಣಿ ಪೊಲೀಸರು ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಿ ಸಂಚಾರ ಬಂದ್ ಮಾಡಿದ್ದಾರೆ.

Source : https://m.dailyhunt.in/news/india/kannada/etvbhar9348944527258-epaper-etvbhkn/kodaginalli+vyaapaka+male+haarangi+jalaashayadindha+20+saavira+kyusek+niru+bidugade-newsid-n521121986?listname=newspaperLanding&topic=homenews&index=3&topicIndex=0&mode=pwa&action=click

Leave a Reply

Your email address will not be published. Required fields are marked *