ನಾಯಕನಹಟ್ಟಿಯಲ್ಲಿ 25 ವರ್ಷದ ದಾಖಲೆ ಮಳೆ.

ವಾರದಿಂದ ಸುರಿದ ಸತತ ಮಳೆಗೆ ಚಿತ್ರದುರ್ಗದ ನಾಯಕನಹಟ್ಟಿ ಪಟ್ಟಣ ಸುತ್ತಲಿನ ಪ್ರದೇಶದಲ್ಲಿರುವ 2.5 ಕೋಟಿ ರೂ. ವೆಚ್ಚದ ಮೂರು ಚೆಕ್‌ ಡ್ಯಾಂಗಳು ಕೊಚ್ಚಿ ಹೋಗಿವೆ.ನಾಯಕನಹಟ್ಟಿ ಪಟ್ಟಣ ಸಮೀಪದ ಪಿ.ಎಂ. ತಿಪ್ಪೇಸ್ವಾಮಿ ಅವರ ತೋಟದ ಬಳಿಯಿರುವ ಚೆಕ್‌ ಡ್ಯಾಂ, ಮಾಳಪ್ಪನಹಟ್ಟಿ ಮತ್ತು ಎನ್‌. ಮಹಾದೇವಪುರ ಗ್ರಾಮ ಸಮೀಪವಿರುವ 2 ಚೆಕ್‌ ಡ್ಯಾಂಗಳು ಸಂಪೂರ್ಣ ಹಾಳಾಗಿವೆ.

ಈ ಎಲ್ಲ ಚೆಕ್‌ ಡ್ಯಾಂಗಳನ್ನು ದೊಡ್ಡ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಲಾಗಿತ್ತು. ನಾಯಕನಹಟ್ಟಿ ಬಳಿ ಇರುವ ಎರಡು ಚೆಕ್‌ಡ್ಯಾಂಗಳು ತಲಾ ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿವೆ. ಇದೇ ರೀತಿಯಲ್ಲಿ ಎನ್. ಮಹಾದೇವಪುರ ಚೆಕ್‌ ಡ್ಯಾಂ 50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಒಟ್ಟಾರೆ 2.5 ಕೋಟಿ ವೆಚ್ಚದ ಚೆಕ್‌ಡ್ಯಾಂಗಳು ನೀರು ಸಂಗ್ರಹಿಸುವುದರಲ್ಲಿ ವಿಫಲವಾಗಿವೆ.

ನಾಯಕನಹಟ್ಟಿಯಲ್ಲಿ ಈ ಬಾರಿ 25 ವರ್ಷದ ಇತಿಹಾಸದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಇಲ್ಲಿನ ಸರಾಸರಿ ವಾಡಿಕೆ ಮಳೆ 415.9 ಮಿಮೀ ಆಗಿದೆ. ಆದರೆ ಇಲ್ಲಿಯವರೆಗೆ 984.4 ಮಿಮೀ ಮಳೆಯಾಗಿದೆ. ಇದು 25 ವರ್ಷದ ಅತ್ಯಧಿಕ ಮಳೆಯಾಗಿದೆ. ಅ. 5ರಂದು 129.6 ಮಿಮೀ ಮಳೆಯಾಗಿದ್ದು ಇದು ಒಂದೇ ದಿನ ಸುರಿದ ಸರ್ವಕಾಲಿನ ದಾಖಲೆ ಮಳೆಯಾಗಿದೆ. ಹೀಗಾಗಿ ನಿರೀಕ್ಷೆ ಹಾಗೂ ಸರಾಸರಿಗಿಂತ ಹೆಚ್ಚು ಮಳೆ ಸುರಿದಿರುವುದು ಚೆಕ್‌ಡ್ಯಾಂಗಳು ಕೊಚ್ಚಿರುವುದಕ್ಕೆ ಪ್ರಮುಖ ಕಾರಣವಾಗಿದೆ.

ಮೂರು ಚೆಕ್‌ ಡ್ಯಾಂಗಳು ರಿವೀಟ್‌ಮೆಂಟ್ ಹಾಳಾಗಿರುವುದು ಗಮನಕ್ಕೆ ಬಂದಿದೆ. ಗುತ್ತಿಗೆದಾರರಿಗೆ ಇದನ್ನು ಸರಿಪಡಿಸಲು ಸೂಚಿಸಲಾಗಿದೆ. ತೇವಾಂಶ ಹೆಚ್ಚಾಗಿರುವುದರಿಂದ ವಾಹನಗಳ ಓಡಾಟ ಸಾಧ್ಯವಿಲ್ಲ. ಮಳೆಯ ಪ್ರಮಾಣ ಸ್ವಲ್ಪ ಕಡಿಮೆಯಾದ ನಂತರ ದುರಸ್ತಿ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *