25,753 ಶಿಕ್ಷಕರ ನೇಮಕ ರದ್ದುಗೊಳಿಸಿದ ಸುಪ್ರೀಂ: ತಕ್ಷಣವೇ ಹೊಸ ನೇಮಕ ಮಾಡುವಂತೆ ಎಡಪಕ್ಷಗಳ ಆಗ್ರಹ.

WEST BENGAL SCHOOL JOBS : ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗಳ ನೇಮಕಾತಿ ರದ್ದು ಮಾಡಿ ಸುಪ್ರೀಂಕೋರ್ಟ್​ ಆದೇಶ ಹೊರಡಿಸಿದೆ.

ಕೋಲ್ಕತ್ತಾ(ಪಶ್ಚಿಮ ಬಂಗಾಳ): 25,753 ಶಿಕ್ಷಕರ ನೇಮಕಾತಿ ರದ್ದುಗೊಳಿಸಿದ ಕಲ್ಕತ್ತಾ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಇದರಿಂದ ಹೈಕೋರ್ಟ್​ ಆದೇಶದಂತೆ 25,753 ಶಿಕ್ಷಕರ ನೇಮಕ ರದ್ದಾಗಲಿವೆ.

ಶೀಘ್ರವೇ ಹೊಸದಾಗಿ ನೇಮಕ ಮಾಡುವಂತೆ ಒತ್ತಾಯ: ಶಿಕ್ಷಕರ ಆಯ್ಕೆಯಲ್ಲಿ ಅಕ್ರಮ ನಡೆದಿದೆ ಎಂಬ ಹೈಕೋರ್ಟ್​​​​​ ಆದೇಶವನ್ನು ಎತ್ತಿಹಿಡಿದಿರುವ ಸುಪ್ರೀಂಕೋರ್ಟ್​​, ಶಿಕ್ಷಕರ ನೇಮಕವನ್ನು ರದ್ದುಗೊಳಿಸಿದೆ. ಹೀಗಾಗಿ ಈ ಹುದ್ದೆಗಳಿಗೆ ಹೊಸದಾಗಿ ಪರೀಕ್ಷೆ ನಡೆಸಿ ಶೀಘ್ರವೇ ಈ ಎಲ್ಲ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಬೇಕು ಎಂದು ಸಿಪಿಐಎಂ ಪಕ್ಷ ಸರ್ಕಾರವನ್ನು ಒತ್ತಾಯಿಸಿದೆ. ಇಲ್ಲದಿದ್ದರೆ ಅದು ರಾಜ್ಯದ ಶಿಕ್ಷಣ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಎಚ್ಚರಿಕೆ ಕೂಡಾ ನೀಡಿದೆ.

ರಾಜ್ಯದ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ 25,753 ಶಿಕ್ಷಕರು ಮತ್ತು ಇತರ ಸಿಬ್ಬಂದಿಗಳ ನೇಮಕಾತಿಯನ್ನು ಅಕ್ರಮ ಎಂದಿರುವ ಕೋರ್ಟ್​, ಈ ಆಯ್ಕೆ ಪ್ರಕ್ರಿಯೆಯನ್ನು ರದ್ದುಗೊಳಿಸಿ ಆದೇಶ ನೀಡಿದೆ.

ಮೂರು ತಿಂಗಳೊಳಗೆ ಹೊಸ ಆಯ್ಕೆ ಪ್ರಕ್ರಿಯೆ ನಡೆಸಲು ಸೂಚನೆ: ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀಠ ಕಲ್ಕತ್ತಾ ಹೈಕೋರ್ಟ್​​ 2024ರ ಏಪ್ರಿಲ್ 22 ರಂದು ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿದೆ. ನೇಮಕಾತಿಗಳನ್ನು ರದ್ದುಗೊಳಿಸಿ, ತೃಣಮೂಲ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಮೂರು ತಿಂಗಳೊಳಗೆ ಹೊಸ ಆಯ್ಕೆ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆಯೂ ತನ್ನ ಆದೇಶದಲ್ಲಿ ಹೇಳಿದೆ.

ಸಿಪಿಐಎಂ ಕಾರ್ಯದರ್ಶಿ ಪ್ರತಿಕ್ರಿಯೆ ಹೀಗಿದೆ: ಸುಪ್ರೀಂಕೋರ್ಟ್​ನ ಮಹತ್ವದ ತೀರ್ಪು ಹೊರ ಬಂದ ಬೆನ್ನಲ್ಲೇ ಮಾತನಾಡಿದ ಸಿಪಿಐ(ಎಂ) ಪಶ್ಚಿಮ ಬಂಗಾಳ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಸಲೀಂ, ರಾಜ್ಯದಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದನ್ನು ಒಪ್ಪಿಕೊಂಡಿರುವ ಸುಪ್ರೀಂ ನೇಮಕಾತಿಯನ್ನು ರದ್ದುಗೊಳಿಸಿದೆ. ಈ ಹಿನ್ನೆಲೆಯಲ್ಲಿ ಇದು ರಾಜ್ಯದ ಶಾಲೆಗಳಲ್ಲಿನ ಶಿಕ್ಷಣ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಸುಪ್ರೀಂ ಕೋರ್ಟ್​​ ನಿರ್ದೇಶನವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ, ತಕ್ಷಣಕ್ಕೆ ಹುದ್ದೆ ಭರ್ತಿಗೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಕೆಂಡಕಾರಿದ ಎಡಪಕ್ಷದ ನಾಯಕರು: ಇದೇ ವೇಳೆ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಹರಿಹಾಯ್ದ ಮೊಹಮ್ಮದ್ ಸಲೀಂ, ಟಿಎಂಸಿ ಪಕ್ಷ ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಅಕ್ರಮ ನೇಮಕಾತಿ ಮೂಲಕ ರಾಜ್ಯಕ್ಕೆ ಕಳಂಕ ತಂದಿದೆ. 26 ಸಾವಿರ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗಳ ಉದ್ಯೋಗ ಕಳೆದುಕೊಳ್ಳುವುದರಿಂದ ಸರಿಸುಮಾರು 1 ಲಕ್ಷ ಜನರ ಮೇಲೆ ಪರಿಣಾಮ ಬೀರಲಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಉದ್ಯೋಗ ನಷ್ಟವಾಗುವ ಕಾರಣದ ಹಿಂದೆ ಯಾರ ತಪ್ಪಿದೆ ಎಂಬುದು ಈಗ ಪ್ರಮುಖವಾಗುತ್ತದೆ. ಈ ಬಗ್ಗೆಯೂ ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದೆ. ಕೆಲವರು ಎಸಗುವ ಭ್ರಷ್ಟಚಾರದಿಂದಾಗಿ ಹೀಗಾಗಿದೆ. ಇದು ಲಕ್ಷಾಂತರ ಕುಟುಂಬಗಳನ್ನು ಸಂಕಷ್ಟಕ್ಕೆ ದೂಡಿದೆ ಎಂದು ಬೇಸರ ಹೊರ ಹಾಕಿದ್ದಾರೆ.

Source : ETV Bharat

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Views: 0

Leave a Reply

Your email address will not be published. Required fields are marked *