2nd Test Day 1: ಸಂಕಷ್ಟದಲ್ಲಿದ್ದ ಭಾರತಕ್ಕೆ ನಾಯಕ Shubhman Gill ಆಸರೆ, ರವೀಂದ್ರ ಜಡೇಜಾ ಸಾಥ್!

ಬರ್ಮಿಂಗ್ ಹ್ಯಾಮ್: ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಉಭಯ ತಂಡಗಳು ಸಮಬಲದ ಹೋರಾಟ ನೀಡುತ್ತಿದ್ದು ಭಾರತಕ್ಕೆ ನಾಯಕ ಶುಭ್ ಮನ್ ಗಿಲ್ ಶತಕ ಸಿಡಿಸಿ ಆಸರೆಯಾಗಿದ್ದಾರೆ.


ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬ್ಯಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭಾರತ 5 ವಿಕೆಟ್ ನಷ್ಟಕ್ಕೆ 310 ರನ್ ಕಲೆಹಾಕಿದೆ.

ಭಾರತದ ಪರ ನಾಯಕ ಶುಭ್ ಮನ್ ಗಿಲ್ ಶತಕ (114*) ಸಿಡಿಸಿದರೆ, ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (87 ರನ್) ಅರ್ಧಶತಕ ಸಿಡಿಸಿ ತಂಡದ ಉತ್ತಮ ಮೊತ್ತಕ್ಕೆ ಕಾರಣರಾದರು.

ಭಾರತಕ್ಕೆ ಆರಂಭಿಕ ಆಘಾತ

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಭಾರತದ ಆರಂಭ ಉತ್ತಮವಾಗಿರಲಿಲ್ಲ. ಆರಂಭದಲ್ಲೇ ಆಘಾತ ಎದುರಾಯಿತು. ಕಳೆದ ಪಂದ್ಯದಲ್ಲಿ ಶತಕ ಗಳಿಸಿದ್ದ ಕೆ.ಎಲ್.ರಾಹುಲ್ (2) ನಿರಾಸೆ ಅನುಭವಿಸಿದರು. ಮೂರನೇ ಕ್ರಮಾಕಂದಲ್ಲಿ ಕ್ರೀಸಿಗಿಳಿದ ಕರುಣ್ ನಾಯರ್ (31) ಉತ್ತಮವಾಗಿ ಮೂಡಿಬಂದರೂ ಹೆಚ್ಚು ಹೊತ್ತು ನೆಲೆಯೂರಲು ಸಾಧ್ಯವಾಗಲಿಲ್ಲ.

50 ಎಸೆತಗಳಲ್ಲಿ ಐದು ಬೌಂಡರಿ ನೆರವಿನಿಂದ 31 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಮತ್ತೊಂದೆಡೆ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ಯಶಸ್ವಿ ಜೈಸ್ವಾಲ್ ಆಕರ್ಷಕ ಅರ್ಧಶತಕ ಗಳಿಸಿದರು. ಊಟದ ವಿರಾಮದ ಹೊತ್ತಿಗೆ ಭಾರತ ಎರಡು ವಿಕೆಟ್ ನಷ್ಟಕ್ಕೆ 98 ರನ್ ಗಳಿಸಿತ್ತು.

ಬಳಿಕ ಕ್ರೀಸಿಗಿಳಿದ ನಾಯಕ ಶುಭಮನ್ ಗಿಲ್ ಜೊತೆ ಜೈಸ್ವಾಲ್ ಮೂರನೇ ವಿಕೆಟ್‌ಗೆ 66 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಅವರಿಬ್ಬರು ತಂಡವನ್ನು ಮುನ್ನಡೆಸಿದರು. ಈ ನಡುವೆ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ದಾಳಿಯಲ್ಲಿ ತಾಳ್ಮೆ ಕಳೆದುಕೊಂಡ ಜೈಸ್ವಾಲ್, ವಿಕೆಟ್ ಕೀಪರ್ ಜೇಮಿ ಸ್ಮಿತ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಇದರಿಂದಾಗಿ ಕೇವಲ 13 ರನ್ ಅಂತರದಲ್ಲಿ ಶತಕ ವಂಚಿತರಾದರು. ಜೈಸ್ವಾಲ್ 107 ಎಸೆತಗಳಲ್ಲಿ 13 ಬೌಂಡರಿಗಳ ನೆರವಿನಿಂದ 87 ರನ್ ಗಳಿಸಿದರು.

ಅವರಿಗೆ ಸ್ವಲ್ಪ ಹೊತ್ತು ರಿಷಭ್ ಪಂತ್ (25) ಅವರಿಂದ ಬೆಂಬಲ ದೊರಕಿತು. ಪಂತ್ ಅವರನ್ನು ಶೋಯಬ್ ಬಷೀರ್ ಔಟ್ ಮಾಡಿದರು. ಮೊದಲ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಪಂತ್ ಶತಕ ಬಾರಿಸಿದ್ದರು. ಬಳಿಕ ಕ್ರೀಸಿಗಿಳಿದ ನಿತೀಶ್ ಕುಮಾರ್ ರೆಡ್ಡಿ (1) ಸಹ ಔಟ್ ಆಗುವುದರೊಂದಿಗೆ ಭಾರತ 211 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು. ಇದೀಗ ಕ್ರೀಸಿನಲ್ಲಿರುವ ಗಿಲ್ (114*) ಅವರಿಗೆ ರವೀಂದ್ರ ಜಡೇಜ (41*) ಸಾಥ್ ಕೊಟ್ಟಿದ್ದಾರೆ.

ದಿನದಾಟ ಅಂತ್ಯ

ಮೊದಲ ದಿನದಾಟ ಅಂತ್ಯಕ್ಕೆ ಭಾರತ ತಂಡ 5 ವಿಕೆಟ್ ನಷ್ಟಕ್ಕೆ 310 ರನ್ ಗಳಿಸಿದೆ. ಭಾರತದ ಪರ 114 ರನ್ ಗಳಿಸಿರುವ ಶುಭ್ ಮನ್ ಗಿಲ್ ಮತ್ತು 41 ರನ್ ಗಳಿಸಿರುವ ರವೀಂದ್ರ ಜಡೇಜಾ ಕ್ರೀಸ್ ನಲ್ಲಿದ್ದಾರೆ.

Leave a Reply

Your email address will not be published. Required fields are marked *