ಮಕ್ಕಳಿಗಾಗಿ ಅಪ್ಪ ಕೂಡಿಟ್ಟ 3 ಕೋಟಿ ಬ್ಯಾಂಕ್‌ ಲಾಕರ್‌ನಲ್ಲೇ ಬಾಕಿ, ಈಗ ಅದು ಬರೀ ಕಾಗದದ ಹಾಳೆ!

ಪಣಜಿ (ಜೂ.8): ತಮ್ಮ ಇಡೀ ಜೀವನದ ಉದ್ದಕ್ಕೂ ಕಷ್ಟಪಟ್ಟ ತಂದೆ (Father) ತಾಯಿ ಸಾಮಾನ್ಯವಾಗಿ ಯೋಚನೆ ಮಾಡೋದು ಏನೆಂದರೆ, ನಾನು ಕಷ್ಟಪಟ್ಟ ರೀತಿಯಲ್ಲಿ ನನ್ನ ಮಕ್ಕಳು ಕಷ್ಟಪಡಬಾರದು. ಅದಕ್ಕಾಗಿ ಏನನ್ನಾದರೂ ಕೂಡಿಡುವ ಯೋಚನೆ ಮಾಡುತ್ತಾರೆ. ಬಹುಶಃ ಭಾರತದಲ್ಲಿ ಹೀಗೆ ಯೋಚನೆ ಮಾಡದ ತಂದೆ-ತಾಯಿಯೇ ಇರಲಿಕ್ಕಿಲ್ಲ. ಆದರೆ, ಗೋವಾದ (Goa) ಪಣಜಿಯ (Panaji) ಮಾಪುಸಾದಲ್ಲಿ ಮಕ್ಕಳ ಕಷ್ಟಕ್ಕೆ ನೆರವಾಗಲಿ ಎಂದು ತಂದೆ ತಾಯಿ 3 ಕೋಟಿ ರೂಪಾಯಿಯನ್ನು ಬ್ಯಾಂಕ್‌(Bank Locker) ಲಾಕರ್‌ನಲ್ಲಿಟ್ಟಿದ್ದರು. ಹಾಗಂತ ಈ ಹಣ (Money) ಯಾವುದೇ ಮಾದರಿಯ ಡಿಜಿಟಲ್‌ ರೂಪದಲ್ಲಿ ಇದ್ದಿರಲಿಲ್ಲ. 3 ಕೋಟಿ ನಗದು ಹಣವನ್ನು ಬಂಡಲ್‌ಗಳ ರೂಪದಲ್ಲಿ ಇಟ್ಟಿದ್ದರು. ಆದರೆ, ಇದು ಮಕ್ಕಳಿಗೆ ಗೊತ್ತಾಗುವ ವೇಳೆಗೆ 3 ಕೋಟಿ ನೋಟಿನ ಬಂಡಲ್‌ಗಳು ಬರೀ ಕಾಗದದ ಹಾಳೆಗಳಾಗಿವೆ. ಗೋವಾದ ಮಾಪುಸಾದಲ್ಲಿ ನಡೆದ ಈ ಘಟನೆ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಈ ಹಣವನ್ನು ಹೊಸ ಮಾದರಿಯ ನೋಟ್‌ಗಳೊಂದಿಗೆ ಬದಲಾಯಿಸುವ ಎಲ್ಲಾ ಮಾರ್ಗ ಮುಚ್ಚಿಹೋದ ಬಳಿಕ ಈ 3 ಕೋಟಿ ಹಣ ಈಗ ಬರೀ ಕಾಗದವಾಗಿ ಪರಿವರ್ತನೆಯಾಗಿದೆ.

ತಂದೆ ಸಾವು ಕಂಡ 12 ವರ್ಷಗಳ ಬಳಿಕ ಮಕ್ಕಳಿಗೆ ಬ್ಯಾಂಕ್‌ ಲಾಕರ್‌ನಲ್ಲಿ ಹಣ ಹಾಗೂ ಆಭರಣಗಳು ಇದ್ದಿದ್ದು ಗೊತ್ತಾಗಿದೆ. ಬ್ಯಾಂಕ್‌ನಲ್ಲಿ ಹೋಗಿ ಲಾಕರ್‌ ತೆಗೆದು ನೋಡಿದಾಗ ಈ ಎಲ್ಲಾ ಹಣ ಸಿಕ್ಕಿದೆ. ಆದರೆ, ನೋಟು ಅಮಾನ್ಯೀಕರಣದ ಕಾರಣದಿಂದಾಗಿ ಈ ಹಣಕ್ಕೆ ಈಗ ಬೇಡಿಕೆಯೇ ಇಲ್ಲ. ತಂದೆ ತಾಯಿ ಕೂಡಿಟ್ಟ 3 ಕೋಟಿ ಹಣದ ಪೈಕಿ ಮಕ್ಕಳಿಗೆ ಒಂದು ಪೈಸೆ ಕೂಡ ಉಪಯೋಗಕ್ಕೆ ಬಂದಿಲ್ಲ. ಇನ್ನು ಇಷ್ಟು ದೊಡ್ಡ ಪ್ರಮಾಣದ ಹಣ ಬ್ಯಾಂಕ್‌ ಲಾಕರ್‌ನಲ್ಲಿ ನೋಡಿ ಅದು ಉಪಯೋಗಿಸಲು ಸಾಧ್ಯವಾಗದೇ ಇರೋದನ್ನು ಕಂಡು ಬ್ಯಾಂಕ್‌ ಅಧಿಕಾರಿಗಳು ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಗೋವಾದ ಬಾರ್ಡೇಜ್‌ನ ವ್ಯಕ್ತಿ ಮಾಫುಸಾದ ಬ್ಯಾಂಕ್‌ನಲ್ಲಿ ಮೂರು ಲಾಕರ್‌ಗಳನ್ನು ತೆರೆದಾಗ ಈ ಸುದ್ದು ಆರಂಭವಾಗುತ್ತದೆ. ತಮ್ಮ ಹೆಸರಿನಲ್ಲಿ ಎರಡು ಲಾಕರ್ ಹಾಗೂ ಪತ್ನಿಯ ಹೆಸರನಲ್ಲಿ ಒಂದು ಲಾಕರ್‌ಅನ್ನು ತೆರೆದಿದ್ದರು. ಪತ್ನಿ ತೀರಿಕೊಂಡ ಬಳಿಕ ಆಕೆಯ ಲಾಕರ್‌ಅನ್ನು ಇವರೇ ನಿರ್ವಹಣೆ ಮಾಡುತ್ತಿದ್ದರು. ಹೀಗಿದ್ದ ವ್ಯಕ್ತಿ 2012ರಲ್ಲಿ ನಿಧನರಾಗಿದ್ದರು. ಇದರ ನಡುವೆ ಇವರ ಮಕ್ಕಳು ವಿದ್ಯಾಭ್ಯಾಸ ಮುಗಿಸಿ ಕೆಲಸ ಹುಡುಕೊಂಡು ವಿದೇಶದಲ್ಲಿ ನೆಲೆಯಾಗಿದ್ದರು. ಅಪ್ಪ ಸತ್ತಾಗ ಗೋವಾಗೆ ಬಂದಿದ್ದ ಇವರು ನಂತರ ವಿದೇಶಕ್ಕೆ ವಾಪಸಾಗಿದ್ದರು. 12 ವರ್ಷಗಳ ನಂತರ ಅಂದರೆ ಕಳೆದ ಮೇ ನಲ್ಲಿ ಗೋವಾದಲ್ಲಿದ್ದ ಹಳೆಯ ಮನೆಯನ್ನು ಮಾರಾಟ ಮಾಡುವ ಉದ್ದೇಶದಲ್ಲಿ ಭಾರತಕ್ಕೆ ವಾಪಸಾಗಿದ್ದರು. ಪೂರ್ವಜನರ ಮನೆಯಲ್ಲಿ ಇರುವ ದಾಖಲೆಗಳನ್ನು ನೋಡುತ್ತಿದ್ದಾಗ ಅವರಿಗೆ ಕೆಲವು ಬ್ಯಾಂಕ್‌ನ ದಾಖಲೆಗಳು ಹಾಗೂ ಲಾಕರ್‌ನ ಕೀಗಳನ್ನು ಕಂಡು ಅಚ್ಚರಿಪಟ್ಟಿದ್ದಾರೆ.

ಬಳಿಕ ಮಕ್ಕಳು ಎಲ್ಲಾ ದಾಖಲೆಗಳೊಂದಿಗೆ ಬ್ಯಾಂಕ್‌ನ ಮೆಟ್ಟಿಲೇರಿದಾಗ, ತಂದೆಯ ಹೆಸರಿನಲ್ಲಿ ಲಾಕರ್‌ ಇರುವುದು ಗೊತ್ತಾಗಿದೆ. ತಂದೆಯ ಮರಣ ಪ್ರಮಾಣಪತ್ರ ಹಾಗೂ ಅವರು ತಮ್ಮ ತಂದೆ ಎನ್ನುವಂಥ ದಾಖಲೆಯನ್ನು ತೋರಿಸಿದ ಬಳಿಕ, ಮೃತರ ಲಾಕರ್‌ಅನ್ನು ತೆಗೆಯಲು ಮಕ್ಕಳಿಗೆ ಅವಕಾಶ ನೀಡಲಾಗಿದೆ. ಕಳೆದ ತಿಂಗಳು ಮೇ 6 ರಂದು ಮಕ್ಕಳು ಹಾಗೂ ಬ್ಯಾಂಕ್‌ನ ಅಧಿಕಾರಿಗಳು ಲಾಕರ್‌ಅನ್ನು 12 ವರ್ಷಗಳ ನಂತರ ಓಪನ್‌ ಮಾಡಿದ್ದಾರೆ. ಈ ವೇಳೆ ಅವರಿಗೆ ನೋಟ್‌ನ ಬಂಡಲ್‌ಗಳು ಹಾಗೂ ಆಭರಣಗಳು ಸಿಕ್ಕಿವೆ.

ಆ ನಂತರ ಬ್ಯಾಂಕ್‌ನ ಅಧಿಕಾರಿಗಳು ಅಲ್ಲಿದ್ದ ಮೊತ್ತವನ್ನು ಲೆಕ್ಕಹಾಕಿದಾಗ ಬರೋಬ್ಬರಿ 3 ಕೋಟಿಗೂ ಅಧಿಕ ಮೊತ್ತವಿರುವುದು ಗೊತ್ತಾಗಿದೆ. ಆದರೆ, ಇದು ಹಳೆಯ 500 ಹಾಗೂ 1 ಸಾವಿರ ರೂಪಾಯಿ ನೋಟುಗಳಾಗಿದ್ದವು. ಈ ನೋಟುಗಳನ್ನು ಕೇಂದ್ರ ಸರ್ಕಾರ ಡೀಮಾನಿಟೈಸ್‌ ಮಾಡಿ ವರ್ಷಗಳೇ ಕಳೆದಿವೆ. ಕೆಲವು ಲಕ್ಷ ಬೆಲೆಬಾಳುವ ಚಿನ್ನಾಭರಣಗಳನ್ನು ಮಾತ್ರವೇ ಮಕ್ಕಳು ಪಡೆದುಕೊಂಡಿದ್ದಾರೆ.

ತಮ್ಮ ತಂದೆತಾಯಿ ಇಷ್ಟು ದೊಡ್ಡ ಪ್ರಮಾಣದ ನಗದು ಹಣವನ್ನು ಬಿಟ್ಟುಹೋಗಿದ್ದಾರೆ ಎನ್ನುವ ಒಂದೇ ಒಂದು ಸಣ್ಣ ಸೂಚನೆ ಕೂಡ ನಮಗೆ ಇದ್ದಿರಲಿಲ್ಲ. ಹಾಗೇನಾದರೂ ಇದ್ದಲ್ಲಿ ತಂದೆಯ ಸಾವಿನ ಬಳಿಕ ಲಾಕರ್‌ನಿಂದ ಹಣವನ್ನು ವಾಪಾಸ್‌ ತೆಗೆದುಕೊಳ್ಳುತ್ತಿದ್ದೆವು ಎಂದಿದ್ದಾರೆ. ಅದಲ್ಲದೆ, ತಮ್ಮ ತಂದೆ-ತಾಯಿ ತಮ್ಮ ಜೀವಿತಾಧಿಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಹಣವನ್ನು ಉಳಿತಾಯ ಮಾಡಿದ್ದಾರೆ ಅನ್ನೋದೇ ನಮಗೆ ಅಚ್ಚರಿ ತಂದಿದೆ ಎಂದು ಮಕ್ಕಳು ಹೇಳಿದ್ದಾರೆ.

Source : https://kannada.asianetnews.com/india-news/goa-mapusa-after-death-of-father-kids-find-rs-3-cr-stashed-in-bank-lockers-san-serrh9

Leave a Reply

Your email address will not be published. Required fields are marked *