ನೈರುತ್ಯ ರೈಲ್ವೆಯಿಂದ ಬಂಪರ್ ಗಿಫ್ಟ್: ಹೈದರಾಬಾದ್-ಬೆಳಗಾವಿ ನಡುವಿನ 3 ವಿಶೇಷ ರೈಲುಗಳು ಖಾಯಂ! ಟಿಕೆಟ್ ದರ ಇಳಿಕೆ.

ಬೆಂಗಳೂರು: ಉತ್ತರ ಕರ್ನಾಟಕದ ರೈಲ್ವೆ ಪ್ರಯಾಣಿಕರಿಗೆ, ವಿಶೇಷವಾಗಿ 8 ಜಿಲ್ಲೆಗಳ ಜನತೆಗೆ ನೈರುತ್ಯ ರೈಲ್ವೆ ಇಲಾಖೆ ಭರ್ಜರಿ ಸಿಹಿಸುದ್ದಿ ನೀಡಿದೆ. ಬೆಳಗಾವಿ ಮತ್ತು ತೆಲಂಗಾಣದ ಹೈದರಾಬಾದ್ (ಸಿಕಂದರಾಬಾದ್ ಮತ್ತು ಚರ್ಲಪಲ್ಲಿ) ನಡುವೆ ಸಂಚರಿಸುತ್ತಿದ್ದ ಮೂರು ವಾರಾಂತ್ಯದ ‘ವಿಶೇಷ ರೈಲು’ಗಳನ್ನು ಇದೀಗ ಖಾಯಂಗೊಳಿಸಿ ರೈಲ್ವೆ ಮಂಡಳಿ ಆದೇಶ ಹೊರಡಿಸಿದೆ.

ಹಬ್ಬಗಳು ಹಾಗೂ ಜನದಟ್ಟಣೆಯ ಸಮಯದಲ್ಲಿ ಮಾತ್ರ ವಾರಕ್ಕೊಮ್ಮೆ ಓಡಾಡುತ್ತಿದ್ದ ಈ ರೈಲುಗಳು, ಇನ್ಮುಂದೆ ನಿರಂತರವಾಗಿ ಸೇವೆ ಒದಗಿಸಲಿವೆ. ದಶಕಗಳಿಂದ ಇದ್ದ ಈ ಪ್ರಮುಖ ಬೇಡಿಕೆ ಈಡೇರಿರುವುದರಿಂದ ಹೈದರಾಬಾದ್‌ನತ್ತ ಮುಖ ಮಾಡುವ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ವ್ಯಾಪಾರಿಗಳಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.

ಪ್ರಯಾಣಿಕರಿಗೆ ಆಗುವ ಪ್ರಮುಖ ಲಾಭಗಳೇನು?

  • ಟಿಕೆಟ್ ದರದಲ್ಲಿ ಭಾರಿ ಇಳಿಕೆ: ಈ ಮೊದಲು ಇವು ವಿಶೇಷ ರೈಲುಗಳಾಗಿದ್ದ ಕಾರಣ ಟಿಕೆಟ್ ದರ ದುಬಾರಿಯಾಗಿತ್ತು. ಇದೀಗ ಖಾಯಂ ಆಗಿರುವುದರಿಂದ ‘ವಿಶೇಷ ದರ’ದ ಹೊರೆ ತಪ್ಪಲಿದೆ. ಸ್ಲೀಪರ್ ಹಾಗೂ ಎಸಿ (AC) ಕೋಚ್‌ಗಳ ಟಿಕೆಟ್ ದರದಲ್ಲಿ ಬರೋಬ್ಬರಿ ಶೇ. 25 ರಿಂದ 30ರಷ್ಟು ಇಳಿಕೆಯಾಗಲಿದೆ.
  • ಸಮಯದ ಉಳಿತಾಯ ಮತ್ತು ಖಚಿತತೆ: ಪ್ರಯಾಣಿಕರಿಗೆ ಇನ್ಮುಂದೆ ನಿಗದಿತ ಸಮಯದಲ್ಲಿ ರೈಲು ಸೇವೆ ಸಿಗಲಿದ್ದು, ಮುಂಜಾನೆಯ ವೇಳೆಗೆ ಹೈದರಾಬಾದ್ ತಲುಪಲು ಈ ರೈಲುಗಳು ಅತ್ಯಂತ ಅನುಕೂಲಕರವಾಗಿವೆ.

ರೈಲುಗಳ ಸಂಪೂರ್ಣ ವೇಳಾಪಟ್ಟಿ:

ರೈಲು ಸಂಖ್ಯೆಸಂಚರಿಸುವ ಮಾರ್ಗಹೊರಡುವ ಸಮಯ & ದಿನತಲುಪುವ ಸಮಯ & ದಿನ
17071ಹೈದರಾಬಾದ್ ನಿಂದ ಬೆಳಗಾವಿಸಂಜೆ 4:30 (ಗುರುವಾರ)ಬೆಳಗ್ಗೆ 10:30 (ಶುಕ್ರವಾರ)
17072ಬೆಳಗಾವಿಯಿಂದ ಹೈದರಾಬಾದ್ಮಧ್ಯಾಹ್ನ 1:00 (ಶುಕ್ರವಾರ)ಬೆಳಗ್ಗೆ 07:00 (ಶನಿವಾರ)
17073ಸಿಕಂದರಾಬಾದ್ ನಿಂದ ಬೆಳಗಾವಿಸಂಜೆ 4:30 (ಸೋಮವಾರ)ಬೆಳಗ್ಗೆ 10:30 (ಮಂಗಳವಾರ)
17074ಬೆಳಗಾವಿಯಿಂದ ಸಿಕಂದರಾಬಾದ್ಮಧ್ಯಾಹ್ನ 1:00 (ಮಂಗಳವಾರ)ಬೆಳಗ್ಗೆ 07:15 (ಬುಧವಾರ)
17075ಚರ್ಲಪಲ್ಲಿ ನಿಂದ ಬೆಳಗಾವಿಸಂಜೆ 4:00 (ಶನಿವಾರ)ಬೆಳಗ್ಗೆ 10:30 (ಭಾನುವಾರ)
17076ಬೆಳಗಾವಿಯಿಂದ ಚರ್ಲಪಲ್ಲಿಮಧ್ಯಾಹ್ನ 1:00 (ಭಾನುವಾರ)ಬೆಳಗ್ಗೆ 08:45 (ಸೋಮವಾರ)

ಯಾವೆಲ್ಲಾ ನಿಲ್ದಾಣಗಳಲ್ಲಿ ನಿಲುಗಡೆ?

ರಾಜ್ಯದ ಒಟ್ಟು 8 ಜಿಲ್ಲೆಗಳ ಮೂಲಕ ಹಾದುಹೋಗುವ ಈ ರೈಲುಗಳು ಪ್ರಮುಖವಾಗಿ ಬೆಳಗಾವಿ, ಖಾನಾಪುರ, ಲೋಂಡಾ, ಧಾರವಾಡ, ಹುಬ್ಬಳ್ಳಿ, ಗದಗ, ಕೊಪ್ಪಳ, ಹೊಸಪೇಟೆ, ತೋರಣಗಲ್ಲು, ದುರೋಜಿ, ಬಳ್ಳಾರಿ, ಗುಂತಕಲ್, ಆದೋನಿ, ಮಂತ್ರಾಲಯಂ ರೋಡ್, ರಾಯಚೂರು, ಕೃಷ್ಣಾ, ಯಾದಗಿರಿ, ತಾಂಡೂರು, ವಿಕಾರಾಬಾದ್, ಲಿಂಗಂಪಲ್ಲಿ ಹಾಗೂ ಬೇಗಂಪೇಟೆ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿವೆ.

Leave a Reply

Your email address will not be published. Required fields are marked *