ಶಿಕ್ಷಕರಿಗಿಲ್ಲ ದಸರಾ ರಜೆ, ಅಸಮಾಧಾನಕ್ಕೆ ಕಾರಣವಾಯ್ತು ಸಮೀಕ್ಷಾ ನಿಯೋಜನೆ.

ಸೆಂ 14: ಹಿಂದುಳಿದ ವರ್ಗಗಳ ಆಯೋಗದ ರಾಜ್ಯದಲ್ಲಿ ಸೆ.22ರಿಂದ ಅ.7 ರವರೆಗೆ ನಡೆಸಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಶಿಕ್ಷಕರನ್ನು ಬಳಸಿಕೊಳ್ಳಲು ಸರಕಾರ ನಿರ್ಧರಿಸಿದೆ. ಹೀಗಾಗಿ ಸರಕಾರಿ ಶಾಲಾ ಶಿಕ್ಷಕರು ಈ ವರ್ಷ ದಸರಾ ರಜೆಯಲ್ಲಿಯೂ ಕಾರ್ಯ ನಿರ್ವಹಿಸಬೇಕಾಗಿದೆ.

ಆದರೆ, ಅದಕ್ಕೆ ತಕ್ಕಂತೆ ಗೌರವಧನವಾಗಲೀ, ಗಳಿಕೆ ರಜೆಯಾಗಲೀ ಸಿಗುತ್ತಿಲ್ಲ. ಇದರಿಂದ ಶಿಕ್ಷಕರು ರೋಸಿಹೋಗಿದ್ದಾರೆ.

ಶಾಲೆಗಳಿಗೆ ದಸರಾ ರಜೆ ಸೆ.20 ರಿಂದ ಅ.7 ರವರೆಗೆ ನಿಗದಿಯಾಗಿದೆ. ಆದರೆ, ಶಿಕ್ಷಕರಿಗೆ ರಜೆ ನೀಡದೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಸಮೀಕ್ಷೆಗೆ ರಾಜ್ಯಾದ್ಯಂತ 1.50 ಲಕ್ಷ ಶಿಕ್ಷಕರನ್ನು ಬಳಕೆ ಮಾಡಲಾಗುತ್ತಿದೆ. ಇದರಲ್ಲಿ ಭಾಗವಹಿಸುವ ಶಿಕ್ಷಕರಿಗೆ ಸೆ.13 ರಿಂದ ಸೆ.19 ರವರೆಗೆ ತರಬೇತಿ ನಡೆಯಲಿದ್ದು, ಶಾಲಾ ಅವಧಿ ಮುಗಿದ ಬಳಿಕ ಸಂಜೆ 5 ಗಂಟೆ ನಂತರ ತರಬೇತಿ ನೀಡಲಾಗುತ್ತಿದೆ.

ಅನ್ಯ ಇಲಾಖೆಗಳ ಸಿಬ್ಬಂದಿಯು ರಜಾ ದಿನಗಳಲ್ಲಿ ಕೆಲಸ ಮಾಡಿದರೆ, ಗಳಿಕೆ ರಜೆ ಸೌಲಭ್ಯ ಸಿಗುತ್ತದೆ. ಶಿಕ್ಷಣ ಇಲಾಖೆಯಲ್ಲೂ ಗಳಿಕೆ ರಜೆ ನೀಡಬೇಕೆಂಬ ನಿಯಮವಿದ್ದರೂ ಅದು ಶಿಕ್ಷಕರಿಗೆ ದೊರಕುತ್ತಿಲ್ಲ. 2024ರಲ್ಲಿ ಮತಗಟ್ಟೆ ಹಂತದ ಅಧಿಕಾರಿಗಳಾಗಿ (ಬಿಎಲ್‌ಒ) ಕಾರ್ಯ ನಿರ್ವಹಿಸಿದವರಿಗೆ ಈವರೆಗೆ ಗೌರವಧನ ಪಾವತಿಸಿಲ್ಲ. ಇದು ಸಾಲದೆಂಬಂತೆ, ಸಮೀಕ್ಷೆ, ಚುನಾವಣೆ ಕಾರ್ಯಗಳನ್ನು ನಿರ್ವಹಿಸಿದವರಿಗೆ ಸಂಬಂಧಪಟ್ಟ ಪ್ರಾಧಿಕಾರಗಳು ಹಾಜರಾತಿ ಪ್ರಮಾಣಪತ್ರ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.


ಅನ್ಯಕಾರ್ಯಗಳ ಹೊರೆ:
ರಾಜ್ಯದಲ್ಲಿ 46,757 ಸರಕಾರಿ ಶಾಲೆಗಳಿದ್ದು, 1.77 ಲಕ್ಷ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶಿಕ್ಷಕರು ಮಕ್ಕಳಿಗೆ ಬೋಧನೆ ಮಾಡುವುದಷ್ಟೇ ಅಲ್ಲ; ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನೂ ಮಾಡಬೇಕಾಗಿದೆ. ಜಾತಿ ಸಮೀಕ್ಷೆ, ಜನಗಣತಿ ಹಾಗೂ ಚುನಾವಣಾ ಕಾರ್ಯಕ್ಕೂ ಶಿಕ್ಷಕರನ್ನೇ ನೇಮಿಸಲಾಗುತ್ತಿದೆ. ಹೀಗಾಗಿ, ಶಿಕ್ಷಕರಿಗೆ ಮಕ್ಕಳಿಗೆ ಬೋಧಿಸುವುದಕ್ಕಿಂತ ಇತರೆ ಕಾರ್ಯಗಳ ಭಾರವೇ ಜಾಸ್ತಿಯಾಗಿದೆ.

ರಾಜ್ಯ ಸರಕಾರವೇ ಘೋಷಿಸಿರುವಂತೆ 2025-26ನೇ ಸಾಲಿನ ಶೈಕ್ಷಣಿಕ ವರ್ಷದ 365 ದಿನಗಳಲ್ಲಿ123 ರಜೆಗಳಿವೆ. ಇದರಲ್ಲಿ ಶಾಲಾ ಕರ್ತವ್ಯದ ದಿನಗಳು 242. ಈ ಅವಧಿಯಲ್ಲೇ ಕ್ಷೀರ ಭಾಗ್ಯ, ಮಧ್ಯಾಹ್ನದ ಬಿಸಿಯೂಟ, ಮೊಟ್ಟೆ-ಬಾಳೆಹಣ್ಣು ವಿತರಣೆ, ಮಾಸಿಕ ಪರೀಕ್ಷೆ ಆಯೋಜನೆ, ರಾಗಿ ಮಾಲ್ಟ್‌ ವಿತರಣೆಯಂತಹ ಕಾರ್ಯಗಳನ್ನೂ ನಿರ್ವಹಿಸಬೇಕಿದೆ. ಅಷ್ಟೇ ಅಲ್ಲ; ಶೈಕ್ಷಣಿಕ ವರ್ಷದ ಆರಂಭದಲ್ಲಿ ಶಾಲಾ ಸಮವಸ್ತ್ರ, ಶೂ-ಸಾಕ್ಸ್‌, ಪಠ್ಯಪುಸ್ತಕ ವಿಸ್ತರಣೆಯಂತಹ ಜವಾಬ್ದಾರಿಗಳೂ ಶಿಕ್ಷಕರ ಹೆಗಲೇರುತ್ತಿವೆ. ಈ ಎಲ್ಲ ಕಾರ್ಯಗಳ ಜತೆಗೆ ಚುನಾವಣೆ, ಸಮೀಕ್ಷೆ ಸೇರಿದಂತೆ ಇತರೆ ಸರಕಾರಿ ಯೋಜನೆಗಳಲ್ಲೂ ತೊಡಗಿಸಿಕೊಳ್ಳಬೇಕಿದೆ.


ಶಿಕ್ಷಕರಿಗೆ ಅನ್ಯಕಾರ್ಯ ಬೇಡ:
ಚುನಾವಣಾ ಕಾರ್ಯಕ್ಕೆ ಶಿಕ್ಷಕರನ್ನು ನಿಯೋಜಿಸುತ್ತಿರುವುದರಿಂದ ಮಕ್ಕಳ ಕಲಿಕೆಗೆ ತೊಂದರೆಯಾಗುತ್ತಿದ್ದು, ಶಿಕ್ಷಕರ ಬದಲಿಗೆ ಇತರೆ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಹಾಗೂ ಶಿಕ್ಷಕೇತರ ಸಿಬ್ಬಂದಿಯನ್ನು ನಿಯೋಜಿಸಲು ಕ್ರಮ ಕೈಗೊಳ್ಳುವಂತೆ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಜುಲೈನಲ್ಲಿಪತ್ರ ಬರೆದು ಸೂಚಿಸಿದ್ದರು.

ಮುಖ್ಯ ಕಾರ್ಯದರ್ಶಿಯು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಎಚ್‌ಆರ್‌ಎಂಎಸ್‌ನಲ್ಲಿ ಲಭ್ಯವಿರುವ ಮಾಹಿತಿಯಂತೆ ನಾನಾ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪದವೀಧರ ಅಧಿಕಾರಿ, ನೌಕರರನ್ನು ನೇಮಿಸುವಂತೆ ಸೂಚನೆ ನೀಡಿದ್ದರು. ರಾಜ್ಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಶಾಲಾ ಶಿಕ್ಷಕರನ್ನು ಚುನಾವಣಾ ಸಂಬಂಧಿತ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಗಳಿಗೆ ಹಾಗೂ ಬೂತ್‌ ಮಟ್ಟದ ಅಧಿಕಾರಿಗಳಾಗಿ ನಿಯೋಜನೆ ಮಾಡಲಾಗುತ್ತಿದೆ. ಇದರಿಂದಾಗಿ ಶಾಲೆಗಳಲ್ಲಿ ಸರಿಯಾದ ಸಮಯಕ್ಕೆ ಬೋಧನಾ ಕಾರ್ಯವನ್ನು ಪೂರ್ಣಗೊಳಿಸದೆ ಮಕ್ಕಳ ಪ್ರಗತಿ ಕುಂಠಿತವಾಗುತ್ತಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಯು, ಸರಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿದ್ದರು.

ಶಿಕ್ಷಕರನ್ನು ಅನ್ಯ ಕಾರ್ಯಗಳಿಗೆ ನೇಮಕ ಮಾಡುತ್ತಿರುವುದರಿಂದ ಬೋಧನೆಗೆ ತೊಡಕಾಗುತ್ತಿದೆ. ಸಮೀಕ್ಷಾ ಕಾರ್ಯದಲ್ಲಿ ಭಾಗಿಯಾದವರಿಗೆ ಈವರೆಗೆ ಗೌರವ ಧನ ನೀಡಿಲ್ಲ. ಗೌರವಧನ ಬಿಡುಗಡೆ ಸಂಬಂಧ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಅಲ್ಲದೇ ರಜಾ ದಿನಗಳಲ್ಲಿ ಕೆಲಸ ಮಾಡಿದವರಿಗೆ ಗಳಿಕೆ ರಜೆಯನ್ನೂ ಕೊಡುತ್ತಿಲ್ಲ ಎಂದಿದ್ದಾರೆ ಚಂದ್ರಶೇಖರ ನುಗ್ಗಲಿ, ರಾಜ್ಯಾಧ್ಯಕ್ಷ ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ

Views: 87

Leave a Reply

Your email address will not be published. Required fields are marked *