“ರಾಜ್ಯದಲ್ಲಿ ಸಂಚಾರ ದಂಡ ಪಾವತಿಗೆ 50% ರಿಯಾಯಿತಿ – ಹೇಗೆ, ಎಲ್ಲಿ ಪಾವತಿಸಬೇಕು?”

ರಾಜ್ಯ ಸರಕಾರವು ಪೊಲೀಸ್ ಇಲಾಖೆಯ ಇ-ಚಲನ್‌ನಲ್ಲಿ ದಾಖಲಾಗಿರುವ ಸಂಚಾರ ನಿಯಮ ಉಲ್ಲಂಘನೆ ದಂಡದ ಮೇಲೆ ಮತ್ತೆ ಶೇ. 50ರಷ್ಟು ರಿಯಾಯಿತಿ ಘೋಷಿಸಿದೆ. ಟ್ರಾಫಿಕ್ ರೂಲ್ಸ್​ ಉಲ್ಲಂಘಿಸಿ ದಂಡ ಪಾವತಿಸಬೇಕಿರುವ ವಾಹನ ಸವಾರರು ಆನ್‌ಲೈನ್ ಅಥವಾ ಹತ್ತಿರದ ಪೊಲೀಸ್ ಠಾಣೆಗಳಲ್ಲಿ ಕಟ್ಟಬಹುದು.

ಹಾಗಾದ್ರೆ, ಈ ಡಿಸ್ಕೌಂಟ್ ಆಫರ್ ಎಲ್ಲಿಂದ ಎಲ್ಲಿಯವರೆಗೆ ಎನ್ನುವ ಮಾಹಿತಿ ಇಲ್ಲಿದೆ. ಬೆಂಗಳೂರು, (ನೆಂಬರ್ 20): ಕರ್ನಾಟಕ ಸರ್ಕಾರವು ವಾಹನ ಸವಾರರಿಗೆ ಬಾಕಿ ಇರುವ ಸಂಚಾರ ದಂಡದ (traffic violation fines) ಮೇಲೆ 50% ರಿಯಾಯಿತಿ ಘೋಷಿಸಿದೆ. ಈ ಸಂಬಂಧ ರಾಜ್ಯ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ರಂಗಪ್ಪ ಕರಿಗಾರ ಅವರು ಇಂದು (ನವೆಂಬರ್ 20) ಅಧಿಕೃತ ಆದೇಶ ಹೊರಡಿಸಿದ್ದಾರೆ. ಈ ಸೌಲಭ್ಯವು ನಾಳೆಯಿಂದ ಅಂದರೆ ನವೆಂಬರ್ 21 ರಿಂದ ಡಿಸೆಂಬರ್ 12 ರವರೆಗೆ ಜಾರಿಯಲ್ಲಿರಲಿದ್ದು, ಈ ಅವಧಿಯಲ್ಲಿ ಚಾಲಕರು ತಮ್ಮ ಬಾಕಿ ದಂಡವನ್ನು ಅರ್ಧ ಮೊತ್ತಕ್ಕೆ ಪಾವತಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು.

ಸಂಚಾರ ದಂಡ ರಿಯಾಯಿತಿ ಕುರಿತಂತೆ ಸಾರಿಗೆ ಇಲಾಖೆ ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಪರಿಶೀಲಿಸಿದ ಬಳಿಕ, ಸರ್ಕಾರವು ಅದನ್ನು ಅಂಗೀಕರಿಸಿ ತಕ್ಷಣ ಜಾರಿಗೆ ತರಲು ಆದೇಶ ಹೊರಡಿಸಿದೆ. ಕಳೆದ ಬಾರಿ ದಂಡ ರಿಯಾಯಿತಿ ನೀಡಿದಾಗ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ಆದಾಯ ಹರಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಮತ್ತೊಮ್ಮೆ ಈ ಆಫರ್ ನೀಡಲಾಗಿದ್ದು, ಸರ್ಕಾರದ ಆದೇಶದಂತೆ ನಾಳೆಯಿಂದಲೇ ಅಂದರೆ ನವೆಂಬರ್ 21ದಿಂದಲೇ ರಾಜ್ಯದಾದ್ಯಂತ 50% ದಂಡ ರಿಯಾಯಿತಿ ಯೋಜನೆ ಜಾರಿಗೆ ಬರಲಿದ್ದು, ಈ ವಿಶೇಷ ಅವಕಾಶ ಡಿಸೆಂಬರ್ 12 ರವರೆಗೆ ಮಾತ್ರ ಲಭ್ಯವಿರಲಿದೆ.

ಚಾಲಕರು ಈ ಅವಧಿಯೊಳಗೆ ತಮ್ಮ ಬಾಕಿ ಇರುವ ಸಂಚಾರ ದಂಡಗಳನ್ನು 50% ರಿಯಾಯಿತಿಯಲ್ಲಿ ಪಾವತಿಸಬಹುದು. ಎಲ್ಲಿ ದಂಡ ಕಟ್ಟಬೇಕು? ದಂಡ ಪಾವತಿ ಉಳಿಸಿಕೊಂಡಿರುವ ವಾಹನ ಸವಾರರು ಬೆಂಗಳೂರಿನಲ್ಲಿ ಸಂಚಾರ ಪೊಲೀಸ್‌ ಠಾಣೆಗಳು, ಸಂಚಾರ ನಿರ್ವಹಣಾ ಕೇಂದ್ರ, ಕರ್ನಾಟಕ ಒನ್‌ ಹಾಗೂ ಬೆಂಗಳೂರು ಒನ್‌ ವೆಬ್‌ಸೈಟ್‌ಗಳಲ್ಲಿ ವಿವರ ಪಡೆದು ಪಾವತಿಸಬಹುದು. ಜಿಲ್ಲೆಗಳಲ್ಲಿ ಸಮೀಪದ ಪೊಲೀಸ್‌ ಠಾಣೆಗಳಿಗೆ ಖುದ್ದು ಭೇಟಿ ನೀಡಿ ರಿಯಾಯಿತಿ ದರದಲ್ಲಿ ದಂಡ ಕಟ್ಟಬಹುದಾಗಿದೆ. ಇನ್ನು ಆನ್‌ಲೈನ್‌ ಮೂಲಕ ಪಾವತಿ ಮಾಡುವವರು ಕರ್ನಾಟಕ ಸ್ಟೇಟ್‌ ಪೊಲೀಸ್‌ (ಕೆಎಸ್‌ಪಿ) ಆ್ಯಪ್‌ ಬಿಟಿಪಿ ಅಸ್ತ್ರಂ ಮುಖಾಂತರವೂ ಖುದ್ದಾಗಿ ದಂಡ ಪಾವತಿಸಬಹುದಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಸಂಚಾರ ನಿಯಮ ಉಲ್ಲಂಘನೆಯ ನೂರಾರು ಕೋಟಿ ರೂ. ದಂಡ ಕಟ್ಟದೆ ವಾಹನ ಸವಾರರು ಬಾಕಿ ಉಳಿಸಿಕೊಂಡಿದ್ದರು. ಹೀಗಾಗಿ, ಸಾರಿಗೆ ಇಲಾಖೆ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಪ್ರಾಧಿಕಾರ ಜಂಟಿ ಸಭೆ ನಡೆಸಿ 2023ರಲ್ಲಿ ಮೊದಲ ಬಾರಿಗೆ ದಂಡ ಪಾವತಿಗೆ ಶೇ. 50ರಷ್ಟು ರಿಯಾಯಿತಿಗೆ ಶಿಫಾರಸು ಮಾಡಿದ್ದವು. ಇದಕ್ಕೆ ಸರ್ಕಾರ ಸಹ ಒಪ್ಪಿ ರಿಯಾಯಿತಿ ಘೋಷಿಸಿತ್ತು. ರಿಯಾಯಿತಿ ದರದಲ್ಲಿ ದಂಡ ಪಾವತಿಗೆ ವಾಹನ ಸವಾರರು ಹೆಚ್ಚು ಆಸಕ್ತಿ ತೋರಿಸಿ ಮೊದಲ ಹಂತದಲ್ಲಿ ರಾಜ್ಯಾದ್ಯಂತ 120 ಕೋಟಿ ರೂ.ಗಳಿಗೂ ಹೆಚ್ಚು ದಂಡ ಪಾವತಿಯಾಗಿತ್ತು. ಬಳಿಕ ದಂಡ ಪಾವತಿ ಅವಧಿಯನ್ನು ಹಂತ- ಹಂತವಾಗಿ ವಿಸ್ತರಿಸಲಾಗಿತ್ತು.

Views: 21

Leave a Reply

Your email address will not be published. Required fields are marked *