ತೀವ್ರ ವಿವಾದಕ್ಕೆ ಕಾರಣವಾಗಿದ್ದ 545 PSI ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ.

ಬೆಂಗಳೂರು, ಅಕ್ಟೋಬರ್ 21: ತೀವ್ರ ವಿವಾದಕ್ಕೆ ಕಾರಣವಾಗಿದ್ದ 545 ಪಿಎಸ್ಐ ಹುದ್ದೆಗಳಿಗೆ (545 PSI posts) ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಸೋಮವಾರ ಗೃಹ ಇಲಾಖೆ ಪ್ರಕಟ ಮಾಡಿದೆ. ಹಗರಣ ಹಿನ್ನಲೆ 545 ಪಿಎಸ್ಐ ಹುದ್ದೆಗಳಿಗೆ ಮರುಪರೀಕ್ಷೆ ನಡೆಸಲಾಗಿತ್ತು. ಇದೀಗ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ಮಾಡಲಾಗಿದೆ. ಆ ಮೂಲಕ ರಾಜ್ಯ ಸರ್ಕಾರ ದೀಪಾವಳಿ ಬಹುಮಾನ ನೀಡಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ 545 ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ನಡೆದಿತ್ತು. ಇದು ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಸಾಕಷ್ಟು ಜನರನ್ನು ಬಂಧಿಸಲಾಗಿತ್ತು. ಬಳಿಕ ಹೈಕೋರ್ಟ್‌ ನೀಡಿದ್ದ ಸೂಚನೆ ಮೇರೆಗೆ 2024 ಜನವರಿ 23ರಂದು ರಾಜ್ಯ ಸರ್ಕಾರ ಮರು ಪರೀಕ್ಷೆ ನಡೆಸಿತ್ತು.

ಕೆಪಿಎಸ್​ಸಿ ಬದಲು‌ ಮೊದಲ ಬಾರಿಗೆ ಕೆಇಎ ಮೂಲಕ‌ ಪರೀಕ್ಷೆ ನಡೆಸಲಾಗಿತ್ತು. ಬಳಿಕ 2021ರ ಅಕ್ಟೋಬರ್​ನಲ್ಲಿ ನಡೆದಿದ್ದ ಪರೀಕ್ಷೆಯಲ್ಲಿ ಅಕ್ರಮ ಕೇಳಿಬಂದಿತ್ತು. ಲಿಖಿತ ಪರೀಕ್ಷೆಯಲ್ಲಿ ಅಕ್ರಮ ಆರೋಪ ಹಿನ್ನೆಲೆ ಸಿಐಡಿ ತನಿಖೆ ನಡೆಸಿತ್ತು. ಸಿಐಡಿ ಮಧ್ಯಂತರ ವರದಿ ಆಧರಿಸಿ ಲಿಖಿತ ಪರೀಕ್ಷೆ ರದ್ದು ಮಾಡಲಾಗಿತ್ತು.

ಮರು ಪರೀಕ್ಷೆಗೆ 2022 ಏಪ್ರಿಲ್​ನಲ್ಲಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಆದೇಶ ಪ್ರಶ್ನಿಸಿ ಅಭ್ಯರ್ಥಿಗಳು ಹೈಕೋರ್ಟ್ ಮೊರೆಹೋಗಿದ್ದರು. ಅರ್ಜಿ ವಜಾಗೊಳಿಸಿದ್ದ ಹೈಕೋರ್ಟ್ ಮರು ಪರೀಕ್ಷೆಗೆ ಸೂಚಿಸಿತ್ತು. ಬಳಿಕ 117 ಕೇಂದ್ರದಲ್ಲಿ 54 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಇಂದು ಮರುಪರೀಕ್ಷೆ ಸಂಬಂಧ ತಾತ್ಕಾಲಿಕ ಆಯ್ಕೆಯನ್ನು ಗೃಹ ಇಲಾಖೆ ಪ್ರಕಟಿಸಿದೆ.

ಇನ್ನು ಈ 545 ಪಿಎಸ್ಐ ನೇಮಕಾತಿ ಹಗರಣದಲ್ಲಿ ನೇಮಕಾತಿ ವಿಭಾಗದ ಮಾಜಿ ಎಡಿಜಿಪಿ ಅಮೃತ್‌ಪೌಲ್‌, ಕಿಂಗ್ ಪಿನ್ ಆರ್.ಡಿ.ಪಾಟೀಲ್, ಕೆಲ ಪೊಲೀಸ್‌ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಅಭ್ಯರ್ಥಿಗಳು ಸೇರಿದಂತೆ ರಾಜ್ಯಾದ್ಯಂತ 100ಕ್ಕೂ ಹೆಚ್ಚು ಜನರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು.

Source : https://tv9kannada.com/employment/karnataka-govt-released-provisional-selection-list-of-545-psi-posts-taja-suddi-ggs-922180.html

Leave a Reply

Your email address will not be published. Required fields are marked *