5th Test: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 6 ರನ್‌ ವಿರೋಚಿತ ಗೆಲುವು: ಟೆಸ್ಟ್ ಸರಣಿ ಸಮಬಲ!

ಲಂಡನ್: ಆತಿಥೇಯ ಇಂಗ್ಲೆಡ್ ನಲ್ಲಿ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯ ಐದನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ರೋಚಕ ಗೆಲುವು ಸಾಧಿಸಿದೆ. ಈ ಪಂದ್ಯದ ಗೆಲುವಿನ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸಿದೆ. ದ್ವಿತೀಯ ಇನ್ನಿಂಗ್ಸ್ ನಲ್ಲಿಇಂಗ್ಲೆಂಡ್ ಗೆ ಗೆಲ್ಲಲು 374 ರನ್ ಬೇಕಿತ್ತು.

ಆದರೆ 367 ರನ್ ಗಳಿಗೆ ಇಂಗ್ಲೆಂಡ್ ತಂಡವನ್ನು ಆಲೌಟ್ ಮಾಡುವ ಮೂಲಕ ಭಾರತ ವಿರೋಚಿತ ಗೆಲುವು ಸಾಧಿಸಿತು. ಭಾರತೀಯ ಬೌಲರ್ ಗಳಾದ ಪ್ರಸಿದ್ಧ್ ಕೃಷ್ಣ ಮತ್ತು ಮೊಹಮ್ಮದ್ ಸಿರಾಜ್ ಉತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿ ತಂಡಕ್ಕೆ ಗೆಲುವು ತಂದುಕೊಟ್ಟರು. ಭಾರತ ಮತ್ತು ಇಂಗ್ಲೆಂಡ್ ತಲಾ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು ಒಂದು ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು.

ಐದನೇ ದಿನವಾದ ಇಂದು ಇಂಗ್ಲೆಂಡ್ ತಂಡದ ಬಳಿ ನಾಲ್ಕು ವಿಕೆಟ್ ಇದ್ದು 35 ರನ್ ಬಾರಿಸಬೇಕಿತ್ತು. ಇಂಗ್ಲೆಂಡ್ ಗೆಲುವಿನ ಹೊಸ್ತಿಲಲ್ಲಿತ್ತು. ಎಲ್ಲರೂ ಟೀಮ್ ಇಂಡಿಯಾದ ಸೋಲನ್ನು ಊಹಿಸಿದ್ದರು. ಆದರೆ ಟೆಸ್ಟ್‌ನ ಐದನೇ ದಿನದಂದು ಟೀಮ್ ಇಂಡಿಯಾದ ಬೌಲರ್‌ಗಳು ಹೊಸ ಇತಿಹಾಸ ನಿರ್ಮಿಸಿದರು. ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಒಟ್ಟಾಗಿ ಇಂಗ್ಲೆಂಡ್‌ನ ಬಾಯಿಂದ ಜಯವನ್ನು ಕಸಿದುಕೊಂಡರು. ಭಾರತೀಯ ಬೌಲರ್‌ಗಳು ಓವಲ್‌ನಲ್ಲಿ ಅಸಾಧ್ಯವಾದುದ್ದನ್ನು ಸಾಧಿಸಿದರು. ಇದು ಬಹುಶಃ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಮಾನಕ್ಕೊಮ್ಮೆ ಸಂಭವಿಸುತ್ತದೆ.

ಸಿರಾಜ್ ಅವರ ಮಾರಕ ಬೌಲಿಂಗ್‌ನ ಬಲದಿಂದ, ಭಾರತ ತಂಡವು ರೋಚಕ ಪಂದ್ಯದಲ್ಲಿ ಇಂಗ್ಲೆಂಡ್ ಅನ್ನು 6 ರನ್‌ಗಳಿಂದ ಸೋಲಿಸಿತು. ಆಟವು ಪ್ರತಿ ಚೆಂಡಿನಲ್ಲೂ ತಿರುಗುತ್ತಿತ್ತು. ಅಭಿಮಾನಿಗಳು ಉಸಿರು ಬಿಗಿಹಿಡಿಯುವಂತೆ ಮಾಡಿತ್ತು. ಆದರೆ ಕ್ರಿಕೆಟ್ ಮೈದಾನದಲ್ಲಿ ಪವಾಡಗಳು ನಡೆದಿವೆ. ಟೀಮ್ ಇಂಡಿಯಾ ಓವಲ್‌ನಲ್ಲಿ ಪವಾಡ ಮಾಡಿದೆ.

ಇಂಗ್ಲೆಂಡ್ ಗೆಲ್ಲಲು 35 ರನ್‌ಗಳ ಅಗತ್ಯವಿತ್ತು. ಐದನೇ ದಿನದಂದು ಜೇಮೀ ಸ್ಮಿತ್ ಮತ್ತು ಓವರ್ಟನ್ ಬ್ಯಾಟಿಂಗ್ ಮಾಡಲು ಬಂದರು. ಇಂಗ್ಲೆಂಡ್ 347 ರನ್ ಗಳಿಸಿದ್ದಾಗ ಸಿರಾಜ್ ಅವರ ಸ್ವಿಂಗ್ ಚೆಂಡು ಜೇಮೀ ಸ್ಮಿತ್ ಅವರು ಔಟಾಗುವಂತೆ ಮಾಡಿತು. ಈ ಮೂಲಕ ಇಂಗ್ಲೆಂಡ್ ಗೆ ಏಳನೇ ಹೊಡೆತ ಬಿತ್ತು. ಸಿರಾಜ್ ಜೇಮೀ ಓವರ್ಟನ್ ಅವರನ್ನು ಔಟ್ ಮಾಡಿದರು.

ಇಂಗ್ಲೆಂಡ್ ಈಗ 8 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಗೆಲಲ್ಲು ಇನ್ನೂ 20 ರನ್‌ಗಳ ದೂರದಲ್ಲಿತ್ತು. ಇನ್ನೊಂದು ತುದಿಯಿಂದ ವಿನಾಶಕಾರಿ ಬೌಲಿಂಗ್ ಮಾಡುತ್ತಿದ್ದ ಪ್ರಸಿದ್ಧ್ ಕೃಷ್ಣ ಜೋಶ್ ಟಂಗ್ ಅವರನ್ನು ಬೌಲ್ಡ್ ಮಾಡಿದರು. ಆಗ ಇಂಗ್ಲೆಂಡ್ ಶಿಬಿರದಲ್ಲಿ ಮೌನ ಆವರಿಸಿತ್ತು. ಭಾರತೀಯ ತಂಡ ಮತ್ತು ಪ್ರೇಕ್ಷಕರು ಹೊಸ ಜೀವನವನ್ನು ಪಡೆದಂತೆ ಕಾಣುತ್ತಿತ್ತು. ಆದರೆ ಕೆಲಸ ಇನ್ನೂ ಮುಗಿದಿಲ್ಲ ಮತ್ತು ಒಂದು ವಿಕೆಟ್ ಉಳಿದಿತ್ತು.

ಗಾಯಗೊಂಡಿದ್ದರೂ ಕ್ರಿಸ್ ವೋಕ್ಸ್ ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಬಂದರು. ಆದರೆ ಟೀಮ್ ಇಂಡಿಯಾ ಗಸ್ ಅಟ್ಕಿನ್ಸನ್‌ನಿಂದ ಅಪಾಯದಲ್ಲಿತ್ತು. ಈ ವೇಳೆ ಅಟ್ಕಿನ್ಸನ್ ಸ್ಫೋಟಕ ಬ್ಯಾಟಿಂಗ್ ಮಾಡಲು ಮುಂದಾದರು. ಅಟ್ಕಿನ್ಸನ್ ಒಂದು ಚೆಂಡನ್ನು ಕನೆಕ್ಟ್ ಮಾಡುವಲ್ಲಿಯೂ ಯಶಸ್ವಿಯಾಗಿದ್ದು ಸಿಕ್ಸ್ ಬಾರಿಸಿದರು. ಈಗ ಇಂಗ್ಲೆಂಡ್‌ಗೆ 11 ರನ್‌ ಬೇಕಿತ್ತು. ಇಂಗ್ಲೆಂಡ್ ಪ್ರತಿ ರನ್‌ನೊಂದಿಗೆ ಗೆಲುವಿಗೆ ಹತ್ತಿರವಾಗುತ್ತಿತ್ತು. ಆತಿಥೇಯ ತಂಡಕ್ಕೆ 7 ರನ್‌ಗಳು ಬೇಕಾಗಿತ್ತು. ಆಗ ಭರವಸೆಗಳು ಸಿರಾಜ್ ಮೇಲೆ ಮಾತ್ರ ಇದ್ದವು. ನಂತರ ಸಿರಾಜ್ ಅದ್ಭುತ ಯಾರ್ಕರ್ ಹಾಕಿದ್ದು ಅಟ್ಕಿನ್ಸನ್ ಬೌಲ್ಡ್ ಆದರು. ಈ ವಿಕೆಟ್‌ನೊಂದಿಗೆ, ಟೀಮ್ ಇಂಡಿಯಾ ಸಂಭ್ರಮಾಚರಣೆಯಲ್ಲಿ ಮುಳುಗಿತು. ಇದು ಓವಲ್ ಮೈದಾನದಲ್ಲಿ ಒಂದು ಪವಾಡಕ್ಕಿಂತ ಕಡಿಮೆಯಿಲ್ಲ. ಈ ಪಂದ್ಯದ ಗೆಲುವು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ವರ್ಷಗಳ ಕಾಲ ನೆನಪಿನಲ್ಲಿ ಉಳಿಯುವಂತಹದು. ಸಿರಾಜ್ ಪಂದ್ಯದಲ್ಲಿ ಒಟ್ಟು 9 ವಿಕೆಟ್‌ಗಳನ್ನು ಕಬಳಿಸಿದರು.

Views: 15

Leave a Reply

Your email address will not be published. Required fields are marked *