ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ದಾವಣಗೆರೆ ಆ. 5 : ಸಿದ್ಧರಾಮರ ವ್ಯಕ್ತಿತ್ವ ಹಲವು ಮುಖಗಳಲ್ಲಿ ಅರಳಿದೆ. ಸಿದ್ಧರಾಮರು ತನ್ನ ಜನಾನುರಾಗಿ ಕಾರ್ಯಗಳಿಂದ ಅಂದಿನ ಕನ್ನಡ ನಾಡಿನ ಜನಗಳ ಮನಸ್ಸಿನಲ್ಲಿ ಜೀವಂತವಾಗಿದ್ದರು. ಇವರು “ಸಮಕಾಲೀನ ಜನರಿಗೆ ಗುರುವಾಗಿ, ಉತ್ತರಕಾಲೀನರಿಗೆ ದೇವನಾಗಿ” ದರ್ಶನವನ್ನು ನೀಡುತ್ತಾರೆ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ದಾವಣಗೆರೆ ನಗರದ ವೆಂಕಭೋವಿ ಕಾಲೋನಿಯಲ್ಲಿರುವ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠ ದಾವಣಗೆರೆ ಶಾಖೆಯಿಂದ ಜರುಗಿದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ದೇವರ 62ನೇ ರಥೋತ್ಸವ ಮಠದ ಸಂಸ್ಥಾಪಕರಾದ ಲಿಂಗೈಕ್ಯ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿರವರ 22ನೇ ಸಂಸ್ಮರಣೋತ್ಸವದ ದಿವ್ಯಾಧ್ಯಕ್ಷತೆವಹಿಸಿಕೊಂಡು ಮಾತನಾಡಿದ ಶ್ರೀಗಳು ಸಿದ್ಧರಾಮರ ವ್ಯಕ್ತಿತ್ವ ಅಸಾಧಾರಣವಾದುದು. ಒಂದು ಪರಂಪರೆಯನ್ನು ಕಟ್ಟುವಲ್ಲಿನ ತಾದಾತ್ಮ, ಬದ್ಧತೆ, ಪ್ರಸಿದ್ದಿ ಹಾಗೂ ಅವರ ದೈವತ್ವದ ಗುಣ ಒಂದು ಸಂಸ್ಕೃತಿಯನ್ನು ಹುಟ್ಟಿಹಾಕಿತು. ಸಿದ್ದರಾಮರದು ಶ್ರಮಿಕ ಪರಂಪರೆ. ಕನ್ನಡವೇ ಸಿದ್ಧರಾಮರ ಉಸಿರು ಈ ಮಣ್ಣಿನ ಭಾಷೆ, ಬಯಲ ಧರ್ಮ ಅವರ ಮಾಧ್ಯಮವಾಯಿತು. ಜನರನ್ನು ಪ್ರೀತಿಸುವ ಜನಮುಖಿ ವ್ಯಕ್ತಿತ್ವ, ಸಮಾಜದ ಕಷ್ಟಕೋಟಲೆಗಳಿಗೆ ತುಡಿಯುವ, ಸ್ಪಂದಿಸುವ ತಾಯಿ ಹೃದಯ ಮಹಿಳೆಯರನ್ನು, ನೊಂದವರನ್ನು, ಅಶಕ್ತರನ್ನು ಪ್ರೀತಿಯಿಂದ ಕಾಣುವ, ಅವರಿಗೆ ಬದುಕನ್ನು ಕಲ್ಪಿಸಿಕೊಡುವ ಅಂತಃಕರಣ ಆ ನಿಟ್ಟಿನಲ್ಲಿ ತಾನು ಕಟ್ಟಿದ ನಿರ್ವಹಿಸಿದ ಕೆರೆ, ಕಟ್ಟೆ, ಕಾಲುವೆ, ಬಾವಿ, ಛತ್ರ, ಮಂದಿರ, ಶಿಕ್ಷಣ ಕ್ಷೇತ್ರಗಳು ಇತರೆ ಸಾಮಾಜಿಕ ಕೆಲಸಗಳೊಡನೆ ಇದ್ದರೂ ಅವುಗಳನ್ನೇ ತನ್ನ ಕಾರುಬಾರು ಮಾಡಿಕೊಳ್ಳದ ಜಂಗಮತನ ಸಿದ್ದರಾಮರನ್ನು ಇತರ ಆಧ್ಯಾತ್ಮ ಶರಣ ಜೀವಿಗಳಿಗಿಂತ ವಿಭಿನ್ನ ಮಾಡಿತು. ಸಮಾಜ ಸುಧಾರಣೆಯ ಚಿಂತನೆ, ಒಳನೋಟ ಸಿದ್ಧರಾಮ ಸಂಸ್ಕೃತಿ ನೆಲೆಯೂರಲು ಕಾರಣವಾಯಿತು. “ದೇಹವನ್ನೇ ದೇಗುಲವಾಗಿಸಿಕೊಂಡ” ಶರಣ ಸಂಸ್ಕೃತಿಯನ್ನು ಒಪ್ಪಿಕೊಂಡೂ ತನ್ನತನವನ್ನು ಉಳಿಸಿಕೊಂಡು ಮೇರುಮಟ್ಟಕ್ಕೆ ಬೆಳೆದದ್ದು ಸಿದ್ಧರಾಮರ ಸಂಸ್ಕೃತಿ. ಮಠಮಾನ್ಯಗಳನ್ನು ಕಟ್ಟಿಯೂ ಅಲ್ಲಿರದ, ಸಾಮಾಜಿಕ ವ್ಯಕ್ತಿಯಾದರೂ ಆಧ್ಯಾತ್ಮ ಚಿಂತಕನಾದ, ಒಂದು ನಾಡು ಮಾತನಾಡುವಷ್ಟು ಕೆಲಸವನ್ನು ತನ್ನ ಒಳಗಣ್ಣಿನ ಬೆಳಕಿನಿಂದ ವ್ಯಕ್ತಿಯೊಬ್ಬ ಶಕ್ತಿಯಾಗಿ ನಿರ್ವಹಿಸಿದ ರೀತಿ ಅನನ್ಯವಾದುದು. ಶ್ರಮ ಸಂಸ್ಕೃತಿ ಸಿದ್ಧರಾಮ ಸಂಸ್ಕೃತಿಯ ಆತ್ಮ. ಈ ಚಿಂತನೆಯೇ ಎಲ್ಲರನ್ನು ಸಮಾನವಾಗಿ ಪ್ರೀತಿಸುವ, ಎಲ್ಲರಿಗೂ ಬದುಕು ನೀಡುವ ಚೈತನ್ಯದ ಆಧಾರ ಗುಣ. “ಶಿವಯೋಗಿಯ ಶರೀರ ವೃಥಾ ಸವೆಯಲಾಗದು, ಅನುಗೊಂಬನಿತು ಕಾಯಕ ನಡೆಯಬೇಕು” ಎಂಬ ಕಾಯಕ ನಿಷ್ಠೆಯೇ ಸಿದ್ಧರಾಮ ಸಂಸ್ಕೃತಿಯ ಮೂಲಾಧಾರ. ತನ್ನ ಅಮೋಘ ವ್ಯಕ್ತಿತ್ವದಿಂದಾಗಿ ಬದುಕಿದ್ದಾಗಲೇ ದಂತಕತೆಯಾದವರು ಸಿದ್ಧರಾಮರು. ಹೊಸ ಪರಂಪರೆಯ ಸಂಸ್ಕೃತಿಯೊಂದಕ್ಕೆ ದಾರಿಯಾದ ವರು ಎಂದು ತಿಳಿಸಿದರು.
ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿ ಸಿದ್ಧರಾಮನ ಜೀವನವನ್ನು ಗಮನಿಸಿದಾಗ, ಅವನಿಗೆ ಆತ್ಮಜ್ಞಾನಿ ಅಲ್ಲಮಪ್ರಭುವಿನ ದರ್ಶನವಾಗುವವರೆಗೆ, ನಾಥಪರಂಪರೆ ಚಿಂತನೆಯ ಪರಮಾರ್ಥ, ಇಹ-ಪರ, ಸ್ವರ್ಗ- ನರಕ, ಮಡಿ-ಮೈಲಿಗೆ, ಪೂರ್ವಜನ್ಮ-ಪುನರ್ಜನ್ಮ, ವರ್ಣ-ವರ್ಗ, ಸ್ತ್ರೀ-ಪುರುಷ, ಶಾಂತಿ-ಸಮಾರಾಧನೆ, ತೀರ್ಥಯಾತ್ರೆ, ಹೋಮ-ಹವನ, ಪೂಜೆ-ಹರಕೆ, ಗುಡಿ- ಗುಂಡಾರ ಇಂತಹ ಅರ್ಥಹೀನ ಪದ್ಧತಿ ಮತ್ತು ಆಚರಣೆಗಳೇ ಧರ್ಮವೆಂಬ ನಂಬಿಕೆಯಲ್ಲಿದ್ದ. ಆದರೆ ಶರಣ ಸಿದ್ದಾಂತದ ಗುರು-ಲಿಂಗ-ಜಂಗಮದ ಅರಿವಾದ ನಂತರ, ಕಾಯಕ, ದಾಸೋಹ, ಅನುಭಾವಗಳು ಅರ್ಥವಾದಾಗ ಅವನು ಪೂರ್ಣ ಪರಿವರ್ತನೆಗೊಳ್ಳುತ್ತಾನೆ ಎಂದು ತಿಳಿಸಿದರು.
ವಿರಕ್ತಮಠದ ಬಸವಪ್ರಭು ಶ್ರೀಗಳು ಮಾತನಾಡಿ ಸಿದ್ದರಾಮರ ಆದ್ಯ ಉದ್ದೇಶವೇ ವ್ಯಕ್ತಿಗತ ಪರಿವರ್ತನೆ. ವ್ಯಕ್ತಿ ಪರಿವರ್ತನೆಗೊಂಡರೆ, ಸಹಜವಾಗಿಯೇ ಸಮುದಾಯದ ಪರಿವರ್ತನೆಯಾಗುತ್ತದೆ. ಅಂತಹ ವ್ಯಕ್ತಿಗತ ಪರಿವರ್ತನೆಗೆ ಸಿದ್ಧರಾಮ ಒಂದು ಉಜ್ವಲ ನಿದರ್ಶನ. ಲಕ್ಷ ಲಕ್ಷ ಸಂಖ್ಯೆಯಲ್ಲಿದ್ದ ಭಕ್ತ ಸಮುದಾಯವೆಲ್ಲ ಸ್ವಾಭಾವಿಕವಾಗಿಯೇ ಸಿದ್ಧರಾಮನ ಶರಣ ಮಾರ್ಗವನ್ನು ಅನುಸರಿಸಲಿ ಎಂದು ಕರೆ ನೀಡಿದರು.
ಅಂಬಿಗರ ಗುರುಪೀಠದ ಜಗದ್ಗುರು ಶ್ರೀ ಶಾಂತಬೀಷ್ಮ ಚೌಡಯ್ಯ ಸ್ವಾಮೀಜಿ ಮಾತನಾಡಿ ಶುಷ್ಕ ಆಚರಣೆಗಳು, ಕಂದಾಚಾರಗಳು, ಮೂಢನಂಬಿಕೆಗಳು, ಆಡಂಬರದ ಡಾಂಬಿಕ ಆಚರಣೆಗಳು, ನಡೆ-ನುಡಿಗಳಲ್ಲಿ ಹೊಂದಾಣಿಕೆಯಿಲ್ಲದ ನೈತಿಕ ಹೀನಸ್ಥಿತಿ, ದೀನ- ದಲಿತರ ಶೋಷಣೆಗಳನ್ನು ಕಂಡು ಅವರ ಮನಸ್ಸು ಮರುಗಿತು. ಸರ್ವಜೀವಿಗಳಿಗೆ ಒಳಿತನ್ನುಂಟು ಮಾಡುವ ಸಂಕಲ್ಪದಿಂದ ಅವರು ತರ-ತಮ ಭಾವವಿಲ್ಲದ ಸಮಾನತೆಯ ಸುಂದರ ಸಮಾಜವನ್ನು ನಿರ್ಮಿಸಲು ನಿರ್ಧರಿಸಿದರು. ಅಂಧಾನುಕರಣೆ, ದೇವರ ಹೆಸರಿನಲ್ಲಿ ನಡೆಯುತ್ತಿದ್ದ ಶೋಷಣೆಗಳ ವಿರುದ್ಧ ಸಮರವನ್ನೇ ಸಾರಿದರು. ದಯೆ, ಕರುಣೆಗಳೇ ಧರ್ಮದ ಹೃದಯವೆಂದು ಒತ್ತಿ ಹೇಳಿದರು. ಮಾನವೀಯತೆ, ಅನುಕಂಪಗಳು ಧರ್ಮದ ತಳಹದಿಗಳಾಗಿರಬೇಕು ಎಂದು ಮನವರಿಕೆ ಮಾಡಿದರು. ವಿಗ್ರಹಾರಾಧನೆ, ಯಜ್ಞ ವಿಧಿಗಳು, ಅಸ್ಪೃಶ್ಯತೆ ಮತ್ತು ಹೆಣ್ಣಿನ ಬಗೆಗಿನ ಹೀನ ನಡೆವಳಿಕೆಗಳನ್ನು ಕಟುವಾಗಿ ವಿರೋಧಿಸಿದರು. ಪ್ರತಿಯೊಬ್ಬ ವ್ಯಕ್ತಿಯೂ ಸ್ವತಂತ್ರವಾಗಿ ಆಲೋಚಿಸಲು ಕಲಿಸಿದರು. ಮನಶ್ಯುದ್ಧಿ ಮತ್ತು ನೈತಿಕ ಪರಿಶುದ್ಧ ಜೀವನದ ಮೇಲ್ಕೆಯನ್ನು ಎತ್ತಿಹಿಡಿದರು. ಜ್ಞಾನೋದಯವೇ ಜೀವನದ ಪರಮ ಗುರಿಯಾಗಬೇಕು ಎಂದು ತಿಳಿ ಹೇಳಿದರು. ದೀನ-ದಲಿತರಿಗೆ ಸಮಾನ ಸ್ಥಾನಮಾನಗಳನ್ನು ದೊರಕಿಸಿದರು. ಅವರಿಗೆ ಮಾತು ಕಲಿಸಿದ್ದು ಮಾತ್ರವಲ್ಲದೆ, ಬದುಕುವುದನ್ನೂ ಕಲಿಸಿದರೆಂದು ತಿಳಿಸಿದರು.

ದಾವಣಗೆರೆ ವಿರಕ್ತಮಠದ ಬಸವ ಪ್ರಭು ಸ್ವಾಮೀಜಿ,ಯಾದವ ಮಹಾ ಸಂಸ್ಥಾನದ ಜಗದ್ಗುರು ಶ್ರೀ ಕೃಷ್ಣ ಯಾದವಾನಂದ ಮಹಾಸ್ವಾಮಿಗಳು, ಮಡಿವಾಳ ಗುರು ಪೀಠದ ಜಗದ್ಗುರು ಶ್ರೀ ಬಸವ ಮಾಚಿದೇವ ಮಹಾಸ್ವಾಮಿಗಳು, ಹಡಪದ ಅಪ್ಪಣ್ಣ ಗುರು ಪೀಠದ ಜಗದ್ಗುರು ಶ್ರೀ ಅನ್ನದಾನಿ ಭಾರತೀಯ ಅಪ್ಪಣ್ಣ ಸ್ವಾಮಿಗಳು,ಕುಂಬಾರ ಗುರುಪೀಠದ ಜಗದ್ಗುರು ಶ್ರೀ ಕುಂಬಾರಗುಂಡಯ್ಯ ಮಹಾಸ್ವಾಮಿಗಳು,ಮೇದಾರ ಗುರು ಪೀಠದಶ್ರೀ ಇಮ್ಮಡಿ ಮೇದಾರ ಕೇತೇಶ್ವರ ಮಹಾಸ್ವಾಮಿಗಳು ಕೊರಟಿಕೆರೆಯ ಶ್ರೀ ಮಹಾಲಿಂಗ ಮಹಾಸ್ವಾಮಿಗಳು, ಹೊನಕಲ್ಲಿನ ಶ್ರೀ ಬಸವ ರಮಾನಂದ ಸ್ವಾಮೀಜಿ,ಶಿಕಾರಿಪುರದ ಶ್ರೀ ಚನ್ನಬಸವ ಸ್ವಾಮೀಜಿ,ಚೆನ್ನೆನಹಳ್ಳಿಯ ಶ್ರೀ ಬಸವ ಲಿಂಗ ಮೂರ್ತಿ ಮಹಾ ಸ್ವಾಮೀಜಿ, ಗುರುಮಠಕಲ್ಲಿನ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ, ಶ್ರೀ ಗುರುಲಿಂಗ ಸ್ವಾಮೀಜಿ,ಶ್ರೀ ಬಸವ ಭೂಷಣ ಸ್ವಾಮೀಜಿ,ಶ್ರೀ ನಿರಂಜನ ಸ್ವಾಮೀಜಿ ಶ್ರೀ ತಿಪ್ಪೇರುದ್ರಸ್ವಾಮೀಜಿ ಮಾಯಕೊಂಡ ಶಾಸಕ ಬಸವಂತಪ್ಪ, ಹರಪ್ಪನಹಳ್ಳಿ ಶಾಸಕಿ ಶ್ರೀಮತಿ ಲತಾ ಮಲ್ಲಿಕಾರ್ಜುನ,ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರವಿಕುಮಾರ ಎಸ್, ಮಹಾನಗರ ಪಾಲಿಕೆಯ ಮೇಯರ್ ವಿನಾಯಕ ಪೈಲ್ವಾನ್, ಸದಸ್ಯರಾದ ಎ ನಾಗರಾಜ, ಗಡಿಗುಡಿ ಮಂಜುನಾಥ, ಜಿ ಬಿ ವಿನಯ ಕುಮಾರ, ಭೋವಿ ನಿಗಮದ ಮಾಜಿ ನಿರ್ದೇಶಕ ಕಾಳಘಟ್ಟ ಹನುಮಂತಪ್ಪ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಉತ್ಸವ ಸಮಿತಿ ಹಾಗೂ ಶ್ರೀ ಪೀಠದ ಧರ್ಮದರ್ಶಿಗಳಾದ ಜಯಣ್ಣ. ಎಚ್, ಗೋಪಾಲ್ ವಿ, ನಾಗರಾಜ್ ಎ ಬಿ, ಟಿ ಮಂಜುನಾಥ್, ಶ್ರೀನಿವಾಸ್ ಪಿ, ವಿನಾಯಕ್. ಬಿಎನ್, ಡಿ ಬಸವರಾಜ್, ಇಂಜಿನಿಯರ್ ವೆಂಕಟೇಶ್, ಶ್ರೀನಿವಾಸ, ಶಿವಶಂಕರ್ ಶಿಲ್ಪಿ. ಟಿ, ಶ್ರೀಮತಿ ಉಮಾಕುಮಾರ, ರಾಜಣ್ಣ ಚನ್ನಗಿರಿ, ಅರ್ಜುನ್ ಜಗಳೂರು, ಮಂಜುನಾಥ್ ಜಿ. ಹೊನ್ನಾಳಿ, ರಾಜಣ್ಣ ಚಟ್ನಹಳ್ಳಿ. ಅಂಜಿನಪ್ಪ ಹರಪನಹಳ್ಳಿ, ವೀರಭದ್ರಪ್ಪ. ಹರಿಹರ, ದಿನೇಶ್. ನ್ಯಾಮತಿ, ವೀರೇಶ್ ಬಿ, ಚಾಮರಾಜ. ಎಂ, ವಿನೋದ್ ನಗರ, ಮಂಜುನಾಥ್ ನಲ್ಲಿ, ಪ್ರವೀಣ್, ಸೋಮಶೇಖರ. ಜಿ, ಶೇಖರಪ್ಪ, ಮಂಜಪ್ಪ. ಜಿ, ರವಿಕುಮಾರ್ ಪಿ ಉಪಸ್ಥಿತರಿದ್ದರು.
ವೆಂಕಭೋವಿ ಕಾಲೋನಿಯಲ್ಲಿರುವ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ ಮಠದಿಂದ ಪ್ರಾರಂಭವಾದ ಮೆರವಣಿಗೆ ಅರಳಿಮರ ವೃತ್ತ, ಗಣೇಶ ದೇವಸ್ಥಾನ, ಮಂಡಿಪೇಟೆ, ವಿಜಯಲಕ್ಷ್ಮಿ ರಸ್ತೆ, ಚೌಕಿ ಪೇಟೆ ಮೂಲಕ ವೆಂಕಭೋವಿ ಕಾಲೋನಿ ತಲುಪಿದ ಮೆರವಣಿಗೆಯಲ್ಲಿ ಪೂಜಾ ಕುಣಿತ, ಹುಲಿವೇಷ, ಕಂಸಾಳೆ, ಗಾರುಡಿಗೊಂಬೆ, ಕೀಲುಕುದುರೆ, ನಂಧಿಕೊಲು ಸಮಾಳ, ಕಹಳೆ, ನಾದಸ್ವರ, ಪೋತರಾಜನಕುಣಿತಾ, ತಮಟೆ ವಾದನ, ಡೊಳ್ಳು ಕುಣಿತಾ, ವಾದ್ಯ ಸಂಗೀತಾ, ನಾಸಿಕ್ ಡೊಲು, ಹಗಲು ವೇಷ ಜಾನಪದ ಕಲಾತಂಡಗಳು ವೈಭವನ್ನು ಹೆಚ್ಚಿಸಿದವು.