2028ರಲ್ಲಿ ಜೆಡಿಎಸ್ ಬಹುಮತ ಸಾಧಿಸಿ ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗಲಿ: ಚಿತ್ರದುರ್ಗದಲ್ಲಿ 66ನೇ ಹುಟ್ಟುಹಬ್ಬ ಆಚರಣೆ

ಚಿತ್ರದುರ್ಗ, ಡಿ.16:

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

2028ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಜಾತ್ಯಾತೀತ ಜನತಾದಳ (ಜೆಡಿಎಸ್) ಪಕ್ಷ ಬಹುಮತ ಸಾಧಿಸಿ, ಹೆಚ್.ಡಿ. ಕುಮಾರಸ್ವಾಮಿ ಅವರು ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಿ ಜನಸೇವೆ ಮಾಡುವಂತಾಗಲಿ ಎಂದು ಚಿತ್ರದುರ್ಗ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ. ಜಯ್ಯಣ್ಣ ಭಗವಂತನಲ್ಲಿ ಪ್ರಾರ್ಥಿಸಿದರು.

ಜೆಡಿಎಸ್ ಚಿತ್ರದುರ್ಗ ಜಿಲ್ಲಾ ಘಟಕದ ವತಿಯಿಂದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷರು ಹಾಗೂ ಕೇಂದ್ರ ಸರ್ಕಾರದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರ 66ನೇ ಜನ್ಮದಿನೋತ್ಸವವನ್ನು ಜಿಲ್ಲಾ ಕಚೇರಿಯಲ್ಲಿ ಕೇಕ್ ಕತ್ತರಿಸುವ ಮೂಲಕ ಸಂಭ್ರಮದಿಂದ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಗ್ರಾಮ ದೇವತೆ ಉಚ್ಚಂಗಿಯಲ್ಲಮ್ಮ ದೇವಾಲಯದಲ್ಲಿ ವಿಶೇಷ ಪೂಜೆ, ಕಬೀರಾನಂದಾಶ್ರಮದ ವೃದ್ಧಾಶ್ರಮದಲ್ಲಿನ ಹಿರಿಯರಿಗೆ ಹಾಗೂ ಶಾಲಾ ಮಕ್ಕಳಿಗೆ ಹಣ್ಣು ವಿತರಣೆ ಮಾಡುವ ಮೂಲಕ ಸಮಾಜಮುಖಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಎಂ. ಜಯ್ಯಣ್ಣ ಅವರು, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಕಡಿಮೆ ಅವಧಿಯಲ್ಲೇ ಸಾಲ ಮನ್ನಾ ಸೇರಿದಂತೆ ಜನಪರ ಯೋಜನೆಗಳನ್ನು ಜಾರಿಗೊಳಿಸಿ ರೈತರು ಹಾಗೂ ಬಡವರ ಬದುಕಿಗೆ ಆಸರೆಯಾಗಿದ್ದರು ಎಂದರು. ಇದೀಗ ಕೇಂದ್ರ ಸರ್ಕಾರದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾಗಿ ದೇಶದ ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಸ್ಥಗಿತಗೊಂಡ ಕೈಗಾರಿಕೆಗಳನ್ನು ಪುನರ್ ಸ್ಥಾಪಿಸುವ ಕಾರ್ಯದಲ್ಲಿ ತೊಡಗಿದ್ದು, ಇದರಿಂದ ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿಯಾಗಿ ನೆಮ್ಮದಿಯ ಜೀವನಕ್ಕೆ ದಾರಿ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.

2028ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸ್ಪರ್ಧಿಸಿ ಮತದಾರರ ಆಶೀರ್ವಾದದಿಂದ ಬಹುಮತ ಪಡೆದು ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದರೆ ರಾಜ್ಯದ ಚಿತ್ರಣವೇ ಬದಲಾಗಲಿದೆ. ಜನತೆಗೆ ಅಗತ್ಯವಾದ ಅಭಿವೃದ್ಧಿ ಹಾಗೂ ಕಲ್ಯಾಣ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ಕರ್ನಾಟಕವನ್ನು ಅಭಿವೃದ್ದಿಯ ದಿಕ್ಕಿನಲ್ಲಿ ಕೊಂಡೊಯ್ಯಲಿದ್ದಾರೆ. ಇದಕ್ಕಾಗಿ ರಾಜ್ಯದ ಎಲ್ಲ ಮತದಾರರ ಸಹಕಾರ ಅಗತ್ಯವಿದೆ ಎಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಜಿಲ್ಲಾ ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ್, ತಾಲ್ಲೂಕು ಅಧ್ಯಕ್ಷ ಸಣ್ಣ ತಿಮ್ಮಣ್ಣ, ಕಾರ್ಯಾಧ್ಯಕ್ಷ ಜಿ.ಬಿ. ಶೇಖರ್, ಯುವ ಘಟಕ ಅಧ್ಯಕ್ಷ ಪ್ರತಾಪ್ ಜೋಗಿ, ಶಂಕರ್ ಮೂರ್ತಿ, ಹೆಚ್. ನಾಗರಾಜ್, ಕೊಟ್ಟಿಗೆ ಮಂಜುನಾಥ್, ಚಿದಾನಂದ, ಮಂಜುನಾಥ್, ಗೀತಮ್ಮ, ಗೀತಾ, ಶಿವಪ್ರಸಾದ್ ಗೌಡ, ಪರಮೇಶ್ವರಪ್ಪ ಈಚಘಟ್ಟ, ಕೆ. ಸೋಮಶೇಖರ್ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *