ಚಿತ್ರದುರ್ಗ ನ. 26
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಕನ್ನಡ ನಮ್ಮ ಮಾತೃ ಭಾಷೆ, ಆಂಗ್ಲ ಭಾಷೆ ಪರಕೀಯ ಭಾಷೆ, ನಮ್ಮ ಮಾತೃ ಭಾಷೆಯನ್ನು ಹೆಚ್ಚಾಗಿ ಬಳಕೆ ಮಾಡಿ ಅದನ್ನು ಉಳಿಸಿ ಬೆಳಸುವ ಹೊಣೆಗಾರಿಕೆ ನಮ್ಮೆಲ್ಲ ಮೇಲಿದೆ ಅತ್ಯಂತ ಸುಮಧುರ ಭಾಷೆ ಕನ್ನಡ ಇದು ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾಗಿದೆ ಎಂದು ಹಿರಿಯೂರಿನ ಭೀಮನಬಂಡೆಯ ಯಜ್ಞವ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಶಿವಾನಂದ್ ಬಂಡೆಹಳ್ಳಿ ತಿಳಿಸಿದರು.
ಶ್ರೀ ಗಾನಯೋಗಿ ಸಂಗೀತ ಬಳಗದವತಿಯಿಂದ ನಗರದ ಶ್ರೀಮತಿ. ಶಾರದಮ್ಮ ಶ್ರೀ ರುದ್ರಪ್ಪ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ 70ನೇ ಕನ್ನಡ ರಾಜ್ಯೋತ್ಸವದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿ ಮಾತನಾಡಿದ ಅವರು. ಕನ್ನಡದ ಬಗ್ಗೆ ಸರಿಯಾದ ತಿಳುವಳಿಕೆ ಹಾಗೂ ಅನುಭವಗಳು ಇಲ್ಲದ ಕಾರಣ ಭಾಷಾಪ್ರೇಮ ಮೂಲೆಗುಂಪಾಗುತ್ತಿದೆ ಕನ್ನಡ ಭಾಷೆ ನಮಗೆ ಸಂತೋಷ ನೀಡುವ, ಆನಂದ ಭಾಷ್ಪ ತರುವ ಶಕ್ತಿ ಹೊಂದಿದೆ. ಕನ್ನಡ ಲಿಪಿ ಅತ್ಯಂತ ಸುಂದರವಾದ ಲಿಪಿಯಾಗಿದೆ. ಜಗತ್ತಿನ ಅನೇಕ ವಿದ್ವಾಂಸರು ಕನ್ನಡ ಲಿಪಿಯನ್ನು ಸುಂದರವಾದ ಲಿಪಿಯೆಂದು ಹೇಳಿದ್ದಾರೆ ಪ್ರಾಚೀನ ಭಾಷೆಗಳಾದ ಸಂಸ್ಕøತ, ಪಾಳಿ, ಪ್ರಾಕೃತ ಹಾಗೂ ತಮಿಳು ಭಾಷೆಗಳ ಸಾಲಿನಲ್ಲಿ ಕನ್ನಡ ಸೇರುತ್ತದೆ. ಕನ್ನಡದ 8 ಜನ ಸಾಹಿತಿಗಳು ಜ್ಞಾನಪೀಠ ಪುರಸ್ಕಾರ ಪಡೆದಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪಡೆದ ಮಹನೀಯರ ಆ ಎಂಟು ಕೃತಿಗಳು ಅದ್ಭುತವಾಗಿವೆ. ಕನ್ನಡದ ಉಳಿವಿಗಾಗಿ ನಮ್ಮ ಪ್ರಯತ್ನ ಸಹ ಬೇಕು. ಕನ್ನಡಪರ ಕನಿಷ್ಢ ಪ್ರೇಮವನ್ನಾದರೂ ನಾವು ತೋರಬೇಕು. ಕನ್ನಡ ಬಳಸದ್ದಕ್ಕೆ ಕಾರಣ ನೀಡುವ, ಬೇರೆ ಭಾಷೆ ಬಳಸಿದ್ದಕ್ಕೆ ಸಮರ್ಥನೆ ಮಾಡುವುದನ್ನು ಬಿಟ್ಟು ಕನ್ನಡವನ್ನೇ ಎಲ್ಲಡೆ ಬಳಸಬೇಕು. ಕನ್ನಡ ಚಿರಸ್ಥಾಯಿಯಾಗಿ ಉಳಿಯಬೇಕು ಎಂದು ನುಡಿದರು.

ಬಹುಭಾಷೆಗಳ ನಡುವೆ ಕನ್ನಡದ ಸಾರ್ವಭೌಮತ್ವವನ್ನು ಹಾಗೂ ಆಸ್ಮಿತೆಯನ್ನು ಕಾಪಾಡುವ ಜವಾಬ್ದಾರಿ ನಮ್ಮೆಲರದ್ದಾಗಿದೆ. ಕನ್ನಡವನ್ನು ನಾವು ಉಳಿಸಿದರೆ ನಾವು ಕನ್ನಡವನ್ನು ಬೆಳಸಿದಂತೆ. ದೈನಂದಿನ ಜೀವನದಲ್ಲಿ ಕನ್ನಡ ಬಳಕೆಗೆ ಪ್ರಾಮುಖ್ಯತೆ ನೀಡಿದರೆ ಸಾಕು. ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಅನ್ಯ ಭಾಷೆಯನ್ನು ಬಳಸಬೇಕು. ಉಳಿದಂತೆ ಕನ್ನಡದಲ್ಲೇ ಮಾತನಾಡೋಣ, ಬರೆಯೋಣ. ಕನ್ನಡ ಸಾಹಿತ್ಯ ಅದ್ಭುತವಾಗಿದೆ. ಕನ್ನಡ ಸಾಹಿತ್ಯವನ್ನೇ ಓದೋಣ. ಅನ್ಯಭಾಷಿಕರಿಗೆ ಕನ್ನಡದ ಮಹತ್ವ ತಿಳಿಸೋಣ ಕನ್ನಡ ಕಲಿಸೋಣ. ನುಡಿ ಉಳಿದರೆ ನಾಡು ಉಳಿಯುತ್ತದೆ. ನಾಡು ಉಳಿದರೆ ನಾವು ಉಳಿಯಲು ಸಾಧ್ಯ ಎಂದು ತಿಳಿಸಿದರು.
ಶ್ರೀಮತಿ ಶಾಂತಮ್ಮ ಕೆ.ಟಿ. ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಆರು ವರ್ಷಗಳ ಹಿಂದೆ ಶ್ರೀ ಗಾನಯೋಗಿ ಸಂಗೀತ ಬಳಗವನ್ನು ಚಿತ್ರದುರ್ಗದಲ್ಲಿ ಪ್ರಾರಂಭ ಮಾಡಲಾಯಿತು ಅಂದು ಕೇವಲ 15 ರಿಂದ 20 ಜನರಿದ್ದ ತಂಡ ಇದು 100 ಜನರಿಗೆ ತಲುಪಿದೆ ಇಲ್ಲಿ ಸಂಗೀತವನ್ನು ಕಲಿಸುವುದರ ಜೊತೆಗೆ ಮನಕ್ಕೆ ಆನಂದವನ್ನು ನೀಡುವಮತ ಕಾರ್ಯವನ್ನು ಮಾಡಲಾಗುತ್ತಿದೆ. ತೋಟಪ್ಪರವರು ಯಾವುದೇ ಫಲಾಪೇಕ್ಷೆ ಇಲ್ಲದೆ ಸಂಗೀತದ ಸೇವೆಯನ್ನು ಮಾಡುತ್ತಿದ್ದಾರೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಗಾನಯೋಗಿ ಸಂಗೀತ ಬಳಗದ ಅಧ್ಯಕ್ಷರಾದ ತೋಟಪ್ಪ ಉತ್ತಂಗಿ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸಂಗೀತ ಶಿಕ್ಷಕರಾದ ವಿದೂಷಿ ಶ್ರೀಮತಿ ಮೀನಾಕ್ಷಿ ಭಟ್, ತಬಲಾ ವಾದಕರಾದ ಚಂದ್ರಪ್ಪ ಐಯಿತೋಳ್, ರಂಗ ಕಲಾವಿದರಾದ ಗದಿಗಯ್ಯ ಕಿತ್ತೂರಮಠ ಹಾಗೂ ಜಾನಪದ ಕಲಾವಿದರಾದ ಗಂಜಿಗಟ್ಟಿ ಆರ್ ಕೃಷ್ಣಮೂರ್ತಿಯವರನ್ನು ಸನ್ಮಾನಿಸಲಾಯಿತು.

ಶ್ರೀ ಗಾನಯೋಗಿ ಸಂಗೀತ ಬಳಗದ ಹಿರಿಯ ಸದಸ್ಯರಾದ ಶ್ರೀಮತಿ ಶಾರದಮ್ಮ ರುದ್ರಪ್ಪ, ಗೌರವಾಧ್ಯಕ್ಷರಾದ ಬಸವರಾಜ ಕಟ್ಟಿ, ಕಾರ್ಯಾಧ್ಯಕ್ಷರಾದ ನಂದೀಶ್ ಜಿ.ಟಿ, ಕಾರ್ಯದರ್ಶಿ, ಶ್ರೀಮತಿ ಶೋಭ ಮಲ್ಲಿಕಾರ್ಜುನ್, ಸದಸ್ಯರಾದ ಶ್ರೀಮತಿ ಸೌಭಾಗ್ಯ ರಾಜ್ ಹಾಗೂ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ಅದ್ಯಕ್ಷರಾದ ಕರಿಯಪ್ಪ ಸಿ, ಜ್ಞಾನಮೂರ್ತಿ ಭಾಗವಹಿಸಿದ್ದರು.
ಶ್ರೀ ಗಾನಯೋಗಿ ಸಂಗೀತ ಬಳಗದ ಸದಸ್ಯರು ಪ್ರಾರ್ಥಿಸಿದರೆ, ಶ್ರೀಮತಿ ರೀನಾ ವೀರಭದ್ರಪ್ಪ ಸ್ವಾಗತಿಸಿದರು, ಶ್ರೀಮತಿ ನಿರ್ಮಲಾ ಬಿ. ವಂದಿಸಿದರು. ಶ್ರೀಮತಿ ಗೀತಾ ರುದ್ರೇಶ್ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಶ್ರೀ ಗಾನಯೋಗಿ ಸಂಗೀತ ಬಳಗದ ಸದಸ್ಯರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.
Views: 193