Supreme court on Karnataka Half Year Board Exam: 8, 9 ಮತ್ತು 10ನೇ ತರಗತಿಗಳ ಅರ್ಧವಾರ್ಷಿಕ ಬೋರ್ಡ್ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸದಂತೆ ಸುಪ್ರೀಂಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿದೆ. ಈ ವೇಳೆ ಪೀಠ ಕರ್ನಾಟಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ನವದೆಹಲಿ, ಅಕ್ಟೋಬರ್ 21: ವಿವಿಧ ತರಗತಿಗಳಿಗೆ ಅರ್ಧವಾರ್ಷಿಕ ಬೋರ್ಡ್ ಪರೀಕ್ಷೆಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿರುವ ಬಗ್ಗೆ ಸುಪ್ರೀಂಕೋರ್ಟ್ (Supreme Court) ಸೋಮವಾರ ಕರ್ನಾಟಕ ಸರ್ಕಾರವನ್ನು (Karnataka Government) ತರಾಟೆಗೆ ತೆಗೆದುಕೊಂಡಿತು. ಇದೇ ವೇಳೆ ಕರ್ನಾಟಕದ (Karnataka) ಎಲ್ಲ ಜಿಲ್ಲೆಗಳಲ್ಲಿ 8, 9 ಮತ್ತು 10ನೇ ತರಗತಿಗಳ ಅರ್ಧವಾರ್ಷಿಕ ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳನ್ನು (8, 9 and 10th Half Year Exam Result) ಮುಂದಿನ ಆದೇಶದವರೆಗೆ ಪ್ರಕಟಿಸದಂತೆ ಸೂಚನೆ ನೀಡಿದೆ.
ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಪೀಠವು ಈ ಆದೇಶ ನೀಡಿದೆ. 8, 9 ಮತ್ತು 10ನೇ ತರಗತಿಗಳಿಗೆ ಪರೀಕ್ಷೆಯನ್ನು ಯಾವುದೇ ಜಿಲ್ಲೆಯಲ್ಲಿ ನಡೆಸದಿದ್ದರೆ, ಆ ಜಿಲ್ಲೆಗಳಲ್ಲಿ ನಡೆಸಲು ಅನುಮತಿ ನೀಡುವುದಿಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದರು.
ಕರ್ನಾಟಕ ಸರ್ಕಾರ ಅನುಸರಿಸುತ್ತಿರುವ ಶಿಕ್ಷಣದ ಮಾದರಿಯನ್ನು ಬೇರೆ ಯಾವುದೇ ರಾಜ್ಯಗಳು ಅನುಸರಿಸುತ್ತಿಲ್ಲ. ವಿದ್ಯಾರ್ಥಿಗಳಿಗೆ ಏಕೆ ತೊಂದರೆ ನೀಡುತ್ತಿದ್ದೀರಿ? ರಾಜ್ಯ ಸರ್ಕಾರ ಈ ರೀತಿಯಾಗಿ ವರ್ತಿಸಬಾರದು. ನಿಮಗೆ ನಿಜವಾಗಿಯೂ ವಿದ್ಯಾರ್ಥಿಗಳ ಹಿತದ ಬಗ್ಗೆ ಕಾಳಜಿ ಇದ್ದರೆ ದಯವಿಟ್ಟು ಒಳ್ಳೆಯ ಶಾಲೆಗಳನ್ನು ತೆರೆಯಿರಿ ಎಂದು ಪೀಠ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿತು.
ರಾಜ್ಯದ ಏಳು ಗ್ರಾಮಾಂತರ ಜಿಲ್ಲೆಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 5, 8, 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಅರ್ಧವಾರ್ಷಿಕ ಬೋರ್ಡ್ ಪರೀಕ್ಷೆಗಳನ್ನು ನಡೆಸುವ ಸುತ್ತೋಲೆಯನ್ನು ರಾಜ್ಯ ಸರ್ಕಾರ ಹಿಂಪಡೆದಿದೆ ಎಂದು ಕರ್ನಾಟಕ ಸರ್ಕಾರದ ಪರವಾಗಿ ವಾದ ಮಂಡಿಸಿದ ವಕೀಲ ಹಿರಿಯ ದೇವದತ್ತ ಕಾಮತ್ ಪೀಠಕ್ಕೆ ತಿಳಿಸಿದರು. ಇತರ 24 ಜಿಲ್ಲೆಗಳಲ್ಲಿ ಪರೀಕ್ಷೆ ನಡೆಸಲಾಗಿದೆ ಎಂದು ಪೀಠದ ಗಮನಕ್ಕೆ ತಂದರು. ಈ ವೇಳೆ ಪೀಠ, ನಾಲ್ಕು ವಾರಗಳಲ್ಲಿ ಪರೀಕ್ಷೆಯ ನಿಖರವಾದ ವಿವರಗಳನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತು.