Issy Wong Hattrick: WPL​ನಲ್ಲಿ ಇತಿಹಾಸ ನಿರ್ಮಿಸಿದ ಮುಂಬೈ ವೇಗಿ: ಇಸ್ಸಿ ವಾಂಗ್ ಹ್ಯಾಟ್ರಿಕ್ ವಿಕೆಟ್ ವಿಡಿಯೋ ನೋಡಿ

issy wong hat trick

ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿ  (WPL 2023) ಅಂತಿಮ ಘಟ್ಟಕ್ಕೆ ಬಂದಿದೆ. ಮಾರ್ಚ್ 26 ಭಾನುವಾರದಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ (MIW vs UPW) ಮಹಿಳಾ ತಂಡಗಳ ನಡುವೆ ಫೈನಲ್ ಹಣಾಹಣಿ ನಡೆಯಲಿದೆ. ಇದಕ್ಕೂ ಮುನ್ನ ಶುಕ್ರವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಹರ್ಮನ್​ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ 72 ರನ್​ಗಳ ಅಮೋಘ ಗೆಲುವು ಸಾಧಿಸುವ ಮೂಲಕ ಫೈನಲ್​ಗೆ ಅರ್ಹತೆ ಪಡೆದುಕೊಂಡಿತು. ಬ್ಯಾಟಿಂಗ್ – ಬೌಲಿಂಗ್ ಎರಡೂ ವಿಭಾಗಗಳಲ್ಲಿ ಮಿಂಚಿನ ಪ್ರದರ್ಶನ ತೋರಿದ ಮುಂಬೈ ಮಹಿಳೆಯರ ಹೋರಾಟಕ್ಕೆ ಜಯ ದಕ್ಕಿತು. ಅದರಲ್ಲೂ ಮುಂಬೈ ವೇಗಿ ಇಸ್ಸಿ ವಾಂಗ್ (Issy Wong) ಹ್ಯಾಟ್ರಿಕ್ ವಿಕೆಟ್ ಕಿತ್ತು ಮಿಂಚಿದರು.

13ನೇ ಓವರ್​​ನಲ್ಲಿ ಕಿರಣ್ ನವಗಿರೆ, ಸಿಮ್ರಾನ್ ಶೇಖ್ ಮತ್ತು ಸೋಫಿ ಎಕ್ಲೆಸ್ಟೋನ್ ಅವರ ವಿಕೆಟ್ ಪಡೆಯುವ ಮೂಲಕ ಇಸ್ಸಿ ಹ್ಯಾಟ್ರಿಕ್ ವಿಕೆಟ್ ಪಡೆದರು. ಈ ಮೂಲಕ ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಹ್ಯಾಟ್ರಿಕ್ ವಿಕೆಟ್ ಕಿತ್ತ ಮೊಟ್ಟ ಮೊದಲ ಬೌಲರ್ ಎಂಬ ಸಾಧನೆಯನ್ನು ಇಸ್ಸಿ ವಾಂಗ್ ಮಾಡಿದ್ದಾರೆ. 43 ರನ್ ಗಳಿಸಿದ್ದ ಕಿರಣ್ ನವಗಿರೆ ಅವರು ಮೊದಲಿಗೆ ಔಟಾದರೆ, ಸಿಮ್ರಾನ್ ಡಕ್​ಗೆ ಬೌಲ್ಡ್ ಆದರು. ಎಕ್ಲೆಸ್ಟೋನ್ ಅವರನ್ನು ಕೂಡ ಕ್ಲೀನ್ ಬೌಲ್ಡ್ ಮಾಡುವ ಮೂಲಕ ಸತತ ಮೂರು ಎಸೆತಗಳಲ್ಲಿ ಮೂರು ವಿಕೆಟ್ ತಮ್ಮದಾಗಿಸಿದರು. ಒಟ್ಟು 4 ಓವರ್​ಗಳಲ್ಲಿ ಕೇವಲ 15 ರನ್ ನೀಡಿ 4 ವಿಕೆಟ್ ಪಡೆದರು.

IPL 2023: ನಿಟ್ಟುಸಿರು ಬಿಟ್ಟ ಚೆನ್ನೈ ಫ್ಯಾನ್ಸ್; ತಂಡ ಸೇರಿಕೊಂಡ ಧೋನಿಯ ಉತ್ತರಾಧಿಕಾರಿ..!

 

ಮುಂಬೈನ ಡಾ. ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಮಹಿಳಾ ತಂಡಕ್ಕೆ ಆರಂಭಿಕ ಆಟಗಾರ್ತಿ ಯಾಸ್ತಿಕಾ ಭಾಟಿಯಾ (21) ಮತ್ತು ಹೇಲಿ ಮ್ಯಾಥ್ಯೂಸ್ (26) ಉತ್ತಮ ಆರಂಭ ನೀಡಿದರು. ಆದರೆ, ಇಬ್ಬರಿಗೂ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ಆ ಬಳಿಕ ಶುರುವಾಗಿದ್ದು ನೇಟ್ ಸ್ಕಿವರ್ ಸ್ಫೋಟಕ ಆಟ. ಕೇವಲ 6 ರನ್ ಗಳಿಸಿದ್ದಾಗ ಸ್ಕಿವರ್ ಕ್ಯಾಚ್ ಕೈಚೆಲ್ಲಿದ್ದು ಯುಪಿಗೆ ದೊಡ್ಡ ಹಿನ್ನಡೆ ಆಯಿತು. ಮೈದಾನದ ಮೂಲೆ ಮೂಲೆಗೆ ಚೆಂಡನ್ನು ಅಟ್ಟಿದ ಆಂಗ್ಲ ಆಲ್ ರೌಂಡರ್ ಸ್ಕಿವರ್ ಕೇವಲ 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದರ ನಡುವೆ ನಾಯಕಿ ಕೌರ್ (14) ಔಟಾದರು.

ನಂತರ ಸ್ಕಿವರ್​ಗೆ ಉತ್ತಮ ಸಾಥ್ ನೀಡಿದ ಅಮೆಲಿಯಾ ಕಾರ್ (29 ರನ್, 19 ಎಸೆತ) ಮತ್ತು ಪೂಜಾ ವಸ್ತ್ರಕರ್ (ಅಜೇಯ 11 ರನ್) ಉತ್ತಮ ಜೊತೆಯಾಟ ನಡೆಸಿದರು. ಸ್ಕಿವರ್ 38 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್​ನೊಂದಿಗೆ ಅಜೇಯ 72 ರನ್ ಚಚ್ಚಿದರು. ಪರಿಣಾಮ ಮುಂಬೈ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 182 ರನ್ ಕಲೆಹಾಕಿತು. ಬೃಹತ್ ಗುರಿ ಬೆನ್ನಟ್ಟಿದ ಯುಪಿಗೆ ಉತ್ತಮ ಆರಂಭ ಸಿಗಲಿಲ್ಲ. 21 ರನ್ ಆಗುವ ಹೊತ್ತಿಗೆ 3 ದೊಡ್ಡ ವಿಕೆಟ್‌ಗಳನ್ನು ಕಳೆದುಕೊಂಡಿತು.

ಪಂದ್ಯಾವಳಿಯಲ್ಲಿ ಪ್ರಚಂಡ ಫಾರ್ಮ್‌ನಲ್ಲಿದ್ದ ತಹ್ಲಿಯಾ ಮೆಕ್‌ಗ್ರಾತ್ (7) ಸೇರಿದಂತೆ 11 ರನ್‌ಗಳಿಗೆ ನಾಯಕಿ ಅಲಿಸ್ಸಾ ಹೀಲಿ ಔಟಾದರು. ಇದಾದ ಬಳಿಕ ಕಿರಣ್ ನಾವಗಿರೆ (43 ರನ್, 27 ಎಸೆತ, 4 ಬೌಂಡರಿ, 3 ಸಿಕ್ಸರ್) ತಂಡದ ಪರ ಕೊಂಚ ಹೋರಾಟ ನೀಡಿದರು. ಆದರೆ ಇನ್ನೊಂದು ತುದಿಯಿಂದ ಅವರಿಗೆ ಯಾರು ಸಾಥ್ ನೀಡಲಿಲ್ಲ. ಗ್ರೇಸ್ ಹ್ಯಾರಿಸ್ ಅವರಂತಹ ಸ್ಫೋಟಕ ಬ್ಯಾಟರ್​ ಕೂಡ ಬಿಗ್ ಇನ್ನಿಂಗ್ಸ್ ಆಡುವಲ್ಲಿ ವಿಫಲರಾದರು. ಅಂತಿಮವಾಗಿ ಯುಪಿ 17.4 ಓವರ್‌ನಲ್ಲಿ 110 ರನ್‌ಗಳಿಗೆ ಸರ್ವಪತನವಾಯಿತು. ಮುಂಬೈ 72 ರನ್​ಗಳ ಜಯದೊಂದಿಗೆ ಫೈನಲ್​ಗೆ ಲಗ್ಗಯಿಟ್ಟಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/issy-wong-became-the-first-ever-player-to-hat-trick-in-wpl-history-miw-vs-up-eliminator-match-kannada-news-vb-au48-542448.html

Views: 0

Leave a Reply

Your email address will not be published. Required fields are marked *