DC vs MI, WPL 2023 Final: ಇಂದು ಮಹಿಳಾ ಪ್ರೀಮಿಯರ್ ಲೀಗ್ ಫೈನಲ್: ಪ್ರಶಸ್ತಿಗಾಗಿ ಡೆಲ್ಲಿ-ಮುಂಬೈ ನಡುವೆ ಸೆಣೆಸಾಟ

WPL 2023 FInal

ಭಾರೀ ಕುತೂಹಲ ಕೆರಳಿಸಿದ್ದ ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿ (WPL 2023) ಅಂತಿಮ ಹಂತಕ್ಕೆ ಬಂದು ನಿಂತಿದೆ. ಇಂದು ಮುಂಬೈನ ಬ್ರಬೌರ್ನ್ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದ್ದು, ಮೆಗ್ ಲ್ಯಾನಿಂಗ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡ ಹಾಗೂ ಹರ್ಮನ್​ಪ್ರೀತ್ ಕೌರ್ (Harmanpreet Kaur) ನೇತೃತ್ವದ ಮುಂಬೈ ಇಂಡಿಯನ್ಸ್ (DC vs MI) ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ. ಎಲಿಮಿನೇಟರ್​ನಲ್ಲಿ ಯುಪಿ ವಾರಿಯರ್ಸ್ ತಂಡವನ್ನು ಸೋಲಿಸಿ ಮುಂಬೈ ಫೈನಲ್​ಗೆ ಪ್ರವೇಶಿಸಿದರೆ ಇತ್ತ ಡೆಲ್ಲಿ ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ತೋರಿ ನೇರವಾಗಿ ಫೈನಲ್​ಗೆ ಕ್ವಾಲಿಫೈ ಆಗಿತ್ತು. ಎರಡೂ ತಂಡಗಳು ಸಾಕಷ್ಟು ಬಲಿಷ್ಠವಾಗಿದ್ದು ಇಂದು ಮುಂಬೈನಲ್ಲಿ ಹೈವೋಲ್ಟೇಜ್ ಪಂದ್ಯ ನಡೆಯುವುದು ಖಚಿತ.

ಈ ಬಾರಿಯ ಮಹಿಳಾ ಪ್ರೀಮಿಯರ್ ಲೀಗ್​ನಲ್ಲಿ ಎರಡೂ ತಂಡಗಳು ಒಟ್ಟು ಎಂಟು ಪಂದ್ಯಗಳನ್ನು ಆಡಿದೆ. ಇದರಲ್ಲಿ ಡೆಲ್ಲಿ ಎರಡು ಸೋಲು ಹಾಗೂ ಆರು ಜಯ ಕಂಡರೆ ಮುಂಬೈ ಕೂಡ ಇದೇ ಮಾದರಿಯಲ್ಲಿದೆ. ರನ್​ರೇಟ್ ಆಧಾರದ ಮೇಲಷ್ಟೆ ಡೆಲ್ಲಿ ಮೊದಲ ಸ್ಥಾನಕ್ಕೇರಿತು. ಡೆಲ್ಲಿ ತಂಡದ ಪ್ರಮುಖ ಬಲ ಬ್ಯಾಟರ್​ಗಳೆಂದೇ ಹೇಳಬಹುದು. ಮುಖ್ಯವಾಗಿ ಓಪನರ್​ಗಳಾದ ನಾಯಕಿ ಲ್ಯಾನಿಂಗ್ ಮತ್ತು ಶಫಾಲಿ ವರ್ಮಾ ತಂಡಕ್ಕೆ ಸ್ಫೋಟಕ ಆರಂಭ ಒದಗಿಸುತ್ತಿದ್ದು ಅಪಾಯಕಾರಿ ಆಗಿದ್ದಾರೆ.

ಲ್ಯಾನಿಂಗ್ ಎಂಟು ಪಂದ್ಯಗಳಲ್ಲಿ 141.55 ಸ್ಟ್ರೈಕ್ ರೇಟ್‌ನಲ್ಲಿ 310 ರನ್ ಗಳಿಸಿದ್ದಾರೆ. ಶಫಾಲಿ ಎಂಟು ಪಂದ್ಯಗಳಲ್ಲಿ 182.57 ಸ್ಟ್ರೈಕ್ ರೇಟ್‌ನಲ್ಲಿ 241 ರನ್ ಗಳಿಸಿದ್ದಾರೆ. ಇವರಿಬ್ಬರೇ ಪಂದ್ಯವನ್ನು ಗೆಲ್ಲಿಸಿ ಕೊಡುವ ಸಾಮರ್ಥ್ಯ ಹೊಂದಿದ್ದಾರೆ. ಜಿಮಿಮಾ ರೋಡ್ರಿಗಸ್, ಯಸ್ತಿಕಾ ಭಾಟಿಯಾ, ಮರಿಝನ್ನೆ ಕಪ್, ಅಲೈಸ್ ಕ್ಯಾಪ್ಸೆ ಕೂಡ ಡೆಲ್ಲಿ ತಂಡದ ಬ್ಯಾಟಿಂಗ್ ಅಸ್ತ್ರ. ಬೌಲಿಂಗ್​ನಲ್ಲಿ ಟಾರಾ ನೋರಿಸ್ ಅಪಾಯಕಾರಿ ಆಗಿದ್ದಾರೆ. ಕಳೆದ ಪಂದ್ಯದಲ್ಲಿ ಇವರು ಆರ್​ಸಿಬಿ ವಿರುದ್ಧ 5 ವಿಕೆಟ್ ಕಿತ್ತು ಮಿಂಚಿದ್ದರು. ಶಿಖಾ ಪಾಂಡೆ, ಜೆಸ್ ಜೋನ್ಸನ್, ಅಲಿಸ್ ಕ್ಯಾಪ್ಸಿ ಪ್ರಮುಖ ಬೌಲರ್ ಆಗಿದ್ದಾರೆ.

IPL 2023: ಮಾರ್ಷ್ ಮಿಂಚಿದ್ರೆ, ಈ ಸಲ ಕಪ್ ಅವರದ್ದೇ ಎಂದ ಜಡೇಜಾ..!

ಇತ್ತ ಮುಂಬೈ ಬ್ಯಾಟಿಂಗ್ – ಬೌಲಿಂಗ್ ಎರಡರಲ್ಲೂ ಬಲಿಷ್ಠವಾಗಿದೆ. ಎಲಿಮಿನೇಟರ್ ಪಂದ್ಯದಲ್ಲಿ ನ್ಯಾಟ್ ಸೀವರ್ ಬ್ರಂಟ್ ನೀಡಿದ ಪ್ರದರ್ಶನ ಎದುರಾಳಿಗರಲ್ಲಿ ನಡುಕ ಹುಟ್ಟಿಸಿದೆ. ಒಟ್ಟು 9 ಪಂದ್ಯಗಳಲ್ಲಿ ಇವರು 272 ರನ್ ಗಳಿಸಿದ್ದಾರೆ. 149.45 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಹಾಗೆಯೆ ಹೇಲಿ ಮ್ಯಾಥ್ಯೂಸ್ ಕೂಡ 9 ಪಂದ್ಯಗಳಲ್ಲಿ 127.09 ಸ್ಟ್ರೈಕ್ ರೇಟ್‌ನಲ್ಲಿ 258 ರನ್ ಗಳಿಸಿದ್ದಾರೆ. ಜೊತೆಗೆ 13 ವಿಕೆಟ್ ಪಡೆದಿದ್ದಾರೆ. ಹರ್ಮನ್​ಪ್ರೀತ್ ಯಾವುದೇ ಸಂದರ್ಭದಲ್ಲಿ ಅಬ್ಬರಿಸುವ ಸಾಮರ್ಥ್ಯ ಹೊಂದಿದ್ದಾರೆ. ಇಸ್ಸಿ ವಾಂಗ್ ಕಳೆದ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಕಿತ್ತಿದ್ದರು. ಸೈಕಾ ಇಶಾಕ್ ಕೂಡ ಡೇಂಜರಸ್ ಬೌಲರ್ ಆಗಿದ್ದಾರೆ.

ಮುಖಾಮುಖಿ:

ಲೀಗ್ ಹಂತದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡವು 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತ್ತು. ಆದರೆ 2ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 9 ವಿಕೆಟ್​ಗಳಿಂದ ಬಗ್ಗು ಬಡಿದು ಡೆಲ್ಲಿ ಕ್ಯಾಪಿಟಲ್ಸ್ ಸೇಡು ತೀರಿಸಿಕೊಂಡಿತ್ತು. ಈ ಮೂಲಕ ಲೀಗ್ ಹಂತದಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿದೆ.

ನೇರಪ್ರಸಾರ:

ಈ ಪಂದ್ಯವು ಇಂದು ರಾತ್ರಿ 7:30 PM IST ಕ್ಕೆ ಶುರುವಾಗಲಿದ್ದು, 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. Sports18 ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಇರಲಿದೆ. ಹಾಗೆಯೇ ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಉಚಿತವಾಗಿ ಲೈವ್ ಸ್ಟ್ರೀಮ್ ಕೂಡ ವೀಕ್ಷಿಸಬಹುದು.

ಉಭಯ ತಂಡಗಳು ಹೀಗಿವೆ:

ಡೆಲ್ಲಿ ಕ್ಯಾಪಿಟಲ್ಸ್: ಮೆಗ್ ಲ್ಯಾನಿಂಗ್ (ನಾಯಕಿ), ಜೆಮಿಮಾ ರೊಡ್ರಿಗಸ್, ಅಲಿಸ್ ಕ್ಯಾಪ್ಸಿ, ಶಫಾಲಿ ವರ್ಮಾ, ರಾಧಾ ಯಾದವ್, ಶಿಖಾ ಪಾಂಡೆ, ಮರಿಝನ್ನೆ ಕಪ್, ಟೈಟಾಸ್ ಸಾಧು, ಲಾರಾ ಹ್ಯಾರಿಸ್, ಮಿನ್ನು ಮಣಿ, ಜಸಿಯಾ ಅಖ್ತರ್, ಟಾರಾ ನೋರಿಸ್, ತನಿಯಾ ಭಾಟಿಯಾ, ಪೂನಮ್ ಯಾದವ್ , ಸ್ನೇಹಾ ದೀಪ್ತಿ, ಅರುಂಧತಿ ರೆಡ್ಡಿ, ಅಲ್ಪನಾ ಮೊಂಡಲ್, ಜೆಸ್ ಜೋನ್ಸನ್.

ಮುಂಬೈ ಇಂಡಿಯನ್ಸ್: ಹರ್ಮನ್‌ಪ್ರೀತ್ ಕೌರ್ (ನಾಯಕಿ), ನ್ಯಾಟ್ ಸೀವರ್ ಬ್ರಂಟ್, ಪೂಜಾ ವಸ್ತ್ರಾಕರ್, ಯಾಸ್ತಿಕಾ ಭಾಟಿಯಾ, ಅಮೆಲಿಯಾ ಕೆರ್, ಶಬ್ನಮ್ ಇಸ್ಮಾಯಿಲ್, ಅಮನ್ಜೋತ್ ಕೌರ್, ಹೇಲಿ ಮ್ಯಾಥ್ಯೂಸ್, ಹೀದರ್ ಗ್ರಹಾಂ, ಇಸ್ಸಿ ವಾಂಗ್, ಕ್ಲೋಯ್ ಟ್ರಯಾನ್, ಪ್ರಿಯಾಂಕಾ ಬಾಲಾ, ಧಾರಾ ಗುಜ್ಜಾರ್, ಸೈಕಾ ಇಶಾಕ್, ಸೋನಮ್ ಯಾದವ್, ಹುಮೈರಾ ಖಾಝಿ, ಜಿಂಟಿಮಣಿ ಕಲಿತಾ, ನೀಲಂ ಬಿಷ್ತ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/wpl-2023-final-delhi-capitals-will-face-mumbai-indians-in-the-final-clash-of-the-womens-premier-league-vb-au48-543151.html

Views: 0

Leave a Reply

Your email address will not be published. Required fields are marked *