

IPL 2023: ಇಂಡಿಯನ್ ಪ್ರೀಮಿಯರ್ ಲೀಗ್ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿರುವ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವನ್ನು ನಿಷೇಧಿಸಬೇಕೆಂದು ತಮಿಳುನಾಡಿನ ಶಾಸಕ ವೆಂಕಟೇಶ್ವರನ್ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ತಮಿಳುನಾಡು ವಿಧಾನಸಭೆಯಲ್ಲಿ ಕ್ರೀಡಾ ಅಭಿವೃದ್ಧಿ ಸಚಿವಾಲಯಕ್ಕೆ ಅನುದಾನದ ಬೇಡಿಕೆಯ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಪಟ್ಟಾಲಿ ಮಕ್ಕಳ್ ಕಚ್ಚಿ (ಪಿಎಂಕೆ) ಪಕ್ಷದ ಶಾಸಕ ವೆಂಕಟೇಶ್ವರನ್, ಸಿಎಸ್ಕೆ ತಂಡದಲ್ಲಿ ತಮಿಳುನಾಡಿನ ಆಟಗಾರರಿಗೆ ಸ್ಥಾನ ನೀಡಲಾಗಿಲ್ಲ. ಹಾಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ನಿಷೇಧಿಸಬೇಕೆಂದು ಆಗ್ರಹಿಸಿದರು.
ಐಪಿಎಲ್ ಪಂದ್ಯಾವಳಿಯು ಯುವಜನರಲ್ಲಿ ಬಹಳ ಜನಪ್ರಿಯವಾಗಿದೆ. ತಮಿಳುನಾಡಿನಲ್ಲಿ ಸಾಕಷ್ಟು ಪ್ರತಿಭಾವಂತ ಆಟಗಾರರಿದ್ದರೂ, ಚೆನ್ನೈ ಸೂಪರ್ ಕಿಂಗ್ಸ್ಗೆ ಒಬ್ಬನೇ ಒಬ್ಬ ಸ್ಥಳೀಯ ಆಟಗಾರನನ್ನು ಕೂಡ ಆಯ್ಕೆ ಮಾಡಿಲ್ಲ. ಆದಾಗ್ಯೂ, ಇದು ತಮಿಳುನಾಡಿನ ತಂಡ ಎಂದು ಜನರಿಗೆ ಜಾಹೀರಾತು ನೀಡುವ ಮೂಲಕ ಭಾರಿ ವಾಣಿಜ್ಯ ಲಾಭವನ್ನು ಗಳಿಸುತ್ತಿದೆ. ನಮ್ಮ ರಾಜ್ಯದ ಆಟಗಾರರಿಗೆ ಪ್ರಾಮುಖ್ಯತೆ ನೀಡದ ಸಿಎಸ್ಕೆ ತಂಡವನ್ನು ನಿಷೇಧಿಸಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ವೆಂಕಟೇಶ್ವರನ್ ತಿಳಿಸಿದರು.
ಇದೇ ಚರ್ಚೆಯಲ್ಲಿ ಮಾತನಾಡಿದ ಎಐಎಡಿಎಂಕೆ ಮಾಜಿ ಸಚಿವ ಎಸ್ಪಿ ವೇಲುಮಣಿ, ರಾಜ್ಯ ಸರ್ಕಾರ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಶಾಸಕರಿಗೆ ಉಚಿತ ಪಾಸ್ಗಳನ್ನು ನೀಡಬೇಕೆಂದು ಒತ್ತಾಯಿಸಿದರು. ಏಕೆಂದರೆ ಈ ಹಿಂದೆ ನಮ್ಮ ಸರ್ಕಾರ ಎಲ್ಲಾ ಶಾಸಕರಿಗೆ ಐಪಿಎಲ್ ಪಾಸ್ಗಳನ್ನು ನೀಡಿತ್ತು ಎಂದರು.
ಈ ಹಿಂದೆ ನಮ್ಮ (ಎಐಎಡಿಎಂಕೆ) ಆಡಳಿತದಲ್ಲಿ ನಾವು ಎಲ್ಲಾ ಶಾಸಕರಿಗೆ 400 ಐಪಿಎಲ್ ಪಾಸ್ಗಳನ್ನು ನೀಡಿದ್ದೇವೆ. ಆದರೆ ಈಗ ಡಿಎಂಕೆ ಸರ್ಕಾರ ಎಐಎಡಿಎಂಕೆ ಶಾಸಕರಿಗೆ ಪಾಸ್ ನೀಡುತ್ತಿಲ್ಲ. ಇದನ್ನು ಕೂಡ ಪರಿಗಣಿಸಬೇಕೆಂದು ಶಾಸಕ ವೇಲುಮಣಿ ಅವರು ರಾಜ್ಯ ಕ್ರೀಡಾ ಅಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್ ಅವರಲ್ಲಿ ಸದನದಲ್ಲಿ ವಿನಂತಿಸಿದರು.
ಒಟ್ಟಿನಲ್ಲಿ ತಮಿಳುನಾಡು ವಿಧಾನಸಭೆಯ ಚರ್ಚೆಯಲ್ಲಿ ಒಬ್ಬ ಶಾಸಕರು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ನಿಷೇಧಿಸಬೇಕೆಂದು ಆಗ್ರಹಿಸಿದರೆ, ಅದೇ ಸಭೆಯಲ್ಲಿ ಮತ್ತೋರ್ವ ಶಾಸಕರು ಐಪಿಎಲ್ ಪಾಸ್ ಬೇಕೆಂದು ಬೇಡಿಕೆಯಿಟ್ಟಿರುವುದು ವಿಶೇಷ.
ಇದನ್ನೂ ಓದಿ: IPL 2023: RCB ಅಭಿಮಾನಿಗಳಿಗೆ ಖಡಕ್ ಸೂಚನೆ ನೀಡಿದ ಗಂಭೀರ್..!
ಚೆನ್ನೈ ಸೂಪರ್ ಕಿಂಗ್ಸ್ ತಂಡ: ಎಂಎಸ್ ಧೋನಿ (ನಾಯಕ), ಭಗತ್ ವರ್ಮಾ, ಅಜಯ್ ಮಂಡಲ್, ನಿಶಾಂತ್ ಸಿಂಧು, ಶೇಕ್ ರಶೀದ್, ಬೆನ್ ಸ್ಟೋಕ್ಸ್ , ಅಜಿಂಕ್ಯ ರಹಾನೆ, ಡೆವೊನ್ ಕಾನ್ವೆ, ರುತುರಾಜ್ ಗಾಯಕ್ವಾಡ್, ಅಂಬಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಡೇಜಾ, ತುಷಾರ್ ದೇಶಪಾಂಡೆ, ರವೀಂದ್ರ ಜಡೇಜಾ, ತುಷಾರ್ ದೇಶಪಾಂಡೆ, , ಸಿಮರ್ಜೀತ್ ಸಿಂಗ್, ದೀಪಕ್ ಚಾಹರ್, ಪ್ರಶಾಂತ್ ಸೋಲಂಕಿ, ಮಹೀಶ್ ತೀಕ್ಷಣ, ಸಿಸಂದ ಮಗಲಾ, ಆಕಾಶ್ ಸಿಂಗ್.