IPL 2023: ಪವರ್ ಪ್ಲೇ ಬಳಿಕ ಪವರ್ ಕಳೆದುಕೊಳ್ಳುವ ಕೊಹ್ಲಿ! ಅಂಕಿ-ಅಂಶ ನುಡಿಯುತ್ತಿದೆ ಪೂರಕ ಸಾಕ್ಷಿ

IPL 2023: ಪವರ್ ಪ್ಲೇ ಬಳಿಕ ಪವರ್ ಕಳೆದುಕೊಳ್ಳುವ ಕೊಹ್ಲಿ! ಅಂಕಿ-ಅಂಶ ನುಡಿಯುತ್ತಿದೆ ಪೂರಕ ಸಾಕ್ಷಿ
IPL 2023 Should Virat Kohli be slowing down after the powerplay ipl 2023

ಮುಂಬೈ ವಿರುದ್ಧ ಅರ್ಧಶತಕ, ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ವಿರುದ್ಧ ಅರ್ಧಶತಕ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್‌ ವಿರುದ್ಧವೂ ಅರ್ಧಶತಕ… ಈ ಬಾರಿಯ ಐಪಿಎಲ್​ನಲ್ಲಿ ವಿರಾಟ್ ಕೊಹ್ಲಿ (Virat Kohli) ಬ್ಯಾಟ್ ಅಬ್ಬರಿಸುತ್ತಿದೆ. ಆಡಿರುವ 6 ಪಂದ್ಯಗಳಲ್ಲಿ ಕಿಂಗ್ ಕೊಹ್ಲಿ ಬ್ಯಾಟ್ 4 ಬಾರಿ ಆಗಸ ನೋಡಿದೆ. ಅಂದರೆ ಕಿಂಗ್ ಕೊಹ್ಲಿ ಬರೋಬ್ಬರಿ 4 ಅರ್ಧ ಶತಕ ಸಿಡಿಸಿದ್ದಾರೆ. ಆದರೆ ಇದರ ಹೊರತಾಗಿಯೂ ಕಿಂಗ್ ಕೊಹ್ಲಿಯ ಬ್ಯಾಟಿಂಗ್ ಆರ್​ಸಿಬಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ವಾಸ್ತವವಾಗಿ ಆರ್​ಸಿಬಿ (RCB) ಪರ ಆರಂಭಿಕರಾಗಿ ಕಣಕ್ಕಿಳಿಯುವ ಕೊಹ್ಲಿ ಆರಂಭಿಕ 6 ಓವರ್​ಗಳಲ್ಲಿ ಅಂದರೆ ಬ್ಯಾಟಿಂಗ್ ಪವರ್​ ಪ್ಲೇಯಲ್ಲಿ (powerplay) ಸರಾಗವಾಗಿ ರನ್​ ಗಳಿಸುತ್ತಾರೆ. ಆದರೆ ಆ ನಂತರ ಕೊಹ್ಲಿ ಬ್ಯಾಟ್ ಇದ್ದಕ್ಕಿದಂತೆ ಮಂಕಾಗಿಬಿಡುತ್ತದೆ. ಇದರಿಂದ ಆರ್​ಸಿಬಿ ಮಧ್ಯಮ ಓವರ್​ಗಳಲ್ಲಿ ಹೆಚ್ಚಿನ ರನ್ ಗಳಿಸುವಲ್ಲಿ ವಿಫಲವಾಗುತ್ತಿದೆ.

ಆರಂಭಿಕರಿಬ್ಬರಿಂದ ಉತ್ತಮ ಆರಂಭ

ಈ ಆವೃತ್ತಿಯಲ್ಲಿ ಆರ್​ಸಿಬಿಯ ಆರಂಭಿಕರಿಬ್ಬರು ತಂಡಕ್ಕೆ ಉತ್ತಮ ಆರಂಭ ನೀಡುತ್ತಿದ್ದಾರೆ. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿಯುವ ವಿರಾಟ್ ಕೊಹ್ಲಿ ಹಾಗೂ ನಾಯಕ ಫಾಫ್ ಡು ಪ್ಲೆಸಿಸ್ ಉತ್ತಮ ಜೊತೆಯಾಟ ಆಡುವುದರೊಂದಿಗೆ ತಂಡಕ್ಕೆ ಭದ್ರ ಬುನಾದಿ ಹಾಕುತ್ತಿದ್ದಾರೆ. ಇದರಲ್ಲಿ ನಾಯಕ ಫಾಫ್ ಡು ಪ್ಲೆಸಿಸ್ ಅವರ ಬ್ಯಾಟಿಂಗ್ ಬಗ್ಗೆ ಹೇಳಬೇಕೆಂದರೆ ಆರಂಭದಲ್ಲಿ ಒಂದೆರಡು ಓವರ್ ನೋಡಿಕೊಂಡು ಆಡುವ ಫಾಫ್, ಆ ನಂತರ ಅಬ್ಬರದ ಬ್ಯಾಟಿಂಗ್ ಶುರು ಮಾಡುತ್ತಾರೆ. ಇದು ಅವರು ವಿಕೆಟ್ ಒಪ್ಪಿಸುವವರೆಗೂ ಮುಂದುವರೆಯುತ್ತದೆ. ಇದರಿಂದಲೇ ಆರ್​ಸಿಬಿ ಆಡಿರುವ 6 ಪಂದ್ಯಗಳಲ್ಲಿ ಉತ್ತಮ ರನ್ ಕಲೆಹಾಕುವಲ್ಲಿ ಸಫಲವಾಗುತ್ತಿದೆ.

IPL 2023: ಈ ಐಪಿಎಲ್​ನಲ್ಲಿ ಅತಿ ಹೆಚ್ಚು ಸಿಕ್ಸರ್​ಗಳನ್ನು ಹೊಡೆಸಿಕೊಂಡಿರುವ ಬೌಲರ್​ಗಳಿವರು

ಇತ್ತ ಕಿಂಗ್ ಕೊಹ್ಲಿಯ ಬ್ಯಾಟಿಂಗ್ ಬಗ್ಗೆ ಹೇಳುವುದಾದರೆ, ಫಾಫ್ ಜೊತೆ ಇನ್ನಿಂಗ್ಸ್ ಆರಂಭಿಸುವ ಕೊಹ್ಲಿ ಮೊದಲ 6 ಓವರ್​ಗಳಲ್ಲಿ ಅಬ್ಬರದ ಬ್ಯಾಟಿಂಗ್ ಮಾಡುವ ಮೂಲಕ ಬೌಂಡರಿ, ಸಿಕ್ಸರ್​ಗಳ ಮಳೆಗರೆಯುತ್ತಾರೆ. ಹೀಗಾಗಿ ಆರ್​ಸಿಬಿ ತಂಡ ಪವರ್​ ಪ್ಲೇನಲ್ಲೇ ಅರ್ಧಶತಕದ ಗಡಿ ದಾಟುತ್ತದೆ. ಆದರೆ ಪವರ್ ಪ್ಲೇ ಮುಗಿದ ಬಳಿಕ ಆರ್​ಸಿಬಿ ಖಾತೆಗೆ ರನ್ ಹರಿದುಬರುವ ವೇಗ ಇದಕ್ಕಿದ್ದಂತೆ ಕಡಿಮೆಯಾಗುತ್ತದೆ. ಇದಕ್ಕೆ ಪ್ರಮುಖ ಕಾರಣ ಕಿಂಗ್ ಕೊಹ್ಲಿ ಬ್ಯಾಟ್ ಸೈಲೆಂಟ್ ಆಗುವುದು. ಆರಂಭದಲ್ಲಿ ಅಬ್ಬರಿಸುವ ಕೊಹ್ಲಿ ಆ ನಂತರ ತಾಳ್ಮೆಯ ಆಟಕ್ಕೆ ಮುಂದಾಗಿಬಿಡುತ್ತಾರೆ. ಇದರಿಂದ ಬೌಂಡರಿಗಳು ಗಣನೀಯವಾಗಿ ಕಡಿಮೆಯಾಗುತ್ತವೆ. ಇದಕ್ಕೆ ಅಂಕಿ ಅಂಶಗಳು ಪೂರಕ ಸಾಕ್ಷಿ ನುಡಿಯುತ್ತಿದ್ದು, ವಿರಾಟ್ ಕೊಹ್ಲಿ ಕಳೆದ ಮೂರು ವರ್ಷಗಳಲ್ಲಿ 7, 8 ಮತ್ತು 9 ನೇ ಓವರ್‌ಗಳಲ್ಲಿ ಅತ್ಯಂತ ಕಡಿಮೆ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿರುವುದನ್ನು ಕಾಣಬಹುದಾಗಿದೆ.

ಕಳೆದ ಮೂರು ವರ್ಷಗಳಿಂದ 7ರಿಂದ 9ನೇ ಓವರ್​ವರೆಗೆ ವಿರಾಟ್ ಕೊಹ್ಲಿ ಕೇವಲ 95 ಸ್ಟ್ರೈಕ್ ರೇಟ್​ನಲ್ಲಿ ರನ್ ಗಳಿಸುತ್ತಿದ್ದಾರೆ. ಇದು ಐಪಿಎಲ್​ನಲ್ಲಿ ಇತರ ಆರಂಭಿಕರಿಗೆ ಹೋಲಿಸಿದರೆ, ಕಡಿಮೆ ಸ್ಟ್ರೈಕ್​ನಲ್ಲಿ ಬ್ಯಾಟ್ ಬೀಸಿದವರಲ್ಲಿ ಕೊಹ್ಲಿ ಮೊದಲ ಸ್ಥಾನದಲ್ಲಿರುವುದನ್ನು ಕಾಣಬಹುದಾಗಿದೆ. ಅವರ ನಂತರ ಕೇನ್ ವಿಲಿಯಮ್ಸನ್ (98.88) ಮತ್ತು ವೃದ್ಧಿಮಾನ್ ಸಹಾ (100) ಇದ್ದಾರೆ.

ಪವರ್‌ಪ್ಲೇ ನಂತರ ಮಂಕಾಗುವ ವಿರಾಟ್ ಕೊಹ್ಲಿ

ಈಗ ಪ್ರಶ್ನೆ ಏನೆಂದರೆ ಪವರ್ ಪ್ಲೇ ನಂತರ ವಿರಾಟ್ ಕೊಹ್ಲಿ ಮಂಕಾಗುವುದ್ಯಾಕೆ ಎಂಬುದು. ಪವರ್‌ಪ್ಲೇ ನಂತರ ವಿರಾಟ್ ಕೊಹ್ಲಿ ನಿಧಾನಗತಿಗೆ ಸ್ಪಿನ್ ಬೌಲಿಂಗ್ ಕಾರಣ. ಈ ವರ್ಷ, ವಿರಾಟ್ ಕೊಹ್ಲಿ ವೇಗದ ಬೌಲರ್‌ಗಳ ವಿರುದ್ಧ ಸರಾಸರಿ 190 ರನ್ ಗಳಿಸಿದ್ದಾರೆ ಮತ್ತು ಅವರ ಸ್ಟ್ರೈಕ್ ರೇಟ್ 170 ಕ್ಕಿಂತ ಹೆಚ್ಚಿದೆ. ಅದೇ ಸಮಯದಲ್ಲಿ, ಸ್ಪಿನ್ನರ್‌ಗಳ ವಿರುದ್ಧ ಅವರ ಸರಾಸರಿ 22.25 ಮತ್ತು ಅವರ ಸ್ಟ್ರೈಕ್ ರೇಟ್ 103 ಕ್ಕಿಂತ ಕಡಿಮೆ ಇದೆ.

ಪವರ್‌ಪ್ಲೇಯ ನಂತರ ಸ್ಪಿನ್ನರ್‌ಗಳು ದಾಳಿಗಿಳಿಯುತ್ತಾರೆ. ಸ್ಪಿನ್ನರ್​ಗಳ ಎದುರು ಕೊಂಚ ತಿಣುಕಾಡುವ ಕೊಹ್ಲಿ, ಬಿಗ್ ಶಾಟ್ ಆಡುವಲ್ಲಿ ವಿಫಲರಾಗುತ್ತಿದ್ದಾರೆ. ವಿರಾಟ್ ಕೊಹ್ಲಿ ಈ ರೀತಿ ನಿಧಾನವಾಗಿ ರನ್ ಕಲೆ ಹಾಕುವುದು ಮಧ್ಯಮ ಓವರ್​ಗಳಲ್ಲಿ ಆರ್‌ಸಿಬಿಯ ರನ್​ ವೇಗಕ್ಕೆ ಕಡಿವಾಣ ಹಾಕುತ್ತಿದೆ. ಇದರಿಂದ ನಂತರ ಬರುವ ಬ್ಯಾಟರ್​ಗಳು ರನ್ ಗಳಿಸಲೇಬೇಕಾದ ಒತ್ತಡಕ್ಕೆ ಸಿಲುಕುತ್ತಿದ್ದಾರೆ. ಅವರು ಬಂದ ತಕ್ಷಣ ದೊಡ್ಡ ಹೊಡೆತಗಳನ್ನು ಆಡಬೇಕಾಗುತ್ತದೆ. ಒಮ್ಮೊಮ್ಮೆ ಈ ಪ್ರಯತ್ನದಲ್ಲಿ ಅವರು ಸಫಲರಾದರೂ, ಹಲವು ಬಾರಿ ವಿಫಲರಾಗಿ ವಿಕೆಟ್ ಒಪ್ಪಿಸುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಆಗಾಗ ಆರ್‌ಸಿಬಿಯ ಮಧ್ಯಮ ಕ್ರಮಾಂಕ ಕುಸಿಯುವುದನ್ನು ನೀವು ನೋಡಬಹುದಾಗಿದೆ. ಹೀಗಾಗಿ ಪವರ್​ ಪ್ಲೇನಲ್ಲಿ ಅಬ್ಬರಿಸುವ ವಿರಾಟ್ ಆ ನಂತರವೂ ತನ್ನ ಸ್ಟ್ರೈಕ್ ರೇಟ್ ಕುಸಿಯದಂತೆ ನೋಡಿಕೊಳ್ಳಬೇಕಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/ipl-2023-should-virat-kohli-be-slowing-down-after-the-powerplay-ipl-2023-psr-au14-560828.html

Views: 0

Leave a Reply

Your email address will not be published. Required fields are marked *