IPL 2023: ಔಟಾ ಅಥವಾ ನಾಟೌಟಾ? ಹೊಸ ಚರ್ಚೆಗೆ ಕಾರಣವಾದ ಕ್ಯಾಚ್

IPL 2023: ಐಪಿಎಲ್​ನ 41ನೇ ಪಂದ್ಯದಲ್ಲಿ ಸಿಎಸ್​ಕೆ ಆಟಗಾರ ಹಿಡಿದ ಕ್ಯಾಚ್​ವೊಂದು ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಎಸ್​ಕೆ ತಂಡವು ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 200 ರನ್​ ಕಲೆಹಾಕಿತು.ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಭರ್ಜರಿ ಪ್ರದರ್ಶನ ನೀಡಿತ್ತು. ಅದರಂತೆ ಕೊನೆಯ 2 ಓವರ್​ಗಳಲ್ಲಿ 22 ರನ್​ಗಳ ಅವಶ್ಯಕತೆಯಿತ್ತು. ತುಷಾರ್ ದೇಶಪಾಂಡೆ ಎಸೆದ 19ನೇ ಓವರ್​ನ 3ನೇ ಎಸೆತದಲ್ಲಿ ಜಿತೇಶ್ ಶರ್ಮಾ ಭರ್ಜರಿ ಹೊಡೆತ ಬಾರಿಸಿದ್ದರು.ಮುಗಿಲೆತ್ತರಕ್ಕೆ ಹಾರಿದ ಚೆಂಡು ಇನ್ನೇನು ಸಿಕ್ಸ್​ ಆಗಲಿದೆ ಅನ್ನುವಷ್ಟರಲ್ಲಿ ಬೌಂಡರಿ ಲೈನ್​ನಲ್ಲಿದ್ದ ಫೀಲ್ಡರ್ ಶೇಕ್ ರಶೀದ್ ಅದ್ಭುತವಾಗಿ ಚೆಂಡನ್ನು ಹಿಡಿದರು. ಆದರೆ ನಿಯಂತ್ರಣ ತಪ್ಪಿದ ರಶೀದ್ ಹಿಂಬದಿಯತ್ತ ಸಾಗಿ ಬೌಂಡರಿ ಲೈನ್​ ಬಳಿ ಕೂದಳೆಲೆಯ ಅಂತರದಲ್ಲಿ ಕ್ಯಾಚ್ ಪೂರ್ಣಗೊಳಿಸಿದ್ದರು.ಆದರೆ ಬೌಂಡರಿ ಲೈನ್​ಗೆ ತನ್ನ ಶೂಸ್ ತಾಗಿದೆಯಾ ಇಲ್ಲವಾ ಎಂಬುದರ ಬಗ್ಗೆ ಖಚಿತತೆ ಇಲ್ಲದ ಕಾರಣ ಫೀಲ್ಡ್ ಅಂಪೈರ್ ಮೂರನೇ ಅಂಪೈರ್​ಗೆ ಮೊರೆ ಹೋದರು. ಈ ವೇಳೆ ಪರಿಶೀಲಿಸಿದ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು.ಇದೀಗ ಮೂರನೇ ಅಂಪೈರ್​ನ ತೀರ್ಪಿನ ಬಗ್ಗೆ ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಥರ್ಡ್​ ಅಂಪೈರ್ ಸಂಪೂರ್ಣವಾಗಿ ಪರಿಶೀಸದೇ ತ್ವರಿತಗತಿಯಲ್ಲಿ ತೀರ್ಪಿಟ್ಟಿದ್ದಾರೆ. ಅದರಲ್ಲೂ ಬೌಂಡರಿ ಲೈನ್​ನಲ್ಲಿ ಯಾವುದೇ ಅಲುಗಾಟ ಕಂಡು ಬಂದಿಲ್ಲ. ಹೀಗಾಗಿ ಔಟ್ ಎಂದು ತೀರ್ಪು ನೀಡಿದ್ದರು. ಇದನ್ನೇ ಈಗ ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದಾರೆ.ಬೌಂಡರಿ ಲೈನ್​ಗೆ ಕಾಲು ತಾಗಿದರೆ ಅದನ್ನು ಸಿಕ್ಸ್​ ಎಂದು ಘೋಷಿಸಬೇಕು. ಬದಲಾಗಿ ಬೌಂಡರಿ ಲೈನ್​ನಲ್ಲಿ ಯಾವುದೇ ಸ್ಥಾನಪಲ್ಲಟವಾಗಿಲ್ಲ ಎಂದು ಔಟ್ ಎಂದು ಘೋಷಿಸುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಕೆಲವೇ ಕ್ಷಣಗಳಲ್ಲಿ ಪರಿಶೀಲನೆ ನಡೆಸಿ ತ್ವರಿತಗತಿಯನ್ನು ತೀರ್ಪು ನೀಡಿರುವ ಬಗ್ಗೆ ಕೂಡ ಕೆಲವರು ಅಸಮಾಧಾನ ಹೊರಹಾಕಿದ್ದಾರೆ.ಅಂಪೈರ್​ಗೆ ಹಲವು ರೀತಿಯಲ್ಲಿ ಪರಿಶೀಲನೆ ನಡೆಸಲು ಅವಕಾಶ ಹೊಂದಿದ್ದರೂ, ನಿರ್ಣಾಯಕ ಹಂತದಲ್ಲಿ ಕೇವಲ 2 ಆ್ಯಂಗಲ್​ನಲ್ಲಿ ಮಾತ್ರ ಪರಿಶೀಲಿಸಿ ತೀರ್ಪು ನೀಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಸಿಎಸ್​ಕೆ ಫೀಲ್ಡರ್ ಶೂಸ್ ತಾಗಿದೆ, ಅದು ಸಿಕ್ಸ್​ ಎಂಬ ವಾದವನ್ನು ಸಹ ಮುಂದಿಡುತ್ತಿದ್ದಾರೆ.
ಒಟ್ಟಿನಲ್ಲಿ ಅತ್ಯದ್ಭುತ ಎನ್ನಬಹುದಾದ ಒಂದು ಕ್ಯಾಚ್ ಇದೀಗ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದು, ಕೆಲವರು ಅದು ಕ್ಯಾಚ್ ಎಂಬ ವಾದವನ್ನು ಮುಂದಿಟ್ಟರೆ, ಮತ್ತೆ ಕೆಲವರು ಅದು ಸಿಕ್ಸ್ ಎಂಬ ಪ್ರತಿವಾದ ಮುಂದಿಡುತ್ತಿದ್ದಾರೆ.
ಇನ್ನು ಈ ಕ್ಯಾಚ್​ ಔಟ್​ನ ಹೊರತಾಗಿಯೂ ಈ ಪಂದ್ಯದ ಕೊನೆಯ ಎಸೆತದಲ್ಲಿ ಸಿಕಂದರ್ ರಾಝ 3 ರನ್​ ಕಲೆಹಾಕುವ ಮೂಲಕ ಪಂಜಾಬ್ ಕಿಂಗ್ಸ್​ ತಂಡವು 4 ವಿಕೆಟ್​ಗಳ ರೋಚಕ ಜಯ ಸಾಧಿಸಿರುವುದು ವಿಶೇಷ.

source https://tv9kannada.com/photo-gallery/cricket-photos/ipl-2023-csks-shaik-rasheed-grabs-one-of-the-controversial-catch-kannada-news-zp-au50-567273.html

Views: 0

Leave a Reply

Your email address will not be published. Required fields are marked *