Rohit Sharma: ತಾಳ್ಮೆ ಕಳೆದುಕೊಂಡ ರೋಹಿತ್ ಶರ್ಮಾ: ಪಿಚ್ ಮಧ್ಯೆ ನಿಂತು ಅಂಪೈರ್​ನ ಮೈಚಳಿ ಬಿಡಿಸಿದ ಹಿಟ್​ಮ್ಯಾನ್: ವಿಡಿಯೋ

Rohit Sharma: ತಾಳ್ಮೆ ಕಳೆದುಕೊಂಡ ರೋಹಿತ್ ಶರ್ಮಾ: ಪಿಚ್ ಮಧ್ಯೆ ನಿಂತು ಅಂಪೈರ್​ನ ಮೈಚಳಿ ಬಿಡಿಸಿದ ಹಿಟ್​ಮ್ಯಾನ್: ವಿಡಿಯೋ
Rohit Sharma and Umpire MI vs RCB

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಐಪಿಎಲ್ 2023ರ 43ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ರೋಚಕ ಗೆಲುವು ಸಾಧಿಸಿತು. ಸಂಜು ಸ್ಯಾಮ್ಸನ್ (Sanju Samson) ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡ ನೀಡಿದ್ದ 213 ರನ್​ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿ ರೋಹಿತ್ ಶರ್ಮಾ (Rohit Sharma) ಪಡೆ 6 ವಿಕೆಟ್​ಗಳ ಜಯ ಕಂಡಿತು. ಈ ಪಂದ್ಯ ಅನೇಕ ದಾಖಲೆಗಳಿಗೆ ಹಾಗೂ ಕೆಲ ವಿಶೇಷ ಘಟನೆಗಳಿಗೆ ಸಾಕ್ಷಿಯಾಯಿತು. ಯಶಸ್ವಿ ಜೈಸ್ವಾಲ್ (Yashasvi Jaiswal) ಶತಕ ಸಿಡಿಸಿ ಅಬ್ಬರಿಸಿದರೆ, ಟಿಮ್ ಡೇವಿಡ್ ಕೊನೆಯ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಗೆಲುವು ತಂದುಕೊಟ್ಟರು. ಇದರ ನಡುವೆ ಮುಂಬೈ ನಾಯಕ ರೋಹಿತ್ ಶರ್ಮಾ ಅಂಪೈರ್ ವಿರುದ್ಧವೇ ಸಿಟ್ಟಿಗೆದ್ದ ಘಟನೆ ಕೂಡ ನಡೆಯಿತು.

ರಾಜಸ್ಥಾನ್ ಬ್ಯಾಟಿಂಗ್​ನ ಕೊನೆಯ 20ನೇ ಓವರ್​ನಲ್ಲಿ ರೋಹಿತ್ ಶರ್ಮಾ ತಾಳ್ಮೆ ಕಳೆದುಕೊಂಡು ಅಂಪೈರ್ ಜೊತೆ ವಾಗ್ವಾದಕ್ಕೆ ಇಳಿದರು. ಹಿಟ್​ಮ್ಯಾನ್ ಕೊನೆಯ ಓವರ್ ಅನ್ನು ಬೌಲಿಂಗ್ ಮಾಡಲು ಯುವ ಪ್ಲೇಯರ್ ಅರ್ಶದ್ ಖಾನ್​ಗೆ ನೀಡಿದರು. ಕ್ರೀಸ್​ನಲ್ಲಿ ಶತಕ ಸಿಡಿಸಿ ಅಬ್ಬರಿಸುತ್ತಿದ್ದ ಯಶಸ್ವಿ ಜೈಸ್ವಾಲ್ ಇದ್ದರು. ಅರ್ಶದ್ ತಮ್ಮ 4ನೇ ಎಸೆತವನ್ನು ಜೈಸ್ವಾಲ್​ಗೆ ಫುಲ್​ಟಾಸ್ ಎಸೆದರು. ಜೈಸ್ವಾಲ್ ಬ್ಯಾಟ್ ಬೀಸಿದರೂ ಸರಿಯಾಗಿ ಟೈಮ್ ಆಗದೆ ಚೆಂಡು ಮೇಲಕ್ಕೋಗಿ ಬೌಲರ್ ಕೈಗೆ ಸೇರಿತು. ಆದರೆ, ಚೆಂಡು ಫುಲ್​ಟಾಸ್ ಇದ್ದ ಕಾರಣ ಅಂಪೈರ್ ಔಟ್ ಕೊಡಲಿಲ್ಲ.

IPL 2023: ಕೆಎಲ್ ರಾಹುಲ್ ಬೇಗ ಔಟಾದರೆ, ಬೃಹತ್ ಮೊತ್ತ ಪೇರಿಸುವ LSG

ಫುಲ್​ಟಾಸ್ ನೋ ಬಾಲ್ ಬಗ್ಗೆ ಅಂಪೈರ್​ಗೆ ಅನುಮಾನವಿದ್ದ ಕಾರಣ ಒಂದು ಕ್ಷಣ ಯೋಚಿಸಿ ಥರ್ಡ್ ಅಂಪೈರ್ ಮೊರೆಹೋಗಲು ನಿರ್ಧರಿಸಿದರು. ಈ ಸಂದರ್ಭ ರೋಹಿತ್ ಶರ್ಮಾ ಕೋಪಗೊಂಡರು. ಇದು ಸರಿಯಾದ ಬಾಲ್, ನೋ ಬಾಲ್ ಅಲ್ಲ ಎಂದು ಅಂಪೈರ್ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ. ಅಂಪೈರ್ ಹಾಗೂ ರೋಹಿತ್ ನಡುವೆ ಸಣ್ಣಮಟ್ಟದ ಜಗಳ ಕೂಡ ನಡೆಯಿತು. ಬಳಿಕ ಥರ್ಡ್ ಅಂಪೈರ್ ಪರಿಶೀಲಿಸಿ ಔಟ್ ಎಂಬ ತೀರ್ಮಾನ ಪ್ರಕಟಿಸಿದರು. ರೋಹಿತ್ ಹಾಗೂ ಅಂಪೈರ್ ನಡುವಣ ಜಗಳದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

 

ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ, ತಂಡದ ಪರ ಯಶಸ್ವಿ ಜೈಸ್ವಾಲ್ ಏಕಾಂಗಿಯಾಗಿ ರನ್ ಕಲೆಹಾಕಿದ್ದು ಬಿಟ್ಟರೆ ನಂತರ ಆಡಿದ ಯಾವ ಬ್ಯಾಟರ್​ನ ಸ್ಕೋರ್ 20ರ ಗಡಿ ದಾಟಲಿಲ್ಲ. ಜೈಸ್ವಾಲ್ ಕೇವಲ 62 ಎಸೆತಗಳಲ್ಲಿ 16 ಫೋರ್ ಹಾಗೂ 8 ಸಿಕ್ಸರ್ ಬಾರಿಸಿ 124 ರನ್ ಚಚ್ಚಿದರು. ಜೋಸ್ ಬಟ್ಲರ್ 18, ನಾಯಕ ಸಂಜು ಸ್ಯಾಮ್ಸನ್ 14 ರನ್​ಗಳ ಕೊಡುಗೆ ನೀಡಿದರು. ಆರ್​ಆರ್ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 212 ರನ್ ಬಾರಿಸಿತು. ಮುಂಬೈ ಪರ ಅರ್ಶದ್ ಖಾನ್ 3 ಹಾಗೂ ಪಿಯುಷ್ ಚಾವ್ಲಾ 2 ವಿಕೆಟ್ ಕಿತ್ತರು.

ಕಠಿಣ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಆರಂಭದಲ್ಲಿ 2 ವಿಕೆಟ್ ಕಳೆದುಕೊಂಡರೂ ಮಧ್ಯಮ ಕ್ರಮಾಂಕದಲ್ಲಿ ಕ್ಯಾಮ್ರೋನ್ ಗ್ರೀನ್ (44) ಹಾಗೂ ಸೂರ್ಯಕುಮಾರ್ ಯಾದವ್ (55) ಅಬ್ಬರಿಸಿ ಒಂದು ಹಂತಕ್ಕೆ ಪಂದ್ಯವನ್ನು ತಂದಿಟ್ಟರು. ಕೊನೆಯ ಹಂತದಲ್ಲಿ ತಿಲಕ್ ವರ್ಮಾ (ಅಜೇಯ 29) ಮತ್ತು ಟಿಮ್ ಡೇವಿಡ್ (ಅಜೇಯ 45) ತಂಡಕ್ಕೆ ಗೆಲುವು ತಂದುಕೊಟ್ಟರು. ಮುಖ್ಯವಾಗಿ ಸೋಲಿನ ಸುಳಿಗೆ ಸಿಲುಕಿದ್ದ ಮುಂಬೈ ಅನ್ನು ಕೊನೆಯ ಓವರ್​ನಲ್ಲಿ ಸತತ ಮೂರು ಸಿಕ್ಸರ್ ಸಿಡಿಸಿ ಗೆಲುವು ತಂದಿಟ್ಟು ಟಿಮ್ ಡೇವಿಡ್ ಹೀರೋ ಆದರು. ಈ ಮೂಲಕ ರೋಹಿತ್ ಹುಟ್ಟುಹಬ್ಬಕ್ಕೆ ಗೆಲುವಿನ ಉಡುಗೊರೆ ದೊರಕಿತು. ಅಲ್ಲದೆ ಐಪಿಎಲ್ ಇತಿಹಾಸದಲ್ಲೇ ವಾಂಖೆಡೆಯಲ್ಲಿ ಗರಿಷ್ಠ ರನ್ ಚೇಸ್ ಮಾಡಿದ ದಾಖಲೆ ಮುಂಬೈ ಪಾಲಾಯಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/rohit-sharma-gets-angry-at-the-umpire-during-the-mi-vs-rr-match-about-yashasvi-jaiswal-dismissal-vb-au48-567336.html

Leave a Reply

Your email address will not be published. Required fields are marked *