PBKS vs MI: ಐಪಿಎಲ್​ನಲ್ಲಿ ಇತಿಹಾಸ ರಚಿಸಿದ ಮುಂಬೈ ಇಂಡಿಯನ್ಸ್: ಈವರೆಗೆ ಯಾವ ತಂಡ ಕೂಡ ಮಾಡಿಲ್ಲ ಈ ಸಾಧನೆ

ಐಪಿಎಲ್​ನಲ್ಲಿ 200+ ರನ್​ಗಳ ಟಾರ್ಗೆಟ್ ನೀಡಿದರೂ ಅದು ಸೇಫ್ ಅಲ್ಲ ಎಂಬುದಕ್ಕೆ ಈ ಬಾರಿಯ ಟೂರ್ನಿ ಉತ್ತಮ ಉದಾಹರಣೆ ಆಗಿದೆ. ಅನೇಕ ತಂಡಗಳು 200 ಕ್ಕೂ ಅಧಿಕ ರನ್​ಗಳ ಗುರಿ ನೀಡಿದ್ದರೂ ಟಾರ್ಗೆಟ್ ಬೆನ್ನಟ್ಟುವ ತಂಡ ಸುಲಭವಾಗಿ ಜಯ ಸಾಧಿಸುತ್ತಿದೆ. ಇದಕ್ಕೆ ಮತ್ತೊಂದು ಉದಾಹರಣೆ ಪಂಜಾಬ್ ಹಾಗೂ ಮುಂಬೈ ಪಂದ್ಯ.ಐಪಿಎಲ್ 2023 ರಲ್ಲಿ ಬುಧವಾರ ನಡೆದ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಣ ಪಂದ್ಯ ರಣ ರೋಚಕವಾಗಿತ್ತು. ಉಭಯ ತಂಡಗಳ ಮೊತ್ತ 200 ರ ಗಡಿ ದಾಟಿದ್ದವು. ಇದರಲ್ಲಿ ರೋಹಿತ್ ಶರ್ಮಾ ಪಡೆ ಟಾರ್ಗೆಟ್ ಬೆನ್ನಟ್ಟಿ 6 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು.ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ಮಧ್ಯಮ ಕ್ರಮಾಂಕದಲ್ಲಿ ಲಿಯಾಮ್ ಲಿವಿಂಗ್​​ಸ್ಟೋನ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಕೇವಲ 42 ಎಸೆತಗಳಲ್ಲಿ 7 ಫೋರ್, 4 ಸಿಕ್ಸರ್ ಸಿಡಿಸಿ ಅಜೇಯ 82 ರನ್ ಚಚ್ಚಿದರು.ಜಿತೇಶ್ ಶರ್ಮಾ 27ಎಸೆತಗಳಲ್ಲಿ ಅಜೇಯ 49, ಶಿಖರ್ ಧವನ್ 30 ಹಾಗೂ ಮ್ಯಾಥ್ಯೂ ಶಾರ್ಟ್ 27 ರನ್ ಗಳಿಸಿದರು. ಪಂಜಾಬ್ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 214 ರನ್ ಕಲೆಹಾಕಿತು. ಮುಂಬೈ ಪರ ಪಿಯುಷ್ ಚಾವ್ಲಾ 2 ವಿಕೆಟ್ ಪಡೆದರು.ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಪರ ರೋಹಿತ್ ಶರ್ಮಾ ಶೂನ್ಯಕ್ಕೆ ನಿರ್ಗಮಿಸಿದರೆ ಕ್ಯಾಮ್ರೋನ್ ಗ್ರೀನ್ 23 ರನ್​ಗೆ ಔಟಾದರು. ಆದರೆ, ನಂತರ ಜೊತೆಯಾದ ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟಿಂಗ್ ನಡೆದರು.ಕಿಶನ್ 41 ಎಸೆತಗಳಲ್ಲಿ 7 ಫೋರ್, 4 ಸಿಕ್ಸರ್​ನೊಂದಿಗೆ 75 ರನ್ ಹಾಗೂ ಯಾದವ್ 31 ಎಸೆತಗಳಲ್ಲಿ 8 ಫೋರ್, 2 ಸಿಕ್ಸರ್ ಸಿಡಿಸಿ 66 ರನ್ ಚಚ್ಚಿ ಗೆಲುವಿನ ಆಸೆ ಚಿಗುರಿಸಿದರು.ಅಂತಿಮ ಹಂತದಲ್ಲಿ ತಿಲಕ್ ವರ್ಮಾ 10 ಎಸೆತಗಳಲ್ಲಿ 26 ರನ್ ಸಿಡಿಸಿ ಹಾಗೂ ಟಿಮ್ ಡೇವಿಡ್ 10 ಎಸೆತಗಳಲ್ಲಿ 19 ರನ್ ಬಾರಿಸಿ 18.5 ಓವರ್​ಗಳಲ್ಲೇ 216 ರನ್ ಗಳಿಸಿ ಗೆಲುವು ಸಾಧಿಸುವಂತೆ ಮಾಡಿದರು.ಈ ಮೂಲಕ ಮುಂಬೈ ವಿಶೇಷ ಸಾಧನೆ ಗೈದಿದೆ. ಮೊಹಾಲಿ ಕ್ರೀಡಾಂಗಣದಲ್ಲಿ 200+ ರನ್ ಟಾರ್ಗೆಟ್ ಬೆನ್ನಟ್ಟಿ ಗೆದ್ದ ಮೊದಲ ತಂಡ ಮುಂಬೈ ಇಂಡಿಯನ್ಸ್ ಆಗಿದೆ. ಅಲ್ಲದೆ ಐಪಿಎಲ್​ನಲ್ಲಿ ಸತತವಾಗಿ ಎರಡು ಬಾರಿ 200+ ಗುರಿ ಬೆನ್ನಟ್ಟಿ ಗೆದ್ದ ತಂಡ ಮುಂಬೈ ಆಗಿದೆ.

source https://tv9kannada.com/photo-gallery/cricket-photos/mumbai-indians-create-history-rohit-sharma-team-becomes-the-first-team-to-chase-200-plus-in-mohali-vb-569606.html

Leave a Reply

Your email address will not be published. Required fields are marked *