IPL 2023: ಗೌತಿಗೆ ಬಿಸಿ ಮುಟ್ಟಿಸಿದ ಕೊಹ್ಲಿ ಅಭಿಮಾನಿಗಳು: ಗರಂ ಆದ ಗಂಭೀರ್

IPL 2023: ಗೌತಿಗೆ ಬಿಸಿ ಮುಟ್ಟಿಸಿದ ಕೊಹ್ಲಿ ಅಭಿಮಾನಿಗಳು: ಗರಂ ಆದ ಗಂಭೀರ್
IPL 2023: Gautam Gambhir Taunted With 'Virat Kohli' Chants in Lucknow

IPL 2023: ವಿರಾಟ್ ಕೊಹ್ಲಿ (Virat Kohli) ಹಾಗೂ ಗೌತಮ್ ಗಂಭೀರ್ (Gautam Gambhir) ನಡುವಣ ಕಿತ್ತಾಟ ಸದ್ಯಕ್ಕಂತು ಮುಗಿಯುವಂತೆ ಕಾಣುತ್ತಿಲ್ಲ. ಏಕೆಂದರೆ 2013 ರಲ್ಲಿ ಶುರುವಾಗಿದ್ದ ಇಬ್ಬರು ಆಟಗಾರರ ವೈಮನಸ್ಸು ದಶಕಗಳ ಬಳಿಕ ಕೂಡ ಮುಂದುವರೆದಿದೆ. ಇದೀಗ ಇದೇ ವಿಷಯದಲ್ಲಿ ಅಭಿಮಾನಿಗಳು ಕೂಡ ಎಂಟ್ರಿಯಾಗಿದ್ದಾರೆ. ಅಷ್ಟಕ್ಕೂ ಈ ರೋಷಾವೇಷ ಶುರುವಾಗಿದ್ದು ಕೂಡ ಅಭಿಮಾನಿಗಳಿಗೋಸ್ಕರ ಎಂದರೆ ತಪ್ಪಾಗಲಾರದು. ಏಕೆಂದರೆ ಏಪ್ರಿಲ್ 10 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ 1 ವಿಕೆಟ್​ನಿಂದ ಲಕ್ನೋ ಸೂಪರ್ ಜೈಂಟ್ಸ್ ರೋಚಕ ಜಯ ಸಾಧಿಸಿತ್ತು. ಈ ಗೆಲುವಿನ ಬಳಿಕ ಲಕ್ನೋ ತಂಡದ ಮೆಂಟರ್ ಗೌತಮ್ ಗಂಭೀರ್ ಸ್ಟೇಡಿಯಂನಲ್ಲಿ ನೆರೆದಿದ್ದ ಆರ್​ಸಿಬಿ ಅಭಿಮಾನಿಗಳನ್ನು ಬಾಯಿ ಮುಚ್ಕೊಂಡಿರುವಂತೆ ಕೈ ಸನ್ನೆ ಮಾಡಿದ್ದರು.

ಇದೆಲ್ಲವನ್ನೂ ಗಮನಿಸಿದ್ದ ವಿರಾಟ್ ಕೊಹ್ಲಿ ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ವೇಳೆ ಬಡ್ಡಿ ಸಮೇತ ತಿರುಗೇಟು ನೀಡಿದ್ದರು. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 18 ರನ್​ಗಳಿಂದ ಜಯ ಸಾಧಿಸುತ್ತಿದ್ದಂತೆ ವಿರಾಟ್ ಕೊಹ್ಲಿ ವೀರಾವೇಷದಿಂದ ಸಂಭ್ರಮಿಸಿದ್ದರು. ಇದೆಲ್ಲವೂ ಗೌತಮ್ ಗಂಭೀರ್ ಅವರನ್ನು ಮತ್ತಷ್ಟು ರೊಚ್ಚಿಗೆಬ್ಬಿಸಿತ್ತು.

ಅಲ್ಲದೆ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವೆ ವಾಗ್ವಾದ ಕೂಡ ನಡೆಯಿತು. ಇಬ್ಬರ ನಡುವಣ ಮಾತಿನ ಚಕಮಕಿಯನ್ನು ಗಂಭೀರವಾಗಿ ಪರಿಗಣಿಸಿದ್ದ ಐಪಿಎಲ್ ಆಡಳಿತ ಮಂಡಳಿ, ಇಬ್ಬರಿಗೂ ಪಂದ್ಯ ಶುಲ್ಕದ ಶೇ.100 ರಷ್ಟು ದಂಡ ವಿಧಿಸಿದ್ದರು. ಇದರೊಂದಿಗೆ ಕೊಹ್ಲಿ-ಗಂಭೀರ್ ನಡುವಣ ಜಗಳಕ್ಕೆ ತಾತ್ಕಾಲಿಕ ತೆರೆ ಬಿದ್ದಿದೆ.

ಇದನ್ನೂ ಓದಿ: IPL 2023: ಮಾತಿನ ಚಕಮಕಿಯಲ್ಲಿ ವಿರಾಟ್ ಕೊಹ್ಲಿ-ಗಂಭೀರ್ ಬೈದಾಡಿಕೊಂಡಿದ್ದೇನು? ಇಲ್ಲಿದೆ ಮಾತುಕತೆ ಮಾಹಿತಿ

ಆದರೆ ಇದೀಗ ರಣರಂಗಕ್ಕೆ ವಿರಾಟ್ ಕೊಹ್ಲಿಯ ಅಭಿಮಾನಿಗಳು ಎಂಟ್ರಿ ಕೊಟ್ಟಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯದ ವೇಳೆ ಕಿಂಗ್ ಕೊಹ್ಲಿ ಅಭಿಮಾನಿಗಳು ಗೌತಮ್ ಗಂಭೀರ್ ಅವರನ್ನು ಕೆಣಕುವ ಪ್ರಯತ್ನ ಮಾಡಿದ್ದಾರೆ.

ಲಕ್ನೋದಲ್ಲಿ ನಡೆದ ಸಿಎಸ್​ಕೆ ಹಾಗೂ ಎಲ್​ಎಸ್​ಜಿ ನಡುವಣ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಆ ಬಳಿಕ ಗೌತಮ್ ಗಂಭೀರ್ ಡ್ರೆಸ್ಸಿಂಗ್ ರೂಮ್​ನತ್ತ ತೆರಳುತ್ತಿದ್ದರು. ಈ ವೇಳೆ ಸ್ಟ್ಯಾಂಡ್‌ನಲ್ಲಿದ್ದ ಅಭಿಮಾನಿಗಳು ವಿರಾಟ್ ಕೊಹ್ಲಿ ಹೆಸರನ್ನು ಕೂಗಿದ್ದಾರೆ. ಇತ್ತ ಕೊಹ್ಲಿಯ ಹೆಸರು ಕೇಳುತ್ತಿದ್ದಂತೆ ಗಂಭೀರ್ ಕುಪಿತಗೊಂಡರು. ಅಲ್ಲದೆ ಒಂದು ಕ್ಷಣ ಅಭಿಮಾನಿಗಳನ್ನು ದಿಟ್ಟಿಸಿ ನೋಡಿ ಮುಂದೆ ಸಾಗಿದರು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಒಟ್ಟಿನಲ್ಲಿ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವಣ ಚಕಮಕಿ ಮುಗಿದ ಅಧ್ಯಾಯ ಎನ್ನುವಷ್ಟರಲ್ಲೇ, ಇದೀಗ ತವರು ಮೈದಾನದಲ್ಲೇ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್​ಗೆ ಕಿಂಗ್ ಕೊಹ್ಲಿ ಅಭಿಮಾನಿಗಳು ಬಿಸಿ ಮುಟ್ಟಿಸಿದ್ದಾರೆ. ಇದು ಮುಂದಿನ ಪಂದ್ಯಗಳಲ್ಲೂ ಮುಂದುವರೆಯುವ ಸಾಧ್ಯತೆಯಿದೆ.

 

source https://tv9kannada.com/sports/cricket-news/ipl-2023-gautam-gambhir-taunted-with-virat-kohli-chants-kannada-news-zp-570028.html

Leave a Reply

Your email address will not be published. Required fields are marked *