IPL 2023: RCB ಗೆ ಧೋನಿ ನಾಯಕರಾಗಿದ್ರೆ, ಈಗಾಗಲೇ 3 ಕಪ್​ ಆದ್ರೂ ಗೆಲ್ಲುತ್ತಿತ್ತು: ವಾಸಿಂ ಅಕ್ರಂ

IPL 2023: ಐಪಿಎಲ್​​ನಲ್ಲಿ ಟ್ರೋಫಿ ಗೆಲ್ಲುವ ಆರ್​ಸಿಬಿ ತಂಡದ ಕನಸು ಮುಂದುವರೆದಿದೆ. ಕಳೆದ 15 ವರ್ಷಗಳಲ್ಲಿ 3 ಬಾರಿ ಫೈನಲ್ ಪ್ರವೇಶಿಸಿದ್ದ ಆರ್​ಸಿಬಿ ಅಂತಿಮ ಹಂತದಲ್ಲಿ ಎಡವಿತ್ತು. ಇದೀಗ 16ನೇ ಸೀಸನ್​ನಲ್ಲಿ ಕಪ್ ಗೆಲ್ಲುವ ವಿಶ್ವಾಸದೊಂದಿಗೆ ಹೋರಾಟ ಮುಂದುವರೆಸಿದೆ.ಆದರೆ ಕಳೆದ 15 ವರ್ಷಗಳಲ್ಲಿ ಆರ್​ಸಿಬಿ ತಂಡವನ್ನು ಮಹೇಂದ್ರ ಸಿಂಗ್ ಧೋನಿ ಮುನ್ನಡೆಸಿದ್ದರೆ ಕನಿಷ್ಠ 3 ಕಪ್​ಗಳನ್ನಾದರೂ ಗೆಲ್ಲುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಪಾಕ್ ತಂಡದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಂ.ಈ ಬಗ್ಗೆ ಮಾತನಾಡಿರುವ ವಾಸಿಂ ಅಕ್ರಂ, ಆರ್​ಸಿಬಿ ಪ್ರತಿ ಸೀಸನ್​ನಲ್ಲೂ ಉತ್ತಮ ತಂಡವನ್ನೇ ರೂಪಿಸಿದೆ. ಆದರೆ ಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಅದರಲ್ಲೂ ವಿರಾಟ್ ಕೊಹ್ಲಿಯ ನಾಯಕತ್ವದಲ್ಲಿ ತಂಡವು ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಳ್ಳುವಲ್ಲಿ ವಿಫಲವಾಗಿತ್ತು.ಒಂದು ವೇಳೆ ಆರ್​ಸಿಬಿ ತಂಡವನ್ನು ಮಹೇಂದ್ರ ಸಿಂಗ್ ಧೋನಿ ಏನಾದರೂ ಮುನ್ನಡೆಸಿದ್ದರೆ, ಈಗಾಗಲೇ 3 ಕಪ್​ಗಳನ್ನಾದರೂ ಗೆದ್ದಿರುತ್ತಿತ್ತು ಎಂದು ವಾಸಿಂ ಅಕ್ರಂ ತಿಳಿಸಿದ್ದಾರೆ.ಏಕೆಂದರೆ ಧೋನಿ ಅತ್ಯುತ್ತಮ ನಾಯಕ. ಅವರಿಗೆ ತಂಡವನ್ನು ಯಾವ ಪರಿಸ್ಥಿತಿಯಲ್ಲಿ ಹೇಗೆ ಮುನ್ನಡೆಸಬೇಕೆಂದು ಚೆನ್ನಾಗಿ ತಿಳಿದಿದೆ. ಒಂದು ಧೋನಿ ಆರ್​ಸಿಬಿ ತಂಡದ ಸಾರಥ್ಯವಹಿಸಿದ್ದರೆ ಖಂಡಿತವಾಗಿಯೂ ಕಪ್​ ಗೆಲ್ಲುತ್ತಿದ್ದರು ಎಂದು ಅಕ್ರಂ ಅಭಿಪ್ರಾಯಪಟ್ಟಿದ್ದಾರೆ.ಅಂದಹಾಗೆ 2009 ರಲ್ಲಿ ಆರ್​ಸಿಬಿ ತಂಡವು ಅನಿಲ್ ಕುಂಬ್ಳೆ ನಾಯಕತ್ವದಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿತ್ತು. ಆದರೆ ಅಂತಿಮ ಪಂದ್ಯದಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ 6 ರನ್​ಗಳಿಂದ ಸೋತು ಟ್ರೋಫಿಗೆ ಮುತ್ತಿಕ್ಕುವ ಅವಕಾಶ ಕಳೆದುಕೊಂಡಿತು.ಇದಾದ ಬಳಿಕ ಆರ್​ಸಿಬಿ ಡೇನಿಯಲ್ ವೆಟ್ಟೋರಿ ನಾಯಕತ್ವದಲ್ಲಿ 2011ರಲ್ಲಿ ಫೈನಲ್ ಆಡಿತ್ತು. ಅಂದು ಸಿಎಸ್​ಕೆ ವಿರುದ್ಧ 58 ರನ್​ಗಳಿಂದ ಸೋತು ಚೊಚ್ಚಲ ಬಾರಿ ಚಾಂಪಿಯನ್​ ಪಟ್ಟಕ್ಕೇರುವ ಅವಕಾಶವನ್ನು ಆರ್​ಸಿಬಿ ಕೈಚೆಲ್ಲಿಕೊಂಡಿತು.ಇನ್ನು 2016 ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್​ಸಿಬಿ ಫೈನಲ್ ಪ್ರವೇಶಿಸಿತು. ಎಸ್​ಆರ್​ಹೆಚ್​ ವಿರುದ್ಧದ ಫೈನಲ್ ಪಂದ್ಯದಲ್ಲಿ ಕೇವಲ 8 ರನ್​ಗಳಿಂದ ಪರಾಜಯಗೊಳ್ಳುವ ಮೂಲಕ ಆರ್​ಸಿಬಿ ಚೊಚ್ಚಲ ಬಾರಿ ಟ್ರೋಫಿ ಮುಡಿಗೇರಿಸಿಕೊಳ್ಳುವ ಅವಕಾಶ ಕಳೆದುಕೊಂಡಿತು.ಇದೀಗ ಐಪಿಎಲ್​ 2023 ರಲ್ಲೂ ಆರ್​ಸಿಬಿ ತಂಡದ ಹೋರಾಟ ಮುಂದುವರೆದಿದೆ. ಆಡಿರುವ 10 ಪಂದ್ಯಗಳಲ್ಲಿ 5 ಜಯ ಸಾಧಿಸಿದೆ. ಇನ್ನುಳಿದಿರುವ 4 ಪಂದ್ಯಗಳಲ್ಲಿ ಜಯ ಸಾಧಿಸುವ ಮೂಲಕ ಪ್ಲೇಆಫ್ ಪ್ರವೇಶಿಸುವ ಇರಾದೆಯಲ್ಲಿದೆ. ಅಲ್ಲದೆ ನಾಲ್ಕರ ಘಟ್ಟದಲ್ಲಿ ಗೆಲುವು ಸಾಧಿಸುವ ಮೂಲಕ ಈ ಬಾರಿ ಆರ್​ಸಿಬಿ 4ನೇ ಬಾರಿ ಫೈನಲ್ ಪ್ರವೇಶಿಸಲಿದೆಯಾ ಕಾದು ನೋಡಬೇಕಿದೆ.

source https://tv9kannada.com/photo-gallery/cricket-photos/rcb-would-have-won-3-ipl-trophies-if-dhoni-was-captain-wasim-akram-kannada-news-zp-573079.html

Leave a Reply

Your email address will not be published. Required fields are marked *