Suryakumar Yadav: ಸೂರ್ಯಕುಮಾರ್ ಕೊನೆಯ ಎಸೆತದಲ್ಲಿ ಸಿಕ್ಸ್ ಸಿಡಿಸಿ ಶತಕ ಬಾರಿಸಿದಾಗ ಸಚಿನ್, ರೋಹಿತ್ ಏನು ಮಾಡಿಡ್ರು ನೋಡಿ

Suryakumar Yadav: ಸೂರ್ಯಕುಮಾರ್ ಕೊನೆಯ ಎಸೆತದಲ್ಲಿ ಸಿಕ್ಸ್ ಸಿಡಿಸಿ ಶತಕ ಬಾರಿಸಿದಾಗ ಸಚಿನ್, ರೋಹಿತ್ ಏನು ಮಾಡಿಡ್ರು ನೋಡಿ
Rohit Suryakumar and Sachin33

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ (MI vs GT) ನಡುವಣ ಪಂದ್ಯ ರೋಚಕತೆಯಿಂದ ಕೂಡಿತ್ತು. ಸೂರ್ಯಕುಮಾರ್ ಯಾದವ್ (Suryakumar Yadav) ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡದ ಮೊತ್ತ 200ರ ಗಡಿ ದಾಟುವಂತೆ ಮಾಡಿದರು. ಕೇವಲ 49 ಎಸೆತಗಳಲ್ಲಿ 11 ಫೋರ್, 6 ಸಿಕ್ಸರ್ ಸಿಡಿಸಿ ಅಜೇಯ 103 ರನ್ ಚಚ್ಚಿದರು. ಇತ್ತ ಗುಜರಾತ್ ಪರ ರಶೀದ್ ಖಾನ್ (Rashid Khan) 32 ಎಸೆತಗಳಲ್ಲಿ 3 ಫೋರ್ ಹಾಗೂ 10 ಸಿಕ್ಸರ್ ಬಾರಿಸಿ ಅಜೇಯ 79 ರನ್ ಸಿಡಿಸಿ ಗೆಲುವಿಗೆ ಏಕಾಂಗಿ ಹೋರಾಟ ನಡೆಸಿದರು. ಆದರೆ, ಮುಂಬೈ 27 ರನ್​ಗಳ ಭರ್ಜರಿ ಜಯ ಸಾಧಿಸಿ 14 ಅಂಕ ಸಂಪಾದಿಸಿ ಪಾಯಿಂಟ್ ಟೇಬಲ್​ನಲ್ಲಿ ಮೂರನೇ ಸ್ಥಾನಕ್ಕೇರಿದೆ.

ಮುಂಬೈ ಗೆಲುವಿನಲ್ಲಿ ಸೂರ್ಯಕುಮಾರ್ ಪ್ರಮುಖ ಪಾತ್ರವಹಿಸಿದರು. ಕ್ರೀಸ್ ಕಚ್ಚಿ ನಿಂತ ಸೂರ್ಯ ಜಿಟಿ ಬೌಲರ್​ಗಳ ಬೆಂಡೆತ್ತಿದರು. ಮನಮೋಹಕ ಹೊಡೆತಗಳ ಮೂಲಕ ಗಮನ ಸೆಳೆದ ಇವರು ಫೋರ್-ಸಿಕ್ಸರ್​ಗಳ ಮಳೆ ಸುರಿಸಿ ಐಪಿಎಲ್ ಇತಿಹಾಸದಲ್ಲಿ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದರು. 20ನೇ ಓವರ್ ಆರಂಭಕ್ಕೂ ಮುನ್ನ ಸೂರ್ಯ 44 ಎಸೆತಗಳಲ್ಲಿ 87 ರನ್ ಗಳಿಸಿದ್ದರು. ಕೊನೆಯ ಎಸೆತಕ್ಕೂ ಮುನ್ನ 97 ರನ್​ಗೆ ಬಂದರು. ಹೀಗಾಗಿ 20ನೇ ಓವರ್​ನ 6ನೇ ಎಸೆತದಲ್ಲಿ ಸೂರ್ಯ ಶತಕಕ್ಕೆ 3 ರನ್​ಗಳು ಬೇಕಾಗಿದ್ದವು. ಅಲ್ಜರಿ ಜೋಸೆಫ್ ಅವರ ಅಂತಿಮ ಎಸೆತದಲ್ಲಿ ಊಹಿಸಲಾಗದ ರೀತಿ ಸಿಕ್ಸ್ ಸಿಡಿಸಿ ಶತಕ ಪೂರೈಸಿದರು.

IPL 2023: ಸಿಡಿಲಬ್ಬರದ ಸಿಡಿಲಮರಿ ಸೂರ್ಯನ ಬ್ಯಾಟ್​ನಿಂದ ತೂಫಾನ್ ಶತಕ

ಸೂರ್ಯಕುಮಾರ್ ಯಾದವ್ ಶತಕ ಬಾರಿಸುತ್ತಿದ್ದಂತೆ ಇಡೀ ವಾಂಖೆಡೆ ಸ್ಟೇಡಿಯಂ ಸೂರ್ಯ, ಸೂರ್ಯ ಹೆಸರುನ್ನು ಕೂಗಿತು. ಅತ್ತ ಪೆವಿಲಿಯನ್​ನಲ್ಲಿ ಕೂತಿದ್ದ ಸಚಿನ್ ತೆಂಡೂಲ್ಕರ್ ಎದ್ದು ನಿಂತು ಚಪ್ಪಾಳೆ ತಟ್ಟಿದರೆ ನಾಯಕ ರೋಹಿತ್ ಶರ್ಮಾ ಕೈಮುಗಿದು ಸೂರ್ಯನ ಆಟಕ್ಕೆ ಮನಸೋತರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

 

ಸೂರ್ಯನ ಆರ್ಭಟಕ್ಕೆ ಹಲವು ದಾಖಲೆ ಪುಡಿಪುಡಿ:

ಭರ್ಜರಿ ಶತಕ ಸಿಡಿಸುವ ಮೂಲಕ ಸೂರ್ಯಕುಮಾರ್ ಯಾದವ್ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಕೇವಲ 49 ಎಸೆತಗಳಲ್ಲಿ ಸೆಂಚುರಿ ಸಿಡಿಸುವ ಮೂಲಕ ಮುಂಬೈ ಇಂಡಿಯನ್ಸ್ ಪರ ಅತೀ ವೇಗವಾಗಿ ಶತಕ ಸಿಡಿಸಿದ ಭಾರತೀಯ ಬ್ಯಾಟ್ಸ್​ಮನ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿತ್ತು. ಹಿಟ್​ಮ್ಯಾನ್ 52 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಇನ್ನು ಗುಜರಾತ್ ಟೈಟಾನ್ಸ್ ವಿರುದ್ಧ ಐಪಿಎಲ್​ನಲ್ಲಿ ಅತ್ಯಧಿಕ ಸ್ಕೋರ್​ಗಳಿಸಿದ ಬ್ಯಾಟರ್ ಎಂಬ ದಾಖಲೆ ಕೂಡ ಸೂರ್ಯಕುಮಾರ್ ಪಾಲಾಗಿದೆ. ಇದಕ್ಕೂ ಮುನ್ನ ಈ ರೆಕಾರ್ಡ್ 92 ರನ್ ಬಾರಿಸಿದ ಸಿಎಸ್​ಕೆ ತಂಡದ ರುತುರಾಜ್ ಗಾಯಕ್ವಾಡ್ ಹೆಸರಿನಲ್ಲಿತ್ತು.

 

ಇಷ್ಟೇ ಅಲ್ಲದೆ ಮುಂಬೈ ಇಂಡಿಯನ್ಸ್ ಪರ ಗರಿಷ್ಠ ಸ್ಕೋರ್​ಗಳಿಸಿದ ಮೂರನೇ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಸೂರ್ಯಕುಮಾರ್ ಪಾತ್ರರಾಗಿದ್ದಾರೆ. ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ ಸೆಂಚುರಿ ಸಿಡಿಸಿದ ಮೊದಲ ಬ್ಯಾಟರ್ ಎಂಬ ದಾಖಲೆ ಕೂಡ ಸೂರ್ಯಕುಮಾರ್ ಪಾಲಾಗಿದೆ. ಮುಂಬೈ ಇಂಡಿಯನ್ಸ್ ಪರ 50 ಎಸೆತಗಳ ಒಳಗೆ ಶತಕ ಸಿಡಿಸಿದ ಮೊದಲ ಭಾರತೀಯ ಹಾಗೂ 2ನೇ ಬ್ಯಾಟರ್ ಎಂಬ ವಿಶೇಷ ದಾಖಲೆಯನ್ನೂ ಸೂರ್ಯಕುಮಾರ್ ಯಾದವ್ ನಿರ್ಮಿಸಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/sachin-tendulkar-and-rohit-sharma-gave-a-standing-ovation-to-suryakumar-yadav-to-applaud-his-knock-mi-vs-gt-vb-577011.html

Leave a Reply

Your email address will not be published. Required fields are marked *