![Jaipur ಇಂದು ಗೆಲ್ಲಲೇ ಬೇಕಾದ ಆರ್ಸಿಬಿ ಪಂದ್ಯಕ್ಕೆ ಇದೆಯೇ ಮಳೆಯ ಕಾಟ?: ಹವಾಮಾನ ವರದಿ ಇಲ್ಲಿದೆ](https://images.tv9kannada.com/wp-content/uploads/2023/05/RR-vs-RCB-Weather-Report.jpg)
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿಂದು (IPL 2023) ಎರಡು ಮಹತ್ವದ ಪಂದ್ಯಗಳು ನಡೆಯಲಿದೆ. ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿರುವ ಮೊದಲ ಮ್ಯಾಚ್ನಲ್ಲಿ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಮತ್ತು ಫಾಫ್ ಡುಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RR vs RCB) ಮುಖಾಮುಖಿ ಆಗಲಿದೆ. ಉಭಯ ತಂಡಗಳಿಗೆ ಈ ಪಂದ್ಯ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಪಾಯಿಂಟ್ ಟೇಬಲ್ನಲ್ಲಿ (Points Table) ಆರ್ಸಿಬಿ ಏಳನೇ ಸ್ಥಾನಕ್ಕೆ ಕುಸಿದಿದೆ. ಆಡಿದ ಹನ್ನೊಂದು ಪಂದ್ಯಗಳ ಪೈಕಿ ಐದರಲ್ಲಿ ಗೆಲುವು ಆರರಲ್ಲಿ ಸೋಲು ಕಂಡು 10 ಅಂಕ ಸಂಪಾದಿಸಿ -0.345 ರನ್ರೇಟ್ ಹೊಂದಿದೆ. ಇತ್ತ ರಾಜಸ್ಥಾನ್ ಐದನೇ ಸ್ಥಾನದಲ್ಲಿದೆ. ಆಡಿದ 12 ಪಂದ್ಯಗಳಲ್ಲಿ ಆರು ಗೆಲುವು, ಆರು ಸೋಲುಂಡು +0.633ರನ್ರೇಟ್ನೊಂದಿಗೆ 12 ಅಂಕ ಸಂಪಾದಿಸಿದೆ.
ಪ್ಲೇ ಆಫ್ಗೇರುವ ದೃಷ್ಟಿಯಿಂದ ರಾಜಸ್ಥಾನ್-ಆರ್ಸಿಬಿ ಉಭಯ ತಂಡಗಳಿಗೆ ಈ ಪಂದ್ಯ ಗೆಲ್ಲಲೇಬೇಕು. ಒಂದು ವೇಳೆ ಆರ್ಸಿಬಿ ಸೋತರೆ ರಾಜಸ್ಥಾನ್ ರಾಯಲ್ಸ್ಗೆ ಪ್ಲೇಆಫ್ ಪ್ರವೇಶಿಸುವ ಅವಕಾಶ ಇರಲಿದೆ. ಆರ್ಆರ್ ಸೋತರೆ ಬಹುತೇಕ ಟೂರ್ನಿಯಿಂದ ಹೊರಬಿದ್ದಂತೆ. ಎಲ್ಲಾದರು ಆರ್ಸಿಬಿ ಸೋತರೂ ಟೂರ್ನಿಯಿಂದ ಹೊರಬಿದ್ದಂತೆ. ಹೀಗಾಗಿ ಜೈಪುರದಲ್ಲಿ ಇಂದು ಐಪಿಎಲ್ ಟೂರ್ನಿಯ ಪ್ರಮುಖ ಪಂದ್ಯ ನಡೆಯಲಿದೆ.
IPL 2023: ಪ್ಲೇಆಫ್ ಹಂತಕ್ಕೇರಲು ಯಾವ ತಂಡ ಎಷ್ಟೆಷ್ಟು ಪಂದ್ಯಗಳನ್ನು ಗೆಲ್ಲಬೇಕು? ಇಲ್ಲಿದೆ ಮಾಹಿತಿ
ಎಲ್ಲರ ಚಿತ್ತ ನೆಟ್ಟಿರುವ ಈ ಪಂದ್ಯ ಮಧ್ಯಾಹ್ನ 3.30ಕ್ಕೆ ಶುರುವಾಗಲಿದೆ. ಜೈಪುರದ ಹವಾಮಾನದ ಬಗ್ಗೆ ನೋಡುವುದಾದರೆ ಪಂದ್ಯಕ್ಕೆ ಯಾವುದೇ ತೊಂದರೆ ಅಟ್ಟಿಪಡಿಸುವ ಸಾಧ್ಯತೆ ಇಲ್ಲ. ಇಂದು ತಾಪಮಾನವು ಸುಮಾರು 37 ಡಿಗ್ರಿ ಸೆಲ್ಸಿಯೆಷ್ಟ್ನಷ್ಟು ಇರಲಿದೆ. ಶೇ. 24 ರಷ್ಟು ಹ್ಯುಮಿಡಿಟಿ ಮತ್ತು 10 km/h ಗಾಳಿಯ ವೇಗವನ್ನು ನಿರೀಕ್ಷಿಸಲಾಗಿದೆ. ಹೀಗಾಗಿ ಪಂದ್ಯದ ವೇಳೆ ಮಳೆಯಾಗುವ ಸಾಧ್ಯತೆ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇನ್ನು ಸವಾಯಿ ಮಾನ್ಸಿಂಗ್ ಸ್ಟೇಡಿಯಂ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ನೀಡುತ್ತದೆ. ಪಂದ್ಯ ಆರಂಭವಾದ ಕೆಲವು ಓವರ್‌ಗಳಲ್ಲಿ ವೇಗದ ಬೌಲರ್‌ಗಳು ಪ್ರಾಬಲ್ಯ ಸಾಧಿಸಿದರೆ ನಂತರ ಸ್ಪಿನ್ನರ್ಗಳ ಆಟ ನಡೆಯಲಿದೆ. ಈ ಮೈದಾನದಲ್ಲಿ ಅತಿ ದೊಡ್ಡ ಬೌಂಡರಿ ಇರುವುದರಿಂದ ದೊಡ್ಡ ಮೊತ್ತ ಕಲೆಹಾಕುವುದು ಕಷ್ಟ. ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಪರದಾಡುವುದು ಖಚತ. ಹೀಗಾಗಿ ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಂಭವವಿದೆ.
ಸವಾಯಿ ಮಾನ್ಸಿಂಗ್ ಮೈದಾನದಲ್ಲಿ ಇದುವರೆಗೂ 50 ಐಪಿಎಲ್ ಪಂದ್ಯಗಳು ನಡೆದಿದ್ದು 17 ಬಾರಿ ಮೊದಲು ಬ್ಯಾಟ್ ಮಾಡಿದ್ದ ತಂಡಗಳು ಜಯ ಗಳಿಸಿದ್ದರೆ, 33 ಬಾರಿ ಟಾರ್ಗೆಟ್ ಬೆನ್ನಟ್ಟಿದ ತಂಡಗಳು ಗೆಲುವು ಪಡೆದುಕೊಂಡಿದೆ. ಉಭಯ ತಂಡಗಳ ಮುಖಾಮುಖಿ ನೋಡುವುದಾದರೆ ಒಟ್ಟು 29 ಪಂದ್ಯಗಳು ನಡೆದಿವೆ. ಇದರಲ್ಲಿ ರಾಜಸ್ಥಾನ್ ರಾಯಲ್ಸ್ ಗೆಲುವು 12 ಪಂದ್ಯ ಗೆದ್ದಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು 14 ಮ್ಯಾಚ್ನಲ್ಲಿ ಗೆಲುವು ಸಾಧಿಸಿ ಪಾರುಪತ್ಯ ಮೆರೆದಿದೆ.
ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ XI: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ಅನುಜ್ ರಾವತ್, ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ವನಿಂದು ಹಸರಂಗ, ಕರ್ಣ್ ಶರ್ಮಾ, ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ