Shubman Gill: ಸಿಡಿಲಬ್ಬರದ ಸೆಂಚುರಿ ಸಿಡಿಸಿದ ಶುಭ್​ಮನ್ ಗಿಲ್

IPL 2023: ಐಪಿಎಲ್​ನ 62ನೇ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ಶುಭ್​ಮನ್ ಗಿಲ್ (Shubhman Gill) ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಎಸ್​ಆರ್​ಹೆಚ್​ ತಂಡದ ನಾಯಕ ಮಾರ್ಕ್ರಾಮ್ ಬೌಲಿಂಗ್ ಆಯ್ದುಕೊಂಡಿದ್ದರು.ಅದರಂತೆ ಇನಿಂಗ್ಸ್ ಆರಂಭಿಸಿದ ಗುಜರಾತ್ ಟೈಟಾನ್ಸ್ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ವೃದ್ದಿಮಾನ್ ಸಾಹ (0) ಮೊದಲ ಓವರ್​ನಲ್ಲೇ ವಿಕೆಟ್ ಒಪ್ಪಿಸಿದ್ದರು.ಇದಾದ ಬಳಿಕ ಜೊತೆಯಾದ ಶುಭ್​ಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಉತ್ತಮ ಜೊತೆಯಾಟವಾಡಿದರು. ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಗಿಲ್ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಲ್ಲದೆ ಸುದರ್ಶನ್ ಜೊತೆಗೂಡಿ 2ನೇ ವಿಕೆಟ್​ಗೆ 147 ರನ್​ಗಳ​ ಜೊತೆಯಾಟವಾಡಿದರು.ಈ ಹಂತದಲ್ಲಿ 36 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 6 ಫೋರ್​ನೊಂದಿಗೆ 47 ರನ್ ಬಾರಿಸಿದ ಸಾಯಿ ಸುದರ್ಶನ್ ಮಾರ್ಕೊ ಯಾನ್ಸನ್ ಎಸೆತದಲ್ಲಿ ಕ್ಯಾಚ್ ನೀಡಿದರು. ಇದಾಗ್ಯೂ ಶುಭ್​ಮನ್ ಗಿಲ್ ಅಬ್ಬರ ಮುಂದುವರೆಯಿತು.ಸನ್​ರೈಸರ್ಸ್ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದ ಗಿಲ್ ಮೈದಾನದ ಮೂಲೆ ಮೂಲೆಗೂ ಸಿಕ್ಸ್​-ಫೋರ್​ಗಳ ಸುರಿಮಳೆಗೈದರು. ಪರಿಣಾಮ 56 ಎಸೆತಗಳಲ್ಲಿ ಶುಭ್​ಮನ್ ಗಿಲ್ ಶತಕ ಪೂರೈಸಿದರು.ಅಂತಿಮವಾಗಿ 58 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 13 ಫೋರ್​ನೊಂದಿಗೆ 101 ರನ್​ ಬಾರಿಸಿದ ಶುಭ್​ಮನ್ ಗಿಲ್ ಭುವನೇಶ್ವರ್ ಕುಮಾರ್​ಗೆ ವಿಕೆಟ್ ಒಪ್ಪಿಸಿದರು.ಶುಭ್​ಮನ್ ಗಿಲ್ ಅವರ ಈ ಶತಕದ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡವು ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 188 ರನ್​ ಕಲೆಹಾಕಿದೆ.
ಈ ಭರ್ಜರಿ ಶತಕದೊಂದಿಗೆ ಐಪಿಎಲ್​ನಲ್ಲಿ ಗುಜರಾತ್ ಟೈಟಾನ್ಸ್ ಪರ ಮೊದಲ ಶತಕ ಬಾರಿಸಿದ ಆಟಗಾರ ಎಂಬ ದಾಖಲೆ ಶುಭ್​ಮನ್ ಗಿಲ್ ಪಾಲಾಗಿದೆ. ಅಂದಹಾಗೆ ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು ಕೆನ್ನೇರಳೆ ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿದಿರುವುದು ವಿಶೇಷ. ಮಾರಕ ರೋಗ ಕ್ಯಾನ್ಸರ್‌ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಗುಜರಾತ್ ಟೈಟಾನ್ಸ್ ತಂಡವು ತನ್ನ ಕಡು ನೀಲಿ ಬಣ್ಣದ ಜೆರ್ಸಿ ಬದಲಿಗೆ ಕೆನ್ನೇರಳೆ ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿದಿದೆ.

source https://tv9kannada.com/photo-gallery/cricket-photos/ipl-2023-shubhman-gill-century-vs-srh-kannada-news-zp-579517.html

Leave a Reply

Your email address will not be published. Required fields are marked *