ICC WTC Final: ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ಗೆ ಡ್ಯೂಕ್ಸ್ ಬದಲು ಕೂಕಬುರಾ ಚೆಂಡು: ಇವೆರಡರ ನಡುವೆ ಏನು ವ್ಯತ್ಯಾಸ?

ICC WTC Final: ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ಗೆ ಡ್ಯೂಕ್ಸ್ ಬದಲು ಕೂಕಬುರಾ ಚೆಂಡು: ಇವೆರಡರ ನಡುವೆ ಏನು ವ್ಯತ್ಯಾಸ?

ಬಹುನಿರೀಕ್ಷಿತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ಗೆ (ICC WTC Final) ದಿನಗಣನೆ ಶುರುವಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) ಮುಕ್ತಾಯದ ಬೆನ್ನಲ್ಲೇ ಈ ಭಾರತ ಹಾಗೂ ಆಸ್ಟ್ರೇಲಿಯಾ ತಂಡದ ಆಟಗಾರರು ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ಗಾಗಿ ಇಂಗ್ಲೆಂಡ್​ಗೆ ಪ್ರಯಾಣ ಬೆಳೆಸಲಿದ್ದಾರೆ. ಐಸಿಸಿ ಡಬ್ಲ್ಯೂಟಿಸಿ ಫೈನಲ್ ಜೂನ್ 7 ರಿಂದ 11ರ ವರೆಗೆ ನಡೆಯಲಿದೆ. ಲಂಡನ್​ನ ಕೆನ್ನಿಂಗ್ಟನ್ ಓವಲ್ ಮೈದಾನ ಈ ಐತಿಹಾಸಿಕ ಕಾದಾಟಕ್ಕೆ ಸಾಕ್ಷಿಯಾಗಲಿದೆ. ಇದೀಗ ಈ ಮಹತ್ವದ ಪಂದ್ಯಕ್ಕೆ ಡ್ಯೂಕ್ಸ್ ಚೆಂಡಿನ ಬದಲು ಆಸ್ಟ್ರೇಲಿಯಾದ ಕೂಕಬುರಾ ಬಾಲ್ (Kookaburra) ಉಪಯೋಗಿಸಲು ನಿರ್ಧಾರ ಮಾಡಲಾಗಿದೆ.

ಆಸ್ಟ್ರೇಲಿಯಾ ತಂಡದ ಮಾಜಿ ದಿಗ್ಗಜ ಆಟಗಾರ ರಿಕಿ ಪಾಂಟಿಂಗ್ ಡ್ಯೂಕ್‌ಗಿಂತ ಕೂಕಬುರಾ ಚೆಂಡು ಎಷ್ಟು ಉತ್ತಮ ಎಂಬ ಬಗ್ಗೆ ಐಸಿಸಿ ಜೊತೆಗಿನ ಸಭೆಯಲ್ಲಿ ವಿವರಿಸಿದ್ದಾರೆ. ”ಆಸ್ಟ್ರೇಲಿಯದ ವೇಗದ ಬ್ಯಾಟಿಂಗ್ ಮತ್ತು ಭಾರತದ ಅಗ್ರ ಕ್ರಮಾಂಕ ಈ ಪಂದ್ಯದ ಪ್ರಮುಖ ಹೈಲೇಟ್ ಆಗಿದೆ. ಭಾರತೀಯ ಸ್ಪಿನ್ನರ್‌ಗಳು ಮತ್ತು ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳ ಕಾದಾಟ ರೋಚಕತೆಯಿಂದ ಕೂಡಿರುತ್ತದೆ. ಓವಲ್‌ನಲ್ಲಿ ಮೈದಾನದಲ್ಲಿ ಹೀಗೆ ನಡೆಯುವುದು ಖಚಿತ. ಓವಲ್ ಪಿಚ್ ಸಾಮಾನ್ಯವಾಗಿ ಬ್ಯಾಟ್ಸ್‌ಮನ್‌ಗಳಿಗೆ ಉತ್ತಮವಾಗಿರುತ್ತದೆ ಮತ್ತು ಸ್ವಲ್ಪ ಪ್ರಮಾಣದಲ್ಲಿ ಸ್ಪಿನ್ನರ್​ಗಳಿಗೆ ಸಹ ಬೆಂಬಲಿಸುತ್ತದೆ. ಡ್ಯೂಕ್‌ ಅಷ್ಟೊಂದು ಪರಿಣಾಮಕಾರಿ ಇಲ್ಲ. ಹೀಗಾಗಿ ಕೂಕಬುರಾ ಚೆಂಡು ಬಳಕೆ ಆಗಲಿ,” ಎಂದು ಹೇಳಿದ್ದಾರೆ.

IPL 2023: ಸವ್ಯಸಾಚಿ ಧೋನಿಗೆ ಯಾರೂ ನಿರೀಕ್ಷಿಸದ ಉಡುಗೊರೆ ನೀಡಿದ ಚೆನ್ನೈ ಫ್ಯಾನ್ಸ್..! ವಿಡಿಯೋ

ಕಳೆದ ವರ್ಷ ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿತ್ತು. ಆ ಸಮಯದಲ್ಲಿ, ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಕೂಡ ಡ್ಯೂಕ್ ಬಾಲ್ ಬಗ್ಗೆ ದೂರು ನೀಡಿದ್ದರು. ಪಂದ್ಯ ಸಾಗುತ್ತಿದ್ದಂತೆ ಈ ಚೆಂಡು ಅದರ ಆಕಾರವನ್ನು ಕಳೆದುಕೊಳ್ಳುತ್ತದೆ, ಮೃದುವಾಗುತ್ತದೆ ಮತ್ತು ಸ್ವಿಂಗ್ ಅನ್ನು ಕಳೆದುಕೊಳ್ಳುತ್ತದೆ ಎಂದು ವಿಲಿಯಮ್ಸನ್ ದೂರಿದ್ದರು.

ಡ್ಯೂಕ್ಸ್-ಕೂಕಬುರಾ ಚೆಂಡಿನ ನಡುವೆ ಏನು ವ್ಯತ್ಯಾಸ?:

ಆಸ್ಟ್ರೇಲಿಯಾದ ಕ್ರೀಡಾ ಪರಿಕರಗಳನ್ನು ತಯಾರಿಸುವ ಕಂಪನಿಯ ಹೆಸರು ಕೂಕಬುರಾ. ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಸೇರಿದಂತೆ ಹೆಚ್ಚಿನ ತಂಡಗಳು ತಮ್ಮ ತಮ್ಮ ದೇಶದಲ್ಲಿ ಟೆಸ್ಟ್‌ ಕ್ರಿಕೆಟ್ ಆಡಲು ಬಳಸುವುದು ಕೂಕಬುರಾ ಕಂಪನಿಯ ಚೆಂಡನ್ನು. ಈ ಚೆಂಡಿನ ಒಳಗಿನ ಎರಡು ಪದರಗಳನ್ನು ಕೈಯಲ್ಲೇ ಹೊಲಿಯುತ್ತಾರೆ. ಭಾರತ ಹಾಗೂ ನ್ಯೂಜಿಲೆಂಡ್‌ ನಡುವೆ ನಡೆದ ಡಬ್ಲ್ಯುಟಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಬಳಕೆಯಾದದ್ದು ಡ್ಯೂಕ್ಸ್‌‌ ಚೆಂಡು. ಇದರ ಬಣ್ಣ ಚೆರ‍್ರಿ ಹಣ್ಣಿನ ಕೆಂಪು. ಕೂಕಬುರಾ ಚೆಂಡಿಗೆ ಹೋಲಿಸಿದರೆ ಎಸ್‌ಜಿ ಚೆಂಡಿನ ಹೊಲಿಗೆಗೆ ಬಳಸುವ ದಾರ ದಪ್ಪವಾಗಿರುತ್ತದೆ. ಹೊಲಿಗೆಗಳ ನಡುವಿನ ಅಂತರ ಎಸ್‌ಜಿ ಚೆಂಡಿನಲ್ಲಿ ಕಡಿಮೆ ಇರುತ್ತದೆ.

ಕೂಕಬುರಾ ಚೆಂಡಿನ ಸೀಮ್‌ ಭಾಗದ ಗ್ರಿಪ್ ಚೆನ್ನಾಗಿರುವುದರಿಂದ ಬೌಲರ್‌ಗಳಿಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ಅದನ್ನು ಭದ್ರವಾಗಿ ಹಿಡಿಯಬಹುದು. ಕೂಕಬುರಾ ಚೆಂಡು ಹೊಳಪು ಕಳೆದುಕೊಂಡ ನಂತರವೂ ಎತ್ತರಕ್ಕೆ ಪುಟಿಯಬಲ್ಲದು. ಹೀಗಾಗಿ ವೇಗ ಹಾಗೂ ಮಧ್ಯಮ ವೇಗದ ಬೌಲರ್‌ಗಳು ಬೌನ್ಸ್‌ ಮೂಲಕವೇ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಬಹುದು.

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ಗೆ ಭಾರತ ತಂಡ:

ಈಗಾಗಲೇ ಈ ಮಹತ್ವದ ಟೂರ್ನಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಟೀಮ್ ಇಂಡಿಯಾವನ್ನು ಕೂಡ ಪ್ರಕಟ ಮಾಡಿದೆ. ಈ ಹಿಂದೆ ಟೆಸ್ಟ್ ತಂಡದಿಂದ ಹೊರಬಿದ್ದ ಅಜಿಂಕ್ಯಾ ರಹಾನೆ ಕಮ್​ಬ್ಯಾಕ್ ಮಾಡಿದ್ದಾರೆ. ಸದ್ಯ ಸಾಗುತ್ತಿರುವ ಐಪಿಎಲ್​ನಲ್ಲಿ ಸಿಎಸ್​ಕೆ ಪರ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿರುವ ರಹಾನೆ ಸ್ಥಾನ ಪಡೆದುಕೊಂಡಿದ್ದಾರೆ. ರೋಹಿತ್ ಶರ್ಮಾ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದು ಶುಭ್​ಮನ್ ಗಿಲ್ ಆಯ್ಕೆ ಆಗಿದ್ದಾರೆ. ಕೆಎಸ್ ಭರತ್ ವಿಕೆಟ್ ಕೀಪರ್ ಆಗಿರಲಿದ್ದಾರೆ. ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಮಧ್ಯಮ ಕ್ರಮಾಂಕದ ಬಲವಾಗಿದ್ದಾರೆ. ಆಲ್ರೌಂಡರ್​ಗಳಾಗಿ ನಾಲ್ವರು ಆಯ್ಕೆ ಆಗಿದ್ದು ರವಿಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಥಾಕೂರ್ ಹಾಗೂ ರವಿಚಂದ್ರನ್ ಅಶ್ವಿನ್ ಇದ್ದಾರೆ. ವೇಗಿಗಳ ವಿಭಾಗದಲ್ಲಿ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ ಮತ್ತು ಜಯದೇವ್ ಉನಾದ್ಕಟ್ ಸ್ಥಾನ ಪಡೆದುಕೊಂಡಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/world-test-championship-between-india-and-australia-will-be-played-on-the-kookaburra-ball-kannada-news-vb-582917.html

Leave a Reply

Your email address will not be published. Required fields are marked *