Virat Kohli: ದಾಖಲೆಯ ಸೆಂಚುರಿ ಸಿಡಿಸಿದ ಕಿಂಗ್ ಕೊಹ್ಲಿ

IPL 2023: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಶತಕದೊಂದಿಗೆ ಐಪಿಎಲ್​ ಇತಿಹಾಸದಲ್ಲೇ ಅತ್ಯಧಿಕ ಸೆಂಚುರಿ ಸಿಡಿಸಿದ ದಾಖಲೆ ವಿರಾಟ್ ಕೊಹ್ಲಿ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿತ್ತು. ಗೇಲ್ ಒಟ್ಟು 6 ಶತಕ ಬಾರಿಸಿದ್ದರು.ಇದೀಗ ಒಟ್ಟು 7 ಶತಕದೊಂದಿಗೆ ಐಪಿಎಲ್​ ಇತಿಹಾಸದಲ್ಲಿ ಅತ್ಯಧಿಕ ಬಾರಿ ಮೂರಂಕಿ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.ಅಲ್ಲದೆ ಐಪಿಎಲ್​ನಲ್ಲಿ ಬ್ಯಾಕ್ ಟು ಬ್ಯಾಕ್ 2 ಪಂದ್ಯಗಳಲ್ಲಿ ಶತಕ ಬಾರಿಸಿದ RCB ತಂಡದ ಮೊದಲ ಬ್ಯಾಟ್ಸ್​ಮನ್ ಎಂಬ ದಾಖಲೆಯನ್ನು ಕೂಡ ನಿರ್ಮಿಸಿದ್ದಾರೆ.ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ವಿರಾಟ್ ಕೊಹ್ಲಿ ಇಡೀ ತಂಡದ ಜವಾಬ್ದಾರಿಯನ್ನು ಹೆಗಲೇರಿಸಿಕೊಂಡು ಬ್ಯಾಟ್ ಬೀಸಿದ್ದರು. ಆರಂಭದಲ್ಲಿ ಫಾಫ್ ಡುಪ್ಲೆಸಿಸ್ ಜೊತೆಗೂಡಿ ಮೊದಲ ವಿಕೆಟ್​ಗೆ 67 ರನ್​ಗಳ ಜೊತೆಯಾಟವಾಡಿದರು.ಆದರೆ ಫಾಫ್ (28) ಔಟ್ ಆಗುವುದರೊಂದಿಗೆ ಆರ್​ಸಿಬಿ ದಿಢೀರ್ ಕುಸಿತಕ್ಕೊಳಗಾಯಿತು. ಈ ಹಂತದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಕೊಹ್ಲಿ ತಂಡಕ್ಕೆ ಆಸರೆಯಾದರು. ಆ ಬಳಿಕ ಡೆತ್ ಓವರ್​ಗಳಲ್ಲಿ ಮತ್ತೆ ಅಬ್ಬರಿಸಲಾರಂಭಿಸಿದ ಕೊಹ್ಲಿ ಗುಜರಾತ್ ಟೈಟಾನ್ಸ್ ಬೌಲರ್​ಗಳ ಬೆಂಡೆತ್ತಿದರು. ಪರಿಣಾಮ ಕೇವಲ 60 ಎಸೆತಗಳಲ್ಲಿ 13 ಫೋರ್ ಹಾಗೂ 1 ಸಿಕ್ಸ್​ನೊಂದಿಗೆ ಕೊಹ್ಲಿ ಬ್ಯಾಟ್​ನಿಂದ ಮತ್ತೊಂದು ಶತಕ ಮೂಡಿಬಂತು. ಈ ಅಜೇಯ ಶತಕದೊಂದಿಗೆ ಆರ್​ಸಿಬಿ ತಂಡವು ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 197 ರನ್ ಕಲೆಹಾಕಿದೆ.

source https://tv9kannada.com/photo-gallery/cricket-photos/ipl-2023-virat-kohli-century-vs-gt-kannada-news-zp-584109.html

Views: 0

Leave a Reply

Your email address will not be published. Required fields are marked *