MS Dhoni on Retirement: ಮಿಲಿಯನ್ ಡಾಲರ್ ಪ್ರಶ್ನೆಗೆ ಕೊನೆಗೂ ಉತ್ತರಿಸಿದ ಎಂಎಸ್ ಧೋನಿ..!

ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 10 ನೇ ಬಾರಿಗೆ ಐಪಿಎಲ್‌ನಲ್ಲಿ ಫೈನಲ್‌ಗೆ ಕರೆದೊಯ್ದಿದ್ದಾರೆ. ಐಪಿಎಲ್ 2023ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ತಂಡ ಗುಜರಾತ್ ತಂಡವನ್ನು 15 ರನ್‌ಗಳಿಂದ ಸೋಲಿಸಿ ಫೈನಲ್​ಗೆ ಲಗ್ಗೆ ಇಟ್ಟಿದೆ. ಈ ಆವೃತ್ತಿಯಲ್ಲಿ ಕೊನೆಯ ಬಾರಿಗೆ ತವರಿನಲ್ಲಿ ಆಡಿ ಚೆನ್ನೈ ಅಭಿಮಾನಿಗಳಿಗೆ ಗೆಲುವಿನ ಉಡುಗೊರೆ ನೀಡಿದೆ. ಇದೀಗ  ಅಹಮದಾಬಾದ್‌ನಲ್ಲಿ ಸಿಎಸ್​ಕೆ ಫೈನಲ್ ಆಡಲಿದೆ. ಆದರೆ ಅದಕ್ಕೂ ಮುನ್ನ ಕೋಟ್ಯಾಂತರ ಅಭಿಮಾನಿಗಳ ಪ್ರಶ್ನೆಗೆ ಧೋನಿ ಮೊದಲ ಬಾರಿಗೆ ಉತ್ತರ ನೀಡಿದ್ದಾರೆ.ಈ ಬಾರಿಯ ಐಪಿಎಲ್ ಆರಂಭವಾದಗಿನಿಂದಲೂ ಇದು ಧೋನಿಯ ಕೊನೆಯ ಐಪಿಎಲ್ ಎಂದೇ ಹೇಳಲಾಗುತ್ತಿದೆ. ಅಲ್ಲದೆ ಈ ಚರ್ಚೆ ಲೀಗ್ ಆರಂಭಕ್ಕೂ ಮುಂಚೆಯೇ ಉದ್ಭವಿಸಲು ಪ್ರಾರಂಭಿಸಿತ್ತು. ಪಂದ್ಯಾವಳಿಯ ಸಮಯದಲ್ಲಿ ಧೋನಿಗೆ ಈ ಪ್ರಶ್ನೆಯನ್ನು ಹಲವಾರು ಬಾರಿ ಕೇಳಲಾಯಿತು. ಆದರೆ ಧೋನಿ ಮಾತ್ರ ಪ್ರತಿ ಬಾರಿಯೂ ಈ ಪ್ರಶ್ನೆಗೆ ಮೌನವನ್ನೇ ಉತ್ತರವನ್ನಾಗಿಸಿದ್ದರು.ಇದೀಗ ಚೆನ್ನೈನಲ್ಲಿ ಕ್ವಾಲಿಫೈಯರ್ 1 ಗೆದ್ದ ನಂತರ ಅಂತಿಮವಾಗಿ ಈ ಪ್ರಶ್ನೆಗೆ ಧೋನಿ ಉತ್ತರಿಸಿದ್ದಾರೆ. ಪಂದ್ಯದ ನಂತರ ಪೋಸ್ಟ್ ಮ್ಯಾಚ್ ಪ್ರೆಸೆಂಟೇಶನ್​ನಲ್ಲಿ ‘ನಿಮ್ಮನ್ನು ಚೆನ್ನೈನ ಅಭಿಮಾನಿಗಳು ಮತ್ತೆ ಇಲ್ಲಿ ನೋಡಲು ಸಾಧ್ಯವೇ? ಎಂದು ಧೋನಿಗೆ ಕೇಳಲಾಯಿತು.ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಧೋನಿ, ಚೆನ್ನೈನ ಅಭಿಮಾನಿಗಳು ನನ್ನನ್ನು ಮತ್ತೆ ನೋಡಬಹುದೇ ಅಥವಾ ಇಲ್ಲವೇ ಎಂಬುದು ನನಗೂ ತಿಳಿದಿಲ್ಲ. ಆದರೆ ನನ್ನ ನಿವೃತ್ತಿ ನಿರ್ಧಾರಕ್ಕೆ ಇನ್ನು 8 ರಿಂದ 9 ತಿಂಗಳುಗಳಿವೆ. ಹೀಗಾಗಿ ನಿರ್ಧಾರ ತೆಗೆದುಕೊಳ್ಳಲು ಸಾಕಷ್ಟು ಸಮಯವಿದೆ. ಅಲ್ಲದೆ ಡಿಸೆಂಬರ್‌ನಲ್ಲಿ ಹರಾಜು ನಡೆಯಲಿದ್ದು ಆಗ ಇದರ ಬಗ್ಗೆ ಚಿಂತಿಸುವೆ ಎಂದಿದ್ದಾರೆ. ಮುಂದುವರದು ಮಾತನಾಡಿದ ಧೋನಿ, ನಾನು ಸಿಎಸ್‌ಕೆಗೆ ಯಾವಾಗಲೂ ಬರುತ್ತೇನೆ. ಸದ್ಯ ನಾನು ಜನವರಿಯಿಂದ ಮನೆಯಿಂದ ಹೊರಗಿದ್ದೇನೆ. ಮಾರ್ಚ್‌ನಿಂದ ಐಪಿಎಲ್ ಅಭ್ಯಾಸ ನಡೆಸುತ್ತಿದ್ದೇನೆ. ಹೀಗಾಗಿ ನಿವೃತ್ತಿಯ ಬಗ್ಗೆ ನಂತರ ಯೋಚಿಸುತ್ತೇನೆ ಎಂದಿದ್ದಾರೆ. ತಂಡದ ಪ್ರದರ್ಶನದ ಬಗ್ಗೆ ಮಾತನಾಡಿದ ಧೋನಿ, ಇದು 2 ತಿಂಗಳ ಕಠಿಣ ಪರಿಶ್ರಮ. ಎಲ್ಲರೂ ಕೊಡುಗೆ ನೀಡಿದರು ಎಂದಿದ್ದಾರೆ. ವಾಸ್ತವವಾಗಿ ಐಪಿಎಲ್ 2023 ಧೋನಿಯ ಕೊನೆಯ ಸೀಸನ್ ಎಂದು ಹೇಳಲಾಗುತ್ತಿದೆ. ಇದಕ್ಕೆ ಅವರ ಫಿಟ್ನೆಸ್ ಕೂಡ ಪ್ರಮುಖ ಕಾರಣವಾಗಿದೆ. ಇಡೀ ಆವೃತ್ತಿಯ ಉದ್ದಕ್ಕೂ ಧೋನಿ ಮೊಣಕಾಲು ನೋವಿನೊಂದಿಗೆ ಬಳಲುತ್ತಿರುವುದನ್ನು ನಾವು ನೋಡಿದ್ದೇವೆ. ನೋವಿನಲ್ಲೇ ಚೆನ್ನೈ ತಂಡವನ್ನು ಫೈನಲ್​ಗೆ ಕರೆದೊಯ್ದಿರುವ ಧೋನಿ ಇದೀಗ 5ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.

source https://tv9kannada.com/photo-gallery/cricket-photos/ipl-2023-i-have-8-9-months-to-decide-ms-dhoni-on-ipl-retirement-plans-psr-585977.html

Leave a Reply

Your email address will not be published. Required fields are marked *