NAM vs KAR: 8 ಸಿಕ್ಸರ್, 13 ಫೋರ್: ನಮೀಬಿಯಾ ವಿರುದ್ಧ ಕನ್ನಡಿಗನ ಸಿಡಿಲಬ್ಬರದ ಶತಕ

ವಿಂಡ್‌ಹೋಕ್​ನ ವಾಂಡರರ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಆತಿಥೇಯ ನಮೀಬಿಯಾ ವಿರುದ್ಧದ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಕರ್ನಾಟಕದ ಎಲ್.ಆರ್​ ಚೇತನ್ ಹಾಗೂ ನಿಕಿನ್ ಜೋಸ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ.ಈ ಪಂದ್ಯದಲ್ಲಿ ಟಾಸ್ ಗೆದ್ದ ನಮೀಬಿಯಾ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಕರ್ನಾಟಕ ಪರ ಇನಿಂಗ್ಸ್ ಆರಂಭಿಸಿದ ರವಿಕುಮಾರ್ ಸಮರ್ಥ್​ (5) ಬೇಗನೆ ವಿಕೆಟ್ ಒಪ್ಪಿಸಿದರು. ಆದರೆ ಮತ್ತೊಂದು ತುದಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ಚೇತನ್ ಇನಿಂಗ್ಸ್ ಕಟ್ಟು ಜವಾಬ್ದಾರಿ ಹೆಗಲೇರಿಸಿಕೊಂಡರು.
ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಚೇತನ್ ನಿಕ್ ಜೋಸ್ ಜೊತೆಗೂಡಿ ಇನಿಂಗ್ಸ್ ಕಟ್ಟಿದರು. ಪರಿಣಾಮ ಕರ್ನಾಟಕ ತಂಡವು ಆರಂಭಿಕ ಆಘಾತದಿಂದ ಪಾರಾಯಿತು. ತಂಡದ ಮೊತ್ತದ 100ರ ಗಡಿದಾಟುತ್ತಿದ್ದಂತೆ ಬಿರುಸಿನ ಆಟಕ್ಕೆ ಒತ್ತು ನೀಡಿದ ಚೇತನ್-ನಿಕಿನ್ ಜೋಡಿ ರನ್​ಗಳಿಕೆ ವೇಗವನ್ನು ಹೆಚ್ಚಿಸಿದರು.ಅದರಲ್ಲೂ ಅರ್ಧಶತಕದ ಬಳಿಕ ಭರ್ಜರಿಯಾಗಿ ಬ್ಯಾಟ್ ಬೀಸಿದ ಎಲ್​ಆರ್​ ಚೇತನ್ ಸಿಕ್ಸ್​-ಫೋರ್​ಗಳ ಸುರಿಮಳೆಗೈದರು. ಅದರಂತೆ ಒಟ್ಟು 8 ಭರ್ಜರಿ ಸಿಕ್ಸ್ ಹಾಗೂ 13 ಫೋರ್​ಗಳನ್ನು ಚಚ್ಚಿದ ಚೇತನ್ ಸ್ಪೋಟಕ ಶತಕ ಬಾರಿಸಿದರು.ಅಂತಿಮವಾಗಿ 147 ಎಸೆತಗಳಲ್ಲಿ 169 ರನ್​ ಬಾರಿಸಿದ ಚೇತನ್ ಜಾನ್ ಫೈಲಿಂಕ್​ಗೆ ವಿಕೆಟ್​ ಒಪ್ಪಿಸಿದರು. ಅಷ್ಟರಲ್ಲಾಗಲೇ ಕರ್ನಾಟಕ ತಂಡವು 41 ಓವರ್​ಗಳಲ್ಲಿ 270 ರನ್​ಗಳಿಸಿತ್ತು.ಇನ್ನು ಚೇತನ್​ಗೆ ಉತ್ತಮ ಸಾಥ್ ನೀಡಿದ ನಿಕಿನ್ ಜೋಸ್ ಕೂಡ ಅದ್ಭುತ ಇನಿಂಗ್ಸ್ ಆಡಿದರು. ನಮೀಬಿಯಾದ ಅನುಭವಿ ಬೌಲರ್​ಗಳನ್ನು ದಿಟ್ಟತನದಿಂದಲೇ ಎದುರಿಸಿದ ನಿಕಿನ್ 109 ಎಸೆತಗಳಲ್ಲಿ 103 ರನ್​ ಬಾರಿಸಿ ಮಿಂಚಿದರು. ಪರಿಣಾಮ ನಿಗದಿತ 50 ಓವರ್​ಗಳಲ್ಲಿ ಕರ್ನಾಟಕ ತಂಡವು 4 ವಿಕೆಟ್ ನಷ್ಟಕ್ಕೆ 360 ರನ್​ ಕಲೆಹಾಕಿದೆ.

source https://tv9kannada.com/photo-gallery/cricket-photos/nam-vs-kar-lr-chethan-century-against-namibia-kannada-news-zp-594043.html

Leave a Reply

Your email address will not be published. Required fields are marked *