WTC 2023 Final, IND vs AUS: ಇಂದಿನಿಂದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್: ಭಾರತ-ಆಸ್ಟ್ರೇಲಿಯಾ ನಡುವೆ ರೋಚಕ ಕಾದಾಟ

WTC 2023 Final, IND vs AUS: ಇಂದಿನಿಂದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್: ಭಾರತ-ಆಸ್ಟ್ರೇಲಿಯಾ ನಡುವೆ ರೋಚಕ ಕಾದಾಟ

ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಣ ಬಹುನಿರೀಕ್ಷಿತ ಎರಡನೇ ಆವೃತ್ತಿಯ ಐಸಿಸಿ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ (WTC Final 2023) ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಜೂನ್ 7 ಇಂದು ಡಬ್ಲ್ಯೂಟಿಸಿ 2023 ಫೈನಲ್​ಗೆ ಚಾಲನೆ ಸಿಗಲಿದೆ. ಈಗಾಗಲೇ ಉಭಯ ತಂಡಗಳು ಲಂಡನ್​ನ ಪ್ರತಿಷ್ಠಿತ ಕೆನ್ನಿಂಗ್ಟನ್ ಓವಲ್ ಮೈದಾನಕ್ಕೆ (The Oval) ತಲುಪಿದ್ದು ಅಭ್ಯಾಸದಲ್ಲಿ ನಿರತರಾಗಿದ್ದಾರೆ. 2021ರ ಜೂನ್‌ನಲ್ಲಿ ನಡೆದ ಮೊದಲ ಆವೃತ್ತಿಯ ಫೈನಲ್‌ನಲ್ಲಿ ನ್ಯೂಜಿಲೆಂಡ್‌ ಎದುರು ಭಾರತ 8 ವಿಕೆಟ್‌ಗಳಿಂದ ಸೋಲುಂಡಿತ್ತು. ಇದೀಗ ಸತತ ಎರಡನೇ ಬಾರಿ ಫೈನಲ್ ತಲುಪಿರುವ ಟೀಮ್ ಇಂಡಿಯಾ ಚೊಚ್ಚಲ ಟ್ರೋಫಿ ಗೆಲ್ಲುವತ್ತ ಚಿತ್ತ ನೆಟ್ಟಿದೆ.

ಪ್ರಮುಖ ಆಟಗಾರರ ಅಲಭ್ಯ-ರೋಹಿತ್​ಗೆ ಗಾಯ:

ಟೀಮ್ ಇಂಡಿಯಾ ತನ್ನ ಕೆಲ ಪ್ರಮುಖ ಆಟಗಾರರ ಅಲಭ್ಯತೆಯಲ್ಲಿ ಕಣಕ್ಕಿಳಿಯುತ್ತಿದೆ. ಗಾಯದ ಸಮಸ್ಯೆ ಎದುರಿಸುತ್ತಿರುವ ರಿಷಭ್ ಪಂತ್‌, ಜಸ್‌ಪ್ರೀತ್‌ ಬುಮ್ರಾ, ಶ್ರೇಯಸ್‌ ಅಯ್ಯರ್‌ ಹಾಗೂ ಕೆ.ಎಲ್‌ ರಾಹುಲ್ ಈ ಪಂದ್ಯಕ್ಕಿಲ್ಲ. ಇದರ ನಡುವೆ ಅಭ್ಯಾಸ ಮಾಡುವಾಗ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಗಾಯಗೊಂಡಿದ್ದಾರೆ. ನೆಟ್ಸ್​​ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದಾಗ ಅವರ ಎಡಗೈ ಹೆಬ್ಬೆರಳಿಗೆ ಪೆಟ್ಟಾಗಿದೆ. ಇದರ ಬೆನ್ನಲ್ಲೇ ಹಿಟ್​ಮ್ಯಾನ್ ಪ್ರಾಕ್ಟೀಸ್​ ಅನ್ನು ಅಂತ್ಯಗೊಳಿಸಿದರು. ಇದಾಗ್ಯೂ ಅವರ ಗಾಯ ಗಂಭೀರವಲ್ಲ ಎಂದು ತಿಳಿದು ಬಂದಿದೆ. ಹೀಗಾಗಿ ಕಣಕ್ಕಿಳಿಯುವ ನಿರೀಕ್ಷೆ ಇದೆ.

ಭಾರತದಲ್ಲಿ ಬೆಳಗ್ಗೆ ಪ್ರಸಾರವಾಗುವುದಿಲ್ಲ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್: ಹಾಗಾದರೆ ಎಷ್ಟು ಗಂಟೆಗೆ?

ಬಲಿಷ್ಠವಾಗಿದೆ ಭಾರತ:

ಭಾರತ ತಂಡದಲ್ಲಿ ಮ್ಯಾಚ್ ವಿನ್ನರ್‌ಗಳ ದಂಡೇ ಇದೆ. ಬ್ಯಾಟಿಂಗ್‌ ವಿಭಾಗದಲ್ಲಿ ನಾಯಕ ರೋಹಿತ್‌ ಶರ್ಮಾ ಜೊತೆಗೆ ಇನ್‌ಫಾರ್ಮ್‌ ಬ್ಯಾಟರ್‌ಗಳಾದ ಶುಭಮನ್ ಗಿಲ್ ಮತ್ತು ವಿರಾಟ್‌ ಕೊಹ್ಲಿ ಮೇಲೆ ಎಲ್ಲರ ಕಣ್ಣಿದೆ. ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಬಲವಾಗಿ ಅನುಭವಿಗಳಾದ ಚೇತೇಶ್ವರ್‌ ಪೂಜಾರ ಮತ್ತು ಅಜಿಂಕ್ಯ ರಹಾನೆ ಇದ್ದಾರೆ. ಆಲ್ರೌಂಡರ್​ಗಳಾಗಿ ಸ್ಪಿನ್ನರ್‌ಗಳಾದ ಆರ್‌ ಅಶ್ವಿನ್, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಕಾಣಿಸಿಕೊಂಡರೆ, ಫಾಸ್ಟ್ ಬೌಲಿಂಗ್‌ ವಿಭಾಗದಲ್ಲಿ ಮೊಹಮ್ಮದ್‌ ಶಮಿ ಮತ್ತು ಮೊಹಮ್ಮದ್‌ ಸಿರಾಜ್‌, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್ ಸಜ್ಜಾಗಿ ನಿಂತಿದ್ದಾರೆ.

ಪಿಚ್ ಹೇಗಿದೆ?:

143 ವರ್ಷಗಳ ಇತಿಹಾಸ ಹೊಂದಿರುವ ಓವಲ್‌ ಗ್ರೌಂಡ್‌ನಲ್ಲಿ ಇದೇ ಮೊದಲ ಬಾರಿಗೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಫೈನಲ್‌ ನಡೆಯುತ್ತಿದೆ. ಅಲ್ಲದೆ ಈ ಅಂಗಳದಲ್ಲಿ ಬೌಲರ್‌ಗಳಿಗೆ ಪಿಚ್‌ ಹೇಗೆ ವರ್ತಿಸುತ್ತದೆ ಎಂಬುದು ಇನ್ನೂ ಗೊತ್ತಾಗದ ಸಂಗತಿ. ಈ ಪಿಚ್ ಹಿಂದೆ ವೇಗಿಗಳಿಗೆ ಅನುಕೂಲಕರವಾಗಿದ್ದರೆ, ಕಳೆದ ಆರು ಪಂದ್ಯಗಳು ಇದಕ್ಕೆ ವಿರುದ್ಧವಾಗಿ ಕಂಡಿವೆ. 2016 ರಿಂದ ಓವಲ್‌ನಲ್ಲಿ ನಡೆದ ಕೊನೆಯ 6 ಟೆಸ್ಟ್‌ಗಳು ದಿನಗಳು ಕಳೆದಂತೆ ಪಿಚ್ ಕ್ರಮೇಣ ಉತ್ತಮಗೊಳ್ಳುತ್ತವೆ ಎಂದು ತೋರಿಸಿದೆ. ಟಾಸ್‌ನ ಫಲಿತಾಂಶ ನಿರ್ಣಾಯಕ ಎಂದು ಹೇಳಬಹುದು. ಪಂದ್ಯದ ಅಂತಿಮ ಎರಡು ದಿನಗಳಲ್ಲಿ ಸ್ಪಿನ್ನರ್‌ಗಳು ಹೆಚ್ಚು ಪರಿಣಾಮಕಾರಿ ಆಗುತ್ತಾರೆ. ಹಸಿರು ಮೇಲ್ಮೈ ಕೊರತೆಯಿಂದಾಗಿ ಇಲ್ಲಿ ವೇಗದ ಬೌಲರ್‌ಗಳ ದಾಖಲೆಗಳು ಉತ್ತಮವಾಗಿಲ್ಲ.

ಪಂದ್ಯ ಎಷ್ಟು ಗಂಟೆಗೆ?:

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್‌ ಪಂದ್ಯ ಸ್ಟಾರ್‌ ಸ್ಪೋರ್ಟ್ಸ್‌ ಟೆಲಿವಿಷನ್‌ ವಾಹಿನಿಯಲ್ಲಿ ನೇರ ಪ್ರಸಾರವಾಗಲಿದೆ. ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಮಧ್ಯಾಹ್ನ 3 ಗಂಟೆಗೆ ಶುರುವಾಗಲಿದೆ. ಲೈವ್‌ ಸ್ಟ್ರೀಮಿಂಗ್‌ ಡಿಸ್ನಿ ಪ್ಲಸ್‌ ಹಾಟ್‌ ಸ್ಟಾರ್‌ ಮೊಬೈಲ್‌ ಅಪ್ಲಿಕೇಷನ್‌ನಲ್ಲಿ ನೋಡಬಹುದು.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕಟ್, ಇಶಾನ್ ಕಿಶನ್ (ವಿಕೆಟ್ ಕೀಪರ್).

ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕ್ಯಾಮರೂನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಉಸ್ಮಾನ್ ಖ್ವಾಜಾ, ಮಾರ್ನಸ್ ಲಾಬುಶೇನ್, ನಾಥನ್ ಲಿಯಾನ್, ಟಾಡ್ ಮರ್ಫಿ, ಸ್ಟೀವ್ ಸ್ಮಿತ್ (ಉಪ ನಾಯಕ), ಮಿಚೆಲ್ ಸ್ಟಾರ್ಕ್, ಡೇವಿಡ್ ವಾರ್ನರ್, ಮೈಕೆಲ್ ನೆಸರ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/aus-vs-ind-final-icc-world-test-championship-final-2023-start-today-in-kennington-oval-london-vb-595540.html

Leave a Reply

Your email address will not be published. Required fields are marked *