World Cup 2023: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಡಲ್ಲ ಎಂದು PCB ಹೊಸ ಕ್ಯಾತೆ..!

World Cup 2023: ಅಕ್ಟೋಬರ್-ನವೆಂಬರ್​ನಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ಗಾಗಿ ಬಿಸಿಸಿಐ ತಯಾರಿಗಳನ್ನು ಆರಂಭಿಸಿದೆ. ಈಗಾಗಲೇ ದೇಶದ ಪ್ರಮುಖ ಮೈದಾನಗಳ ನವೀಕರಣ ನಡೆಯುತ್ತಿದೆ. ಇದರ ನಡುವೆ ಅಹ್ಮದಾಬಾದ್ ಮೈದಾನದಲ್ಲಿ ನಾವು ಭಾರತದ ವಿರುದ್ಧ ಆಡುವುದಿಲ್ಲ ಎಂದು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಹೊಸ ಕ್ಯಾತೆ ತೆಗೆದಿದೆ.ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ನಲ್ಲಿ ಭಾಗವಹಿಸಲು ಪಾಕಿಸ್ತಾನ ಸರ್ಕಾರದಿಂದ ಅನುಮತಿ ಪಡೆದರೆ, ತಮ್ಮ ಪಂದ್ಯಗಳನ್ನು ನಿರ್ದಿಷ್ಟ ಮೈದಾನಗಳಲ್ಲಿ ನಿಗದಿಪಡಿಸುವಂತೆ ಪಾಕ್ ಕ್ರಿಕೆಟ್ ಮಂಡಳಿ ಐಸಿಸಿಗೆ ಮನವಿ ಸಲ್ಲಿಸಿದೆ.ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಯಾವುದೇ ಲೀಗ್ ಪಂದ್ಯಗಳನ್ನು ಆಯೋಜಿಸದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಯೋಫ್ ಅಲ್ಲಾರ್ಡಿಸ್ ಅವರಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಆಡಳಿತ ಸಮಿತಿ ಅಧ್ಯಕ್ಷ ನಜಮ್ ಸೇಥಿ ವಿನಂತಿಸಿದ್ದಾರೆ.ಇದಾಗ್ಯೂ ನಾಕೌಟ್ ಪಂದ್ಯಗಳನ್ನು ಅಹ್ಮದಾಬಾದ್​ನಲ್ಲಿ ಆಡಲು ಯಾವುದೇ ಅಭ್ಯಂತರವಿಲ್ಲ ಎಂದು ತಿಳಿಸಿರುವ ಪಿಸಿಬಿ, ಪಾಕಿಸ್ತಾನ್ ಪಂದ್ಯಗಳನ್ನು ಚೆನ್ನೈ, ಬೆಂಗಳೂರು ಮತ್ತು ಕೋಲ್ಕತ್ತಾದಲ್ಲಿ ನಿಗದಿ ಮಾಡುವಂತೆ ಐಸಿಸಿಯನ್ನು ಕೋರಿದೆ.ಇತ್ತ ಈ ಬಾರಿಯ ಏಕದಿನ ವಿಶ್ವಕಪ್​ನಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯವನ್ನು ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಅಹ್ಮದಾಬಾದ್​ನಲ್ಲಿ ಆಯೋಜಿಸಲು ಬಿಸಿಸಿಐ ಪ್ರಸ್ತಾಪ ಸಲ್ಲಿಸಿದೆ. ಆದರೆ ಇದೀಗ ಇದೇ ಮೈದಾನದಲ್ಲಿ ಪಂದ್ಯವಾಡಲು ಪಿಸಿಬಿ ಹಿಂಜರಿಯುತ್ತಿದೆ.ಭಾರತವು ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾಕಪ್​ನಿಂದ ಹಿಂದೆ ಸರಿದಿದ್ದು, ತಟಸ್ಥ ಸ್ಥಳದಲ್ಲಿ ಟೂರ್ನಿ ಆಯೋಜಿಸುವಂತೆ ತಿಳಿಸಿದೆ. ಇದೇ ಕಾರಣದಿಂದಾಗಿ ಇದೀಗ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್​ ಏಕದಿನ ವಿಶ್ವಕಪ್ ಮೈದಾನಗಳ ವಿಷಯದಲ್ಲಿ ಬಿಸಿಸಿಐಗೆ ಹೊಸ ಸಮಸ್ಯೆಯನ್ನು ಹುಟ್ಟುಹಾಕಲು ಮುಂದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.ಇದಾಗ್ಯೂ ಭಾರತ-ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಕದನವನ್ನು ವಿಶ್ವದ ಅತೀ ದೊಡ್ಡ ಸ್ಟೇಡಿಯಂ ಅಹ್ಮದಾಬಾದ್​ನಲ್ಲೇ ಆಯೋಜಿಸಲು ಬಿಸಿಸಿಐ ಪ್ಲ್ಯಾನ್ ರೂಪಿಸಿದ್ದು, ಹೀಗಾಗಿ ಭಾರತೀಯ ಕ್ರಿಕೆಟ್ ಮಂಡಳಿ ಈ ಯೋಜನೆಯಿಂದ ಹಿಂದೆ ಸರಿಯುವ ಸಾಧ್ಯತೆಯಿಲ್ಲ ಎಂದೇ ಹೇಳಬಹುದು.

source https://tv9kannada.com/photo-gallery/cricket-photos/no-india-vs-pakistan-world-cup-2023-match-in-ahmedabad-pcb-kannada-news-zp-597020.html

Leave a Reply

Your email address will not be published. Required fields are marked *