ಇಂಡಿಯಾ ಈಸ್ ಇಂದಿರಾ, ಇಂದಿರಾ ಈಸ್ ಇಂಡಿಯಾ’; ‘ಎಮರ್ಜೆನ್ಸಿ’ ಟೀಸರ್ ಬಿಡುಗಡೆ

Emergency: ಕಂಗನಾ ರನೌತ್ ನಟನೆಯ ಎಮರ್ಜೆನ್ಸಿ ಸಿನಿಮಾದ ಟೀಸರ್ ಇಂದು ಬಿಡುಗಡೆ ಆಗಿದೆ. ಈ ಸಿನಿಮಾವು ಇಂದಿರಾ ಗಾಂಧಿಯ ಕುಖ್ಯಾತ ತುರ್ತು ಪರಿಸ್ಥಿತಿ ಹೇರಿಕೆ ಕುರಿತಾಗಿದೆ. ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ಅದ್ಭುತ ನಟಿನೆ ಟೀಸರ್​ನಲ್ಲಿಯೇ ಗಮನ ಸೆಳೆಯುತ್ತಿದೆ.

ರಾಜಕೀಯ (Politics) ನಾಯಕರುಗಳ ಬಗ್ಗೆ, ರಾಜಕೀಯ ಇತಿಹಾಸದ ಬಗ್ಗೆ ಅಥವಾ ಪ್ರಸ್ತುತ ರಾಜಕೀಯದ ಮೇಲೆ ಪ್ರಭಾವ ಬೀರಬಲ್ಲ ಸಿನಿಮಾಗಳ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದೆ. ಸಿನಿಮಾವನ್ನು ಪರಿಣಾಮಕಾರಿಯಾಗಿ ರಾಜಕೀಯಕ್ಕೆ, ಜನರ ಅಭಿಪ್ರಾಯ ತಿದ್ದಲು ಬಳಸುತ್ತಿರುವ ಉದಾಹರಣೆಗಳು ಇತ್ತೀಚೆಗೆ ಹೆಚ್ಚು ಸಿಗುತ್ತಿವೆ. ಪ್ರಧಾನಿ ನರೇಂದ್ರ ಮೋದಿ, ಮನಮೋಹನ್ ಸಿಂಗ್, ಸಾವರ್ಕರ್ ಇನ್ನು ಕೆಲವು ವ್ಯಕ್ತಿಗಳು ಹಾಗೂ ಘಟನೆಗಳ ಬಗ್ಗೆ ಸಿನಿಮಾಗಳು ತಯಾರಾಗಿವೆ, ತಯಾರಾಗುತ್ತಿವೆ. ಇದೇ ಸಾಲಿಗೆ ಸೇರುವ ಮತ್ತೊಂದು ಸಿನಿಮಾ ಎಮರ್ಜೆನ್ಸಿ (Emergency).

ಕಂಗನಾ ರನೌತ್, ಇಂದಿರಾ ಗಾಂಧಿಯಾಗಿ ನಟಿಸಿರುವ ಎಮರ್ಜೆನ್ಸಿ ಸಿನಿಮಾ ಚಿತ್ರೀಕರಣ ಬಹುತೇಕ ಮುಗಿದಿದ್ದು ಸಿನಿಮಾದ ಟೀಸರ್ ಇಂದು (ಜೂನ್ 24) ಬಿಡುಗಡೆ ಆಗಿದೆ. ಸಿನಿಮಾದ ಮೊದಲ ಟೀಸರ್ ಬಿಡುಗಡೆ ಆದಾಗಲೇ ಕಂಗನಾ ರನೌತ್ ತಮ್ಮ ಅದ್ಭುತ ನಟನೆಯಿಂದ ಗಮನ ಸೆಳೆದಿದ್ದರು. ಈಗ ಮತ್ತೊಮ್ಮೆ ಟೀಸರ್ ಮೂಲಕ ಇನ್ನಷ್ಟು ಕುತೂಹಲ ಕೆರಳಿಸಿದ್ದಾರೆ.

ಇಂದು ಬಿಡುಗಡೆ ಆಗಿರುವ ಟೀಸರ್​ನಲ್ಲಿ ಎಮರ್ಜೆನ್ಸಿಯ ಕರಾಳ ಮುಖದ ಸಣ್ಣ ಝಲಕ್ ಅನ್ನು ತೋರಿಸಲಾಗಿದೆ. ಜನರು ಪೊಲೀಸರತ್ತ ಕಲ್ಲು ತೂರುವುದು, ಪೊಲೀಸರು ಜನರ ಮೇಲೆ ಗುಂಡು ಹಾರಿಸುವುದು, ರಾಷ್ಟ್ರೀಯ ನಾಯಕರನ್ನು ಜೈಲಿಗೆ ತಳ್ಳಿದ್ದು, ಮಾಧ್ಯಮ ಸ್ವಾತಂತ್ರ್ಯದ ಮೇಲೆ ನಿಯಂತ್ರಣ ಹೇರಿದ್ದರ ದೃಶ್ಯಗಳನ್ನು ಟೀಸರ್​ನಲ್ಲಿ ತೋರಿಸಲಾಗಿದೆ. ಜೊತೆಗೆ ಪತ್ರಿಕೆಗಳಲ್ಲಿ ಎಮರ್ಜೆನ್ಸಿಯನ್ನು ಟೀಕಿಸಿದ್ದ ಚಿತ್ರಗಳನ್ನು ಟೀಸರ್​ನಲ್ಲಿ ಸೇರಿಸಲಾಗಿದೆ. ಇದರ ಜೊತೆಗೆ ಎಮರ್ಜೆನ್ಸಿಯನ್ನು ನಾಯಕರೊಬ್ಬರು ಟೀಕಿಸುತ್ತಿರುವ ಸಂಭಾಷಣೆಯೂ ಟೀಸರ್​ನಲ್ಲಿದೆ. ಜಯಪ್ರಕಾಶ್ ನಾರಾಯಣ್ ಪಾತ್ರದಲ್ಲಿ ನಟಿಸಿರುವ ನಟ ಅನುಪಮ್ ಖೇರ್ ಅವರ ದೃಶ್ಯದ ಸಣ್ಣ ತುಣುಕುಗಳೂ ಸಹ ಟೀಸರ್​ನಲ್ಲಿವೆ. ಎಲ್ಲದಕ್ಕಿಂತಲೂ ಹೆಚ್ಚು ಗಮನ ಸೆಳೆಯುವುದು ಕೊನೆಯಲ್ಲಿ ಕಂಗನಾರ ಇಂದಿರಾ ರೂಪ ಮತ್ತು ಇಂದಿರಾರದ್ದೇ ದನಿ ಏನೋ ಎಂಬ ಅನುಮಾನ ಮೂಡುವಂತೆ ಕಂಗನಾ ಹೇಳಿರುವ ‘ಇಂಡಿಯಾ ಈಸ್ ಇಂದಿರಾ, ಇಂದಿರಾ ಈಸ್ ಇಂಡಿಯಾ’ ಡೈಲಾಗ್.

ಕಂಗನಾ ರನೌತ್, ಎಮರ್ಜೆನ್ಸಿ ಸಿನಿಮಾದಲ್ಲಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ್ದಾರೆ. ಅವರ ನಟನೆಯ ಸಣ್ಣ ತುಣುಕನ್ನು ಈ ಹಿಂದೆಯೇ ಚಿತ್ರತಂಡ ಬಿಡುಗಡೆ ಮಾಡಿತ್ತು, ಇಂದಿರಾ ಗಾಂಧಿ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡಿದ್ದರು ಕಂಗನಾ. ಈಗ ಬಿಡುಗಡೆ ಆಗಿರುವ ಟೀಸರ್​ನಲ್ಲಿ ಥೇಟ್ ಇಂದಿರಾ ಗಾಂಧಿ ರೀತಿಯಲ್ಲಿಯೇ ಡಬ್ಬಿಂಗ್ ಮಾಡಿದ್ದಾರೆ.

ಸಿನಿಮಾದಲ್ಲಿ ಅನುಪಮ್ ಖೇರ್ ಜಯಪ್ರಕಾಶ್ ನಾರಾಯಣ್ ಪಾತ್ರದಲ್ಲಿ ನಟಿಸಿದ್ದಾರೆ. ವಿಶಾಕ್ ನಾಯರ್ ಸಂಜಯ್ ಗಾಂಧಿ ಪಾತ್ರದಲ್ಲಿ, ಇತ್ತೀಚೆಗೆ ನಿಧನರಾದ ಸತೀಶ್ ಕೌಶಿಕ್ ಜಗಜೀವನ್ ರಾಮ್ ಪಾತ್ರದಲ್ಲಿ, ಮಹಿಮಾ ಚೌಧರಿ ಪುಪುಲ್ ಜಯಕಾರ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಭೂಮಿಕಾ ಚಾವ್ಲಾ ಸಹ ನಟಿಸಿದ್ದು ಸಿನಿಮಾವನ್ನು ಸ್ವತಃ ಕಂಗನಾ ರನೌತ್ ನಿರ್ದೇಶನ ಮಾಡಿ ನಿರ್ಮಾಣವನ್ನೂ ಮಾಡಿದ್ದಾರೆ. ಸಿನಿಮಾಕ್ಕೆ ಚಿತ್ರಕತೆ ಬರೆದಿರುವುದು ರಿತೇಶ್ ಶಾ. ಸಿನಿಮಾ ಇದೇ ನವೆಂಬರ್ 24ಕ್ಕೆ ತೆರೆಗೆ ಬರಲಿದೆ.

Source : https://tv9kannada.com/entertainment/bollywood/emergency-movie-teaser-released-movie-will-release-on-november-24-mcr-608176.html

Leave a Reply

Your email address will not be published. Required fields are marked *