Annabhagya Scheme: ಅನ್ನಭಾಗ್ಯ ಯೋಜನೆಯ ಪ್ರಕ್ರಿಯೆ ಇಂದಿನಿಂದ ಆರಂಭ.. ಜುಲೈ 10ರ ನಂತರ 5 ಕೆಜಿ ಅಕ್ಕಿ ಬದಲು ಬ್ಯಾಂಕ್​ಗೆ ಹಣ ಜಮೆ

ಕಾಂಗ್ರೆಸ್​ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿ ಬಿಪಿಎಲ್ ಪಡಿತರದಾರರಿಗೆ ಜುಲೈ 10 ರಿಂದ ಐದು ಕೆಜಿ ಅಕ್ಕಿ ಬದಲು 170 ರೂ. ಹಣ ಹಾಕುವ ಪ್ರಕ್ರಿಯೆ ಆರಂಭವಾಗಲಿದೆ.

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯ ಪ್ರಕ್ರಿಯೆಗೆ ಇಂದಿನಿಂದ ಚಾಲನೆ ಸಿಕ್ಕಿದೆ.

ಬಿಪಿಎಲ್ ಪಡಿತರದಾರರಿಗೆ ಜುಲೈ 10 ರಿಂದ ಐದು ಕೆಜಿ ಅಕ್ಕಿ ಬದಲು 170 ರೂ. ಹಣ ಹಾಕುವ ಪ್ರಕ್ರಿಯೆ ಆರಂಭವಾಗಲಿದೆ. ಫ‌ಲಾನುಭವಿಗಳಿಗೆ ತಕ್ಷಣಕ್ಕೆ ಇವುಗಳ ಅನುಕೂಲ ಅರಿವಿಗೆ ಬಾರದಿರಬಹುದು. ಆದರೆ ಈ ಸಂಬಂಧದ ಪ್ರಕ್ರಿಯೆಗೆ ಅಧಿಕೃತ ಚಾಲನೆ ದೊರಕಿರುವುದರಿಂದ ಎಂಟತ್ತು ದಿನಗಳಲ್ಲಿ ಇದರ ಲಾಭ ಸಿಗಲಿದೆ. ಅನ್ನಭಾಗ್ಯ ಯೋಜನೆ ಅಡಿ ಅಕ್ಕಿ ಬದಲಿಗೆ ಹಣ ನೀಡುವ ಯೋಜನೆ ಆರಂಭಗೊಳ್ಳುತ್ತಿದ್ದರೂ, ಒಂದೇ ದಿನದಲ್ಲಿ ಫ‌ಲಾನುಭವಿಗಳ ಖಾತೆಗೆ ಹಣ ಜಮೆ ಕಷ್ಟ. ಹಂತ ಹಂತವಾಗಿ ನಗದು ವರ್ಗಾವಣೆ ಆಗಲಿದೆ. ಇದಕ್ಕಾಗಿ ಫ‌ಲಾನುಭವಿಗಳ ಸಂಖ್ಯೆ, ಆಧಾರ್‌ ಮತ್ತು ಬ್ಯಾಂಕ್‌ ಖಾತೆ ಜೋಡಣೆ ಆಗಿರಬೇಕಾಗುತ್ತದೆ. ಪಡಿತರ ಕಾರ್ಡ್‌ದಾರರಲ್ಲಿ ಶೇ. 90ರಷ್ಟು ಕುಟುಂಬಗಳ ಮುಖ್ಯಸ್ಥರು ಮಹಿಳೆಯರಾಗಿದ್ದಾರೆ.

ಅವರಲ್ಲಿ ಕೆಲವರು ಬ್ಯಾಂಕ್‌ ಖಾತೆಗಳನ್ನು ಹೊಂದಿಲ್ಲ. ಕೆಲವೆಡೆ ಆಧಾರ್‌ ಸಂಖ್ಯೆಯೂ ಜೋಡಣೆ ಆಗಿಲ್ಲ. ಈ ಹಿನ್ನೆಲೆಯಲ್ಲಿ ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಗೆ ಇದು ಸದ್ಯಕ್ಕೆ ಸವಾಲಾಗಿದೆ. ಇನ್ನು ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ 2 ಸಾವಿರ ರೂ. ನೀಡುವುದಾಗಿ ಸರ್ಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ಕೆಲವರು ಉಳಿತಾಯ ಖಾತೆ ತೆರೆಯಲು ಆರಂಭಿಸಿದ್ದಾರೆ. ಖಾತೆ ಹೊಂದಿದವರು ಆಧಾರ್‌ ಸಂಖ್ಯೆ ಜೋಡಣೆ ಮಾಡಿಕೊಳ್ಳುತ್ತಿದ್ದಾರೆ. ಇದು ಆಹಾರ ಇಲಾಖೆಗೆ ಸ್ವಲ್ಪ ಮಟ್ಟಿಗೆ ಅನುಕೂಲ ಆಗಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ. ಒಟ್ಟು ಪಡಿತರದಾರರ ಸಂಖ್ಯೆ 4,41,77,910 ಇದೆ. ಅಂತ್ಯೋದಯ ಕಾರ್ಡ್‌ ಹೊಂದಿದ.

44,77,119 ಸದಸ್ಯರಿದ್ದಾರೆ. ಬಿಪಿಎಲ್ ಕಾರ್ಡ್​ದಾರರು 1.28 ಕೋಟಿ ಮಂದಿ ಇದ್ದಾರೆ. ಬಿಪಿಎಲ್ ಕಾರ್ಡ್​​ ಹೊಂದಿದ ಕುಟುಂಬದ ಪ್ರತಿ ಸದಸ್ಯರಿಗೆ ತಲಾ 5 ಕೆಜಿ ಅಕ್ಕಿ ನೀಡಲಾಗುತ್ತಿದೆ. ಹೆಚ್ಚುವರಿ ತಲಾ 5 ಕೆಜಿಗೆ ಲೆಕ್ಕ ಹಾಕಿ ಪ್ರತಿ ವ್ಯಕ್ತಿಗೆ 170 ರೂ. ಪಾವತಿಸಲಿದೆ. ಅನ್ನಭಾಗ್ಯದ ಹಣ ಈ ತಿಂಗಳು 10ರ ನಂತರ ಪ್ರಾರಂಭ ಮಾಡುತ್ತೇವೆ. ಜುಲೈ ತಿಂಗಳಲ್ಲಿ ಅಕ್ಕಿ ಬದಲಿಗೆ ದುಡ್ಡನ್ನು ಒಂದನೇ ತಾರೀಖು ಕೊಡುತ್ತೇವೆ ಎಂದು ಹೇಳಿಲ್ಲ. ಈ ತಿಂಗಳ ಹಣವನ್ನು ಈ ತಿಂಗಳಲ್ಲಿಯೇ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಜುಲೈ ತಿಂಗಳ ಅಕ್ಕಿಯ ಹಣ ಎಲ್ಲರಿಗೂ ಕೈ ಸೇರಲಿದೆ- ಸಚಿವ ಮುನಿಯಪ್ಪ: ಇಂದಿನಿಂದ ಬಿಪಿಎಲ್ ಕಾರ್ಡ್​ದಾರರಿಗೆ ಹಣ ಹಾಕುವ ಪ್ರಕ್ರಿಯೆ ಆರಂಭವಾಗಿದೆ. 1 ಕೋಟಿ 29 ಸಾವಿರ ಕಾರ್ಡ್​ಗಳಿಗೆ ಹಣ‌ ಕೊಡಬೇಕಿದೆ ಎಂದು ಆಹಾರ ಸಚಿವ ಕೆ. ಹೆಚ್ ಮುನಿಯಪ್ಪ ತಿಳಿಸಿದ್ದಾರೆ. ಅವರು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಕಚೇರಿಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿ ಇಂದಿನಿಂದ ಅನ್ನಭಾಗ್ಯ ಗ್ಯಾರೆಂಟಿ ಜಾರಿಗೆ ತರುತ್ತೇವೆ. 5 ಕೆಜಿ ಅಕ್ಕಿಗೆ 170 ರೂಪಾಯಿ ಹಣ ಹಾಕಲಿದ್ದೇವೆ. ಇಂದಿನಿಂದ ಪ್ರಕ್ರಿಯೆ ಆರಂಭವಾಗಿದೆ ಒಂದು ವಾರ 10 ದಿನದಲ್ಲಿ ಮುಗಿಯಲಿದೆ. ಜುಲೈ ತಿಂಗಳ ಅಕ್ಕಿಯ ಹಣ ಎಲ್ಲರಿಗೂ ಸಿಗಲಿದೆ ಎಂದರು. ಇನ್ನು ಶೇ 90% ರಷ್ಟು ಕಾರ್ಡ್​ದಾರರ ಅಕೌಂಟ್ ಲಿಂಕ್ ಆಗಿದೆ. 10% ಆಗದೆ ಇರಬಹುದು ಅದು ಸಹ ಆಗುತ್ತೆ ಎಲ್ಲರಿಗೂ ಹಣ ಸಿಗುತ್ತೆ. ಟೆಕ್ನಿಕಲ್ ಸಮಸ್ಯೆ ಬಗೆಹರಿಸುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಎಂದು ಕೆ. ಹೆಚ್ ಮುನಿಯಪ್ಪ ತಿಳಿಸಿದರು.

Source : https://m.dailyhunt.in/news/india/kannada/etvbhar9348944527258-epaper-etvbhkn/annabhagya+scheme+annabhaagya+yojaneya+prakriye+indinindha+aarambha+julai+10ra+nantara+5+keji+akki+badalu+byaank+ge+hana+jame-newsid-n514440444?listname=newspaperLanding&topic=homenews&index=9&topicIndex=0&mode=pwa&action=click

Leave a Reply

Your email address will not be published. Required fields are marked *