Raj B Shetty-Toby Movie First Look: ಕುರುಚಲು ಗಡ್ಡ, ಮೂಗಿನಲ್ಲಿ ದೊಡ್ಡ ಮೂಗುತಿ, ತಲೆ ಹಾಗೂ ಮೂಗಿನಲ್ಲಿ ರಕ್ತದ ಕಲೆಯಿಂದ ಕೂಡಿರುವ ಗಾಯ ಹೀಗೆ ಹಲವು ರಾ ಲುಕ್’ನಲ್ಲಿ ರಾಜ್ ಕಾಣಿಸಿಕೊಂಡಿದ್ದು, ಈ ವಿಭಿನ್ನ ಪೋಸ್ಟರ್ ಸಾಕಷ್ಟು ಕುತೂಹಲ ಮೂಡಿಸಿದೆ

Raj B Shetty-Toby Movie First Look: ತಮ್ಮ ಸಹಜ ಅಭಿನಯದ ಮೂಲಕ ಎಲ್ಲರ ಮನ ಗೆದ್ದಿರುವ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಟೋಬಿ’ ಚಿತ್ರದ ಫಸ್ಟ್ ಲುಕ್ ಇತ್ತೀಚೆಗೆ ಬಿಡುಗಡೆಯಾಗಿದೆ. ರಾಜ್ ಬಿ ಶೆಟ್ಟಿ ಫಸ್ಟ್ ಲುಕ್ ನಲ್ಲಿ ಡಿಫರೆಂಟಾಗಿ ಕಾಣಿಸಿಕೊಂಡಿದ್ದಾರೆ.
ಕುರುಚಲು ಗಡ್ಡ, ಮೂಗಿನಲ್ಲಿ ದೊಡ್ಡ ಮೂಗುತಿ, ತಲೆ ಹಾಗೂ ಮೂಗಿನಲ್ಲಿ ರಕ್ತದ ಕಲೆಯಿಂದ ಕೂಡಿರುವ ಗಾಯ ಹೀಗೆ ಹಲವು ರಾ ಲುಕ್’ನಲ್ಲಿ ರಾಜ್ ಕಾಣಿಸಿಕೊಂಡಿದ್ದು, ಈ ವಿಭಿನ್ನ ಪೋಸ್ಟರ್ ಸಾಕಷ್ಟು ಕುತೂಹಲ ಮೂಡಿಸಿದೆ. ಚಿತ್ರ ನೋಡುವ ಕಾತುರವನ್ನು ಮತ್ತಷ್ಟು ಹೆಚ್ಚಿಸಿದೆ. ಸದ್ಯ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಟೀಸರ್ ಮತ್ತು ಟ್ರೇಲರ್ ಸದ್ಯದಲ್ಲೇ ಬರಲಿದೆ. ಇನ್ನು ಆಗಸ್ಟ್ 25 ಕ್ಕೆ ಚಿತ್ರ ತೆರೆ ಕಾಣಲಿದೆ.
ಬರಹಗಾರ ಟಿ.ಕೆ.ದಯಾನಂದ್ ‘ಟೋಬಿ’ ಚಿತ್ರಕ್ಕೆ ಕಥೆ ಬರೆದಿದ್ದಾರೆ. “ನಾನು ಕಾರವಾರದಲ್ಲಿ ಕಂಡ ಒಬ್ಬ ವಿಲಕ್ಷಣ ವ್ಯಕ್ತಿತ್ವದ ವ್ಯಕ್ತಿಯ ಕಥೆಯಿದು. ನೀವೊಬ್ಬರನ್ನು ನೋಡಿದಾಗ ಇವರು ಇಂತಹವರು ಅಂತ ಹೇಳಬಹುದು. ಆದರೆ, ಈ ವ್ಯಕ್ತಿಯನ್ನು ಆ ರೀತಿ ಹೇಳಲಾಗದು. ನಾನು ಆತನ ಕುರಿತು ಕಥೆ ಬರೆದಿದ್ದೇನೆ. ಅದು ಈಗ ‘ಟೋಬಿ’ ಚಿತ್ರವಾಗಿದೆ ಎಂದು ಟಿ.ಕೆ.ದಯಾನಂದ್ ತಿಳಿಸಿದರು.
“ಸಿನಿಮಾ ನೋಡಲು ಬಂದ ಪ್ರೇಕ್ಷಕನಿಗೆ ಮೊದಲು ಸಿನಿಮಾ ಇಷ್ಟ ಆಗಬೇಕು. ಅಂತಹ ಸಿನಿಮಾ ಮಾಡುವ ಆಸೆ ನನಗೆ. ಟೋಬಿ ಫ್ಯಾಮಿಲಿ ಎಂಟರ್ ಟೈನರ್ ಚಿತ್ರ ಎನ್ನಬಹುದು. ನೀವು ಫಸ್ಟ್ ಲುಕ್ ನಲ್ಲಿ ನೋಡುತ್ತಿರುವುದು ಚಿತ್ರದ ಒಂದು ಭಾಗವಷ್ಟೆ. ಇಡೀ ಚಿತ್ರ ಈ ರೀತಿ ಇರುವುದಿಲ್ಲ. ನನಗೆ ಈ ಚಿತ್ರದ ಕಥೆ ಹೊಸತು ಎನಿಸಿತು. ನನ್ನ ಪಾತ್ರ ಕೂಡ ಹಿಂದಿನ ಚಿತ್ರಗಳಿಗಿಂತ ಸ್ವಲ್ಪ ವಿಭಿನ್ನವಾಗಿದೆ. ನನಗೆ ಗೊತ್ತಿಲ್ಲದ ವಿಷಯವನ್ನು ಕಲಿತು ಈ ಚಿತ್ರದಲ್ಲಿ ಹೇಳಿದ್ದೇನೆ. ಚಿತ್ರ ನೋಡಿ. ಪ್ರೋತ್ಸಾಹ ನೀಡಿ ಎಂದಿದ್ದಾರೆ” ರಾಜ್ ಬಿ ಶೆಟ್ಟಿ.
ಲೈಟರ್ ಬುದ್ಧ ಫಿಲಂಸ್, ಅಗಸ್ತ್ಯ ಫಿಲಂಸ್ ಹಾಗೂ ಕಾಫಿ ಗ್ಯಾಂಗ್ ಸ್ಟುಡಿಯೋಸ್ ಮತ್ತು ಸ್ಮೂತ್ ಸೈಲರ್ಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ರವಿ ರೈ ಕಳಸ ಈ ಚಿತ್ರದ ನಿರ್ಮಾಪಕರು. ಶಾಮಿಲ್ ಬಂಗೇರ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.
ನಿರ್ದೇಶಕ ಬಾಸಿಲ್, ಸಂಗೀತ ನಿರ್ದೇಶಕ ಮಿಥುನ್ ಮುಕುಂದನ್, ಚಿತ್ರದ ನಾಯಕಿಯರಾದ ಸಂಯುಕ್ತ ಹೊರನಾಡು, ಚೈತ್ರಾ ಆಚಾರ್ ಚಿತ್ರದಲ್ಲಿ ನಟಿಸಿರುವ ಗೋಪಾಲಕೃಷ್ಣ ದೇಶಪಾಂಡೆ, ರಾಜ್ ದೀಪಕ್ ಶೆಟ್ಟಿ, ಶ್ರೀಕಾಂತ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ “ಟೋಬಿ” ಚಿತ್ರದ ಕುರಿತು ಮಾತನಾಡಿದರು.
ಟೋಬಿ ಚಿತ್ರಕ್ಕೆ ‘ಮಾರಿ ಮಾರಿ ..ಮಾರಿಗೆ ದಾರಿ; ಎಂಬ ಅಡಿಬರಹವಿದೆ. ಇನ್ನು ರಾಜ್ ಬಿ ಶೆಟ್ಟಿ ಅವರ ಈ ಹಿಂದಿನ ಚಿತ್ರಗಳಿಗಿಂತ ಟೋಬಿ ಕೊಂಚ ವಿಭಿನ್ನವಾಗಿದ್ದು, ಬಿಗ್ ಬಜೆಟ್ ಹೊಂದಿದೆ.