Jharkhand ACB Nabs assistant registrar: ಜಾರ್ಖಂಡ್ ದಲ್ಲಿ JPSC ಪರೀಕ್ಷೆಯಲ್ಲಿ 108ನೇ ರ್ಯಾಂಕ್ ಪಡೆದು 1 ವಾರದ ಹಿಂದೆಯಷ್ಟೇ ಮೊದಲ ಪೋಸ್ಟಿಂಗ್ ಪಡೆದುಕೊಂಡಿದ್ದ ಮಿಥಾಲಿ ಶರ್ಮಾ ಅವರು ಮೊದಲ ದಿನವೇ ಲಂಚ ಪಡೆಯುವಾಗ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ನವದೆಹಲಿ: ದೇಶದಲ್ಲಿ ಸರ್ಕಾರಿ ಅಧಿಕಾರಿಗಳು ಲಂಚ ಪಡೆಯುವುದು ಕಾಮನ್ ಆಗಿಬಿಟ್ಟಿದೆ. ಸರ್ಕಾರ ನೀಡುವ ಕೈತುಂಬಾ ಸಂಬಳ ಸಾಲದೆಂಬಂತೆ ಸಾಮಾನ್ಯ ಜನರ ರಕ್ತ ಹೀರಿ ಗಿಂಬಳ ಪಡೆಯುತ್ತಾರೆ. ‘ಸರ್ಕಾರಿ ಕೆಲಸ ದೇವರ ಕೆಲಸ’ ಅನ್ನೋದನ್ನು ಮರೆತು ಭ್ರಷ್ಟಾಚಾರ ನಡೆಸುತ್ತಾರೆ. ಇದಕ್ಕೆ ಸ್ಪಷ್ಟ ನಿದರ್ಶನವೇ ವಾರದ ಹಿಂದಷ್ಟೇ ಪೋಸ್ಟಿಂಗ್ ಆಗಿ ಕೆಲಸಕ್ಕೆ ಸೇರಿದ ಮೊದಲ ದಿನವೇ ಲಂಚಕ್ಕೆ ಕೈಯೊಡ್ಡಿದ್ದ ಈ ಸಹಾಯಕ ರಿಜಿಸ್ಟ್ರಾರ್!
ಹೌದು, ಜಾರ್ಖಂಡ್ ರಾಜ್ಯದಲ್ಲಿ JPSC ಪರೀಕ್ಷೆಯಲ್ಲಿ 108ನೇ ರ್ಯಾಂಕ್ ಪಡೆದು 1 ವಾರದ ಹಿಂದೆಯಷ್ಟೇ ಮೊದಲ ಪೋಸ್ಟಿಂಗ್ ಪಡೆದುಕೊಂಡಿದ್ದ ಮಿಥಾಲಿ ಶರ್ಮಾ ಅವರು ಮೊದಲ ದಿನವೇ ಲಂಚ ಪಡೆಯುವಾಗ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಕೊಡರ್ಮಾ ವೃತ್ತದ ಕೋ-ಆಪರೇಟಿವ್ ಸೊಸೈಟಿಯಲ್ಲಿ ಸಹಾಯಕ ರಿಜಿಸ್ಟ್ರಾರ್ ಆಗಿದ್ದ ಮಿಥಾಲಿ ಶರ್ಮಾರನ್ನು ಜಾರ್ಖಂಡ್ನ ಹಜಾರಿಬಾಗ್ ಭ್ರಷ್ಟಾಚಾರ ನಿಗ್ರಹ ದಳ (ACB) ತಂಡವು ಶುಕ್ರವಾರ ಬಂಧಿಸಿದೆ. 10 ಸಾವಿರ ರೂ. ಲಂಚ ಪಡೆಯುವಾಗ ಮಿಥಾಲಿ ಶರ್ಮಾರ ರೆಡ್ ಹ್ಯಾಂಡ್ ಆಗಿ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಮಿಥಾಲಿ ಶರ್ಮಾ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆಂದು ಕೊಡೆರ್ಮಾ ವ್ಯಾಪಾರ ಮಂಡಲ(ಬೀಜ ವಿತರಣೆಯ ನೋಡಲ್ ಏಜೆನ್ಸಿ)ದ ನಿರ್ವಹಣಾ ಸಮಿತಿಯ ಸದಸ್ಯ ರಾಮೇಶ್ವರ ಪ್ರಸಾದ್ ಯಾದವ್ ಎಂಬುವರು ದೂರು ನೀಡಿದ್ದರು. ಜೂನ್ 16ರಂದು ಮಿಥಾಲಿ ಶರ್ಮಾ ನಮ್ಮ ಕಚೇರಿಯ ಪರಿಶೀಲನೆಗೆ ಆಗಮಿಸಿದ್ದರು. ಕಾರಣವಿಲ್ಲದೆ ನನಗೆ ಶೋಕಾಸ್ ನೋಟಿಸ್ ನೀಡಿದರು. ಇದನ್ನು ಪ್ರಶ್ನಿಸಿದ ನನಗೆ 20 ಸಾವಿರ ರೂ ಹಣ ನೀಡುವಂತೆ ಕೇಳಿದ್ದರು’ ಅಂತಾ ರಾಮೇಶ್ವರ ಪ್ರಸಾದ್ ಹೇಳಿದ್ದಾರೆ.
ತಾನು ಏನೂ ತಪ್ಪು ಮಾಡಿಲ್ಲದ ಕಾರಣ ಯಾವುದೇ ಕಾರಣಕ್ಕೂ ಲಂಚ ನೀಡುವುದಿಲ್ಲವೆಂದು ರಾಮೇಶ್ವರ ಪ್ರಸಾದ್ ನಿರ್ಧರಿಸಿದ್ದರು. ಕೂಡಲೇ ಈ ಬಗ್ಗೆ ಜಾರ್ಖಂಡ್ನ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳನ್ನು ಸಂಪರ್ಕಿಸಿ ದೂರು ನೀಡಿದ್ದರು. ಇದರ ಆಧಾರದ ಮೇಲೆ ಮಿಥಾಲಿ ಶರ್ಮಾರನ್ನು ಲಂಚ ಪಡೆಯುವ ವೇಳೆ ರೆಡ್ಹ್ಯಾಂಡ್ ಆಗಿ ಹಿಡಿಯಲಾಗಿದೆ. ಈ ಬಗ್ಗೆ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.