ಸುದ್ದಿ ಬರೆಯುವ ಎಐ Google Genesis: ಇದೆಷ್ಟು ನಿಖರ..? ಇಲ್ಲಿದೆ ಮಾಹಿತಿ!

ಮಾಧ್ಯಮ ಮನೆಗಳಲ್ಲಿ ಸುದ್ದಿ ಬರೆಯಲು ಕೂಡ ಗೂಗಲ್ ವಿಶೇಷವಾದ ಆರ್ಟಿಫಿಶಿಯಲ್ ಸಾಫ್ಟವೇರ್ ಒಂದನ್ನು ತಯಾರಿಸುತ್ತಿದೆ. ಇದರ ಬಳಕೆಯನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಗೂಗಲ್ ಪ್ರಮುಖ ಮಾಧ್ಯಮ ಸಂಸ್ಥೆಗಳ ಪ್ರಮುಖರನ್ನು ಸಂಪರ್ಕಿಸಿದೆ ಎಂದು ವರದಿಯಾಗಿದೆ.

ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ): ತನ್ನ ಕೃತಕ ಬುದ್ಧಿಮತ್ತೆ (AI) ಸಾಫ್ಟವೇರ್ ಮೂಲಕ ಸುದ್ದಿಗಳನ್ನು ಮತ್ತಷ್ಟು ಉತ್ತಮವಾಗಿ ಬರೆಯಲು ಸಹಾಯ ಮಾಡಲು ಗೂಗಲ್, ಪ್ರಮುಖ ಮಾಧ್ಯಮ ಸಂಸ್ಥೆಗಳಲ್ಲಿನ ಪತ್ರಕರ್ತರೊಂದಿಗೆ ಸಂಪರ್ಕ ಸಾಧಿಸಿದೆ ಎಂದು ವರದಿಯಾಗಿದೆ.

ವಾಷಿಂಗ್ಟನ್ ಪೋಸ್ಟ್, ವಾಲ್ ಸ್ಟ್ರೀಟ್ ಜರ್ನಲ್ ಒಡೆತನ ಹೊಂದಿರುವ ನ್ಯೂಸ್ ಕಾರ್ಪ್ ಮತ್ತು ಎನ್​ವೈಟಿ ಸೇರಿದಂತೆ ಇತರ ಮಾಧ್ಯಮ ಸಂಸ್ಥೆಗಳೊಂದಿಗೆ ಗೂಗಲ್ ತನ್ನ ಹೊಸ AI ಉಪಕರಣದ ಕುರಿತು ಚರ್ಚೆಗಳನ್ನು ನಡೆಸಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಮಾಧ್ಯಮ ಮನೆಯಲ್ಲಿ ಬಳಸಬಹುದಾದ ಜೆನೆಸಿಸ್ (Genesis) ಎಂದು ಕರೆಯಲ್ಪಡುವ AI ಸಾಫ್ಟವೇರ್​ ಅನ್ನು ಗೂಗಲ್ ಪರಿಚಯಿಸಿದೆ. ಈ ತಂತ್ರಜ್ಞಾನವು ಜವಾಬ್ದಾರಿಯುತವಾಗಿ ಸತ್ಯ ಮಾಹಿತಿಗಳನ್ನು ಹುಡುಕುತ್ತದೆ ಮತ್ತು ನ್ಯೂಸ್ ಕಾಪಿಗಳನ್ನು ಬರೆಯಲು ಮಾಧ್ಯಮ ಸಂಸ್ಥೆಗಳ ಹಿರಿಯ ನಿರ್ವಾಹಕರಿಗೆ ಸಹಾಯ ಮಾಡಲಿದೆ ಎಂದು ವರದಿಗಳು ಹೇಳಿವೆ.

ಜೆನೆಸಿಸ್ ಬಗ್ಗೆ ಮಾತನಾಡಿದ ಕೆಲ ಮಾಧ್ಯಮ ಸಂಪಾದಕರು, ನಿಖರವಾದ ಮತ್ತು ಕಲಾತ್ಮಕ ಸುದ್ದಿಗಳನ್ನು ಬರೆಯುವಲ್ಲಿ ವಿಷಯಗಳನ್ನು ಜೆನೆಸಿಸ್ ಲಘುವಾಗಿ ಪರಿಗಣಿಸುತ್ತಿದೆ ಎಂದು ಹೇಳಿದ್ದಾರೆ. ಜೆನೆಸಿಸ್ ಮತ್ತೊಂದು ಪರ್ಸನಲ್ ಅಸಿಸ್ಟಂಟ್​ ಸಾಫ್ಟವೇರ್ ರೀತಿಯಲ್ಲಿದೆ ಅಷ್ಟೆ ಎಂದು ಮತ್ತೊಬ್ಬರು ಹೇಳಿದ್ದಾರೆ ಎಂದು ವರದಿಗಳು ತಿಳಿಸಿವೆ.

ಸುದ್ದಿ ಪ್ರಕಾಶಕರ ಸಹಭಾಗಿತ್ವದಲ್ಲಿ, ವಿಶೇಷವಾಗಿ ಸಣ್ಣ ಪ್ರಕಾಶಕರ ಸಹಭಾಗಿತ್ವದಲ್ಲಿ ಪತ್ರಕರ್ತರಿಗೆ ಅವರ ಕೆಲಸದಲ್ಲಿ ಸಹಾಯ ಮಾಡಲು AI-ಸಕ್ರಿಯಗೊಳಿಸಿದ ಸಾಧನಗಳನ್ನು ಸಮರ್ಥವಾಗಿ ಒದಗಿಸಲು ನಾವು ಆರಂಭಿಕ ಹಂತದಲ್ಲಿದ್ದೇವೆ ಎಂದು ಗೂಗಲ್ ವಕ್ತಾರರು ಹೇಳಿದರು.

ಅದು ಹೇಗೆ ಸಹಾಯ ಮಾಡಬಲ್ಲದು?: ಉದಾಹರಣೆಗೆ, AI ಸಕ್ರಿಯಗೊಳಿಸಿದ ಸಾಧನಗಳು ಪತ್ರಕರ್ತರಿಗೆ ಮುಖ್ಯಾಂಶಗಳು ಅಥವಾ ವಿಭಿನ್ನ ಬರವಣಿಗೆಯ ಶೈಲಿಗಳ ಆಯ್ಕೆಗಳೊಂದಿಗೆ ಸಹಾಯ ಮಾಡಬಹುದು. “ನಮ್ಮ ಗುರಿ ಪತ್ರಕರ್ತರಿಗೆ ಈ ಉದಯೋನ್ಮುಖ ತಂತ್ರಜ್ಞಾನಗಳನ್ನು ಅವರ ಕೆಲಸ ಮತ್ತು ಉತ್ಪಾದಕತೆ ಹೆಚ್ಚಿಸುವ ರೀತಿಯಲ್ಲಿ ಬಳಸುವ ಆಯ್ಕೆಯನ್ನು ನೀಡುವುದಾಗಿದೆ. ನಾವು Gmail ಮತ್ತು Google ಡಾಕ್ಸ್‌ನಲ್ಲಿ ಜನರಿಗೆ ಸಹಾಯಕ ಸಾಧನಗಳನ್ನು ಲಭ್ಯವಾಗುವಂತೆ ಮಾಡುತ್ತಿದ್ದೇವೆ” ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ.

ಆದಾಗ್ಯೂ, ಈ ಸಾಧನಗಳು ತಮ್ಮ ಲೇಖನಗಳನ್ನು ವರದಿ ಮಾಡುವ, ರಚಿಸುವ ಮತ್ತು ಸತ್ಯ-ಪರಿಶೀಲಿಸುವಲ್ಲಿ ಪತ್ರಕರ್ತರ ಪಾತ್ರವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಕಂಪನಿ ಹೇಳಿದೆ. AI ಇದುವರೆಗೆ ಹಲವಾರು ಸಂದರ್ಭಗಳಲ್ಲಿ ನಿಖರವಾದ ಮಾಹಿತಿಯನ್ನು ಸೃಷ್ಟಿಸಲು ವಿಫಲವಾಗಿರುವುದು ಮಾತ್ರ ಸತ್ಯ.

ಏನಿದು ಕೃತಕ ಬುದ್ಧಿಮತ್ತೆ?: ಕೃತಕ ಬುದ್ಧಿಮತ್ತೆ (AI) ಎನ್ನುವುದು ಕಂಪ್ಯೂಟರ್ ವಿಜ್ಞಾನದ ಒಂದು ವಿಶಾಲ ವ್ಯಾಪ್ತಿಯ ಶಾಖೆಯಾಗಿದ್ದು, ಸಾಮಾನ್ಯವಾಗಿ ಮಾನವ ಬುದ್ಧಿವಂತಿಕೆ ಅಗತ್ಯವಿರುವ ಕಾರ್ಯಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುವ ಸ್ಮಾರ್ಟ್ ಯಂತ್ರಗಳನ್ನು ನಿರ್ಮಿಸುವ ವಿಭಾಗವಾಗಿದೆ. AI ಬಹು ವಿಧಾನಗಳನ್ನು ಹೊಂದಿರುವ ಅಂತರಶಿಸ್ತೀಯ ವಿಜ್ಞಾನವಾಗಿದ್ದರೂ, ಯಂತ್ರ ಕಲಿಕೆ ಮತ್ತು ಆಳವಾದ ಕಲಿಕೆಯಲ್ಲಿನ ಪ್ರಗತಿಗಳು, ನಿರ್ದಿಷ್ಟವಾಗಿ ಟೆಕ್ ಉದ್ಯಮದ ಪ್ರತಿಯೊಂದು ವಲಯದಲ್ಲೂ ಒಂದು ಮಾದರಿ ಬದಲಾವಣೆಯನ್ನು ಸೃಷ್ಟಿಸುತ್ತಿವೆ. ಕೃತಕ ಬುದ್ಧಿಮತ್ತೆಯು ಯಂತ್ರಗಳಿಗೆ ಮಾನವನ ಮನಸ್ಸಿನ ಸಾಮರ್ಥ್ಯಗಳನ್ನು ರೂಪಿಸಲು ಅಥವಾ ಸುಧಾರಿಸಲು ಶಕ್ತಿ ನೀಡುತ್ತದೆ.

Source : https://m.dailyhunt.in/news/india/kannada/etvbhar9348944527258-epaper-etvbhkn/suddi+bareyuva+eai+google+genesis+ideshtu+nikhara+illide+maahiti+-newsid-n520337136?listname=newspaperLanding&topic=scienceandtechnology&index=1&topicIndex=7&mode=pwa&action=click

Leave a Reply

Your email address will not be published. Required fields are marked *