Sapta Sagaradaache Yello Horaata Song: ಈ ಚಿತ್ರಕ್ಕಾಗಿ ಎಂ.ಸಿ.ಬಿಜ್ಜು ಹಾಗೂ ಕಿರಣ್ ಕಾವೇರಪ್ಪ ಬರೆದಿರುವ “ಹೋರಾಟ” ಎಂಬ ಹಾಡಿನ ಲಿರಿಕಲ್ ವಿಡಿಯೋ ಪರಂವಃ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ.

ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಾಯಕರಾಗಿ ನಟಿಸಿ, ನಿರ್ಮಾಣ ಮಾಡಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರವು ತೆರೆಗೆ ಬರಲು ಸಿದ್ಧವಾಗಿದೆ. ಸೈಡ್ 1 ಸೆಪ್ಟೆಂಬರ್ 1ರಂದು ಬಿಡುಗಡೆಯಾದರೆ, ಸೈಡ್ 2 ಅಕ್ಟೋಬರ್ 20ಕ್ಕೆ ತೆರೆಗೆ ಬರಲಿದೆ.
ಹೇಮಂತ್ ಎಂ ರಾವ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ರಕ್ಷಿತ್ ಶೆಟ್ಟಿ ಹಾಗೂ ಹೇಮಂತ್ ಎಂ ರಾವ್ ಕಾಂಬಿನೇಶನ್ನಲ್ಲಿ ಬರುತ್ತಿರುವ ಈ ಚಿತ್ರದ ಬಿಡುಗಡೆಗೆ ಅಭಿಮಾನಿ ವಲಯ ಕಾತುರದಿಂದ ಕಾಯುತ್ತಿದೆ. ಹೇಮಂತ್ ರಾವ್ ಹಾಗೂ ರಕ್ಷಿತ್ ಕಾಂಬಿನೇಷನ್ನಲ್ಲಿ ಈ ಹಿಂದೆ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾ ಮೂಡಿ ಬಂದಿತ್ತು.
ಸದ್ಯ ಈ ಚಿತ್ರಕ್ಕಾಗಿ ಎಂ.ಸಿ.ಬಿಜ್ಜು ಹಾಗೂ ಕಿರಣ್ ಕಾವೇರಪ್ಪ ಬರೆದಿರುವ “ಹೋರಾಟ” ಎಂಬ ಹಾಡಿನ ಲಿರಿಕಲ್ ವಿಡಿಯೋ ಪರಂವಃ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ. ಎಂ.ಸಿ.ಬಿಜ್ಜು(ರಾಪರ್) ಹಾಗೂ ಕೀರ್ತನ್ ಹೊಳ್ಳ ಹಾಡಿರುವ ಈ ಹಾಡು ಎಲ್ಲರ ಪ್ರಶಂಸೆಗೆ ಪಾತ್ರವಾಗುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಚರಣ್ ರಾಜ್ ಈ ಚಿತ್ರದ ಸಂಗೀತ ನಿರ್ದೇಶಕರು.
ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಹಾಗೂ ಸುನೀಲ್ ಭಾರದ್ವಾಜ್ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್, ಚೈತ್ರ ಜೆ ಆಚಾರ್, ಅವಿನಾಶ್, ಶರತ್ ಲೋಹಿತಾಶ್ವ, ಅಚ್ಯತಕುಮಾರ್, ಪವಿತ್ರ ಲೋಕೇಶ್, ರಮೇಶ್ ಇಂದಿರಾ, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರಿದ್ದಾರೆ.
‘777 ಚಾರ್ಲಿ’ ಬಳಿಕ ರಿಲೀಸ್ ಆಗುತ್ತಿರುವ ರಕ್ಷಿತ್ ಶೆಟ್ಟಿ ನಟನೆಯ ಈ ಸಿನಿಮಾ ಬಗ್ಗೆ ತುಂಬಾ ನಿರೀಕ್ಷೆಯಿದೆ. ಈ ಚಿತ್ರದ ಪ್ರಮೋಷನ್ ಆರಂಭ ಆಗಿದ್ದು, ಸಿನಿಮಾದ ಮೊದಲ ಹಾಡು ಬುಧವಾರ(ಜುಲೈ 20) ರಿಲೀಸ್ ಆಗಿದೆ. ಈ ಹಾಡು ಕೇಳುಗರಿಗೆ ಇಷ್ಟ ಆಗಿದೆ.
Views: 0