Cybercrime: ಬುಧವಾರ ಆರೋಪಿಯ ಸ್ಥಳವನ್ನು ಗಾಜಿಯಾಬಾದ್‌ನ ಲೋನಿಯಲ್ಲಿ ಪತ್ತೆ ಮಾಡಲಾಯಿತು. ನಂತರ ಗುಪ್ತಾನನ್ನು ಬಂಧಿಸಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಯಿತು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ನವದೆಹಲಿ: ಡಿಜಿಟಲ್ ಯುಗದಲ್ಲಿ ಸೈಬರ್ ಕ್ರೈಂಗಳು ಹೆಚ್ಚಾಗುತ್ತಿವೆ. ಪ್ರತಿದಿನವೂ ಒಂದಲ್ಲ ಒಂದು ರೀತಿಯಲ್ಲಿ ಸೈಬರ್ ವಂಚಕರು ಜನರಿಗೆ ವಂಚನೆ ಮಾಡುತ್ತಿರುತ್ತಾರೆ. ಅದೇ ರೀತಿ ಒಂದೇ ಕ್ಲಿಕ್‍ನಿಂದ ವ್ಯಕ್ತಿಯೊಬ್ಬರು 99,999 ರೂ. ಕಳೆದುಕೊಂಡಿರುವ ಘಟನೆ ನಡೆದಿದೆ.
ಹೌದು, ಆಪತ್ರೆ ಅಪಾಯಿಂಟ್‌ಮೆಂಟ್ಗಾಗಿ ನೋಂದಣಿ ಶುಲ್ಕ ಪಾವತಿಸಲು ವಿನಂತಿಸಿ ಅವರ ಮೊಬೈಲ್ ಸಂಖ್ಯೆಗೆ ಲಿಂಕ್ ಕಳುಹಿಸುವ ಮೂಲಕ ವ್ಯಕ್ತಿಯೊಬ್ಬರನ್ನು ವಂಚಿಸಿದ ಆರೋಪದ ಮೇಲೆ 30 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಜೂನ್ 8ರಂದು ದೇವ್ ಸಾಗರ್ ಸಿಂಗ್ ಅವರು 99,999 ರೂ.ಗಳ ಆನ್‌ಲೈನ್ ವಂಚನೆಗೆ ಸಂಬಂಧಿಸಿದಂತೆ ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.
ಆರೋಪಿಯನ್ನು ಉತ್ತರಪ್ರದೇಶದ ಗಾಜಿಯಾಬಾದ್‌ನ ಲೋನಿ ನಿವಾಸಿ ರಾಜ್ ಗುಪ್ತಾ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಅಪಾಯಿಂಟ್‌ಮೆಂಟ್ ಪಡೆಯುವ ಸಲುವಾಗಿ ಇಂಟರ್‌ನೆಟ್‌ನಲ್ಲಿ ನಂಬರ್ ಸಿಕ್ಕಿತ್ತು. ಆ ಸಂಖ್ಯೆಯನ್ನು ಸಂಪರ್ಕಿಸಿದಾಗ ಇನ್ನೊಂದು ಬದಿಯಲ್ಲಿದ್ದ ವ್ಯಕ್ತಿ ನೋಂದಣಿ ಶುಲ್ಕವಾಗಿ 10 ರೂ. ಪಾವತಿಸಬೇಕೆಂದು ಮೊತ್ತವನ್ನು ಕಟ್ಟಿಸಿಕೊಂಡಿದ್ದಾರೆ.
ನಂತರ ಆರೋಪಿಯು ವಾಟ್ಸಾಪ್ ಮೂಲಕ ಮತ್ತೊಂದು ಲಿಂಕ್ ಅನ್ನು ಕಳುಹಿಸಿದ್ದನು. ಅಪಾಯಿಂಟ್ಮೆಂಟ್ ಕಾಯ್ದಿರಿಸಲು ಆ ಲಿಂಕ್ ಅನ್ನು ಕ್ಲಿಕ್ ಮಾಡುವಂತೆ ಸಿಂಗ್‍ಗೆ ತಿಳಿಸಿದ್ದನು. ಅದರಂತೆ ಆ ಲಿಂಕ್ ಕ್ಲಿಕ್ ಮಾಡಿದ ಕೂಡಲೇ ಆತನ ಬ್ಯಾಂಕ್ ಖಾತೆಯಿಂದ 99,999 ರೂ. ಡೆಬಿಟ್ ಆಗಿದೆ. ಇದರಿಂದ ಆತಂಕಗೊಂಡ ಸಿಂಗ್ ಅವರು ಪೊಲೀಸರಿಗೆ ದೂರು ನೀಡಿದ್ದರು.
ತನಿಖೆಯ ವೇಳೆ ವಂಚಿಸಿದ ಮೊತ್ತ ಗುಪ್ತಾ ಖಾತೆಗೆ ಜಮಾ ಆಗಿರುವುದು ಗೊತ್ತಾಗಿದೆ. ಬಳಿಕ ಆತನ ನೋಂದಾಯಿತ ಮೊಬೈಲ್ ಸಂಖ್ಯೆ ನಿಷ್ಕ್ರಿಯಗೊಂಡಿರುವುದು ಕಂಡುಬಂದಿದೆ. ಬುಧವಾರ ಆರೋಪಿಯ ಸ್ಥಳವನ್ನು ಗಾಜಿಯಾಬಾದ್‌ನ ಲೋನಿಯಲ್ಲಿ ಪತ್ತೆ ಮಾಡಲಾಯಿತು. ನಂತರ ಗುಪ್ತಾನನ್ನು ಬಂಧಿಸಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಯಿತು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಈ ವಂಚನೆ ಪ್ರಕರಣವು ವಿಶೇಷ ಘಟನೆಯಲ್ಲ. ಕಾಲಕಾಲಕ್ಕೆ ಇದೇ ರೀತಿಯ ಹಣಕಾಸಿನ ಪ್ರಕರಣಗಳು ವರದಿಯಾಗುತ್ತಿವೆ. ಜನರನ್ನು ಮೋಸಗೊಳಿಸಲು ವಂಚಕರು ಯಾವಾಗಲೂ ಹೊಸ ಮಾರ್ಗಗಳನ್ನು ಹುಡುಕುತ್ತಲೇ ಇರುತ್ತಾರೆ. ಹೀಗಾಗಿ ಜನರು ಸೈಬರ್ ವಂಚನೆ ಮತ್ತು ವಂಚಕರ ಬಗ್ಗೆ ಅತ್ಯಂತ ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.