ಕವಾಡಿಗರಹಟ್ಟಿ ಕಲುಷಿತ ನೀರು ಸೇವನೆ ಪ್ರಕರಣ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ, ಗುತ್ತಿಗೆ ನೌಕರ ಸೇರಿ ಐವರ ಅಮಾನತು

ಕವಾಡಿಗರಹಟ್ಟಿ ಕಲುಷಿತ ನೀರು ಸೇವನೆ ಪ್ರಕರಣದಲ್ಲಿ ಸಾವಿಗೀಡಾದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಪ್ರಕರಣ ಸಂಬಂಧ ಓರ್ವ ಗುತ್ತಿಗೆ ನೌಕರ ಸೇರಿದಂತೆ ಒಟ್ಟು ಐವರನ್ನು ಅಮಾನತು ಮಾಡಿ ಇಲ್ಲಿನ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವನೆ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

ಗುರುವಾರ ಮೂವರು ಮೃತಪಟ್ಟ ಬಗ್ಗೆ ವರದಿಯಾಗಿತ್ತು. ಶುಕ್ರವಾರ ಕವಾಡಿಗರಹಟ್ಟಿಯ ರುದ್ರಪ್ಪ (50) ಹಾಗೂ ಪಾರ್ವತಮ್ಮ(75) ಎಂಬುವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದು, ಈ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

ಮೃತ ರುದ್ರಪ್ಪ ಚಿತ್ರದುರ್ಗ ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಪಾರ್ವತಮ್ಮ ಕವಾಡಿಗರಹಟ್ಟಿಯ ಬಡಾವಣೆಯ ತಮ್ಮ ಮನೆಯಲ್ಲಿಯೇ ಅಸುನೀಗಿದ್ದಾರೆ. ಮೃತ ಪಾರ್ವತಮ್ಮ ಕಳೆದ ಎರಡು ವರ್ಷದ ಹಿಂದೆ ಪಾರ್ಶ್ವವಾಯುಗೆ ಒಳಗಾಗಿದ್ದರು. ಎರಡು ದಿನದಿಂದ ವಾಂತಿ, ಬೇಧಿ ಕಾಣಿಸಿಕೊಂಡಿತ್ತು. ಕುಟುಂಬಸ್ಥರೆಲ್ಲ ಅಸ್ವಸ್ಥರಾಗಿ ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿದ್ದರು. ಮನೆಯಲ್ಲಿ ಅಜ್ಜಿ ನೋಡಿಕೊಳ್ಳುವವರು ಯಾರೂ ಇರಲಿಲ್ಲ. ಈ ವೇಳೆ ಅವರ ಸಾವು ಸಂಭವಿಸಿದೆ.

ಘಟನೆ ಕುರಿತು ಸೂಕ್ತ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರಷ್ಟೇ ಆದೇಶ ನೀಡಿದ್ದರು. ಅಲ್ಲದೇ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥ ಅಧಿಕಾರಿಯನ್ನು ಕೂಡಲೇ ಅಮಾನತು ಮಾಡುವಂತೆಯೂ ಅವರು ಸೂಚನೆ ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದ ಗಂಭೀರತೆ ಅರಿತ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಸಹಾಯಕ ಕಾರ್ಯಪಾಲಕ ಅಭಿಯಂತರ (ಎಇಇ) ಆರ್. ಮಂಜುನಾಥ ಗಿರಡ್ಡಿ ಮತ್ತು ಕಿರಿಯ ಅಭಿಯಂತರ (ಜೆಇ) ಎಸ್.ಆರ್. ಕಿರಣ್ ಕುಮಾರ್ ಅವರನ್ನು ಅಮಾನತುಗೊಳಿಸಲು ಅಧಿಕಾರಿಗಳು ಶಿಫಾರಸು ಮಾಡಿ ವರದಿ ಕಳುಹಿಸಿದ್ದಾರೆ.

ಕವಾಡಿಗರಹಟ್ಟಿಯಲ್ಲಿ ವಾಲ್ವ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಸಿ.ಹೆಚ್. ಪ್ರಕಾಶ್ ಬಾಬು ಅವರನ್ನೂ ಅಮಾನತುಗೊಳಿಸಲಾಗಿದೆ. ನಗರಸಭೆ ಪೌರಾಯುಕ್ತ ಶ್ರೀನಿವಾಸ್​ಗೆ ಶೋಕಾಸ್ ನೋಟಿಸ್ ನೀಡಿದರೆ, ಗುತ್ತಿಗೆ ಆಧಾರಿತ ನೌಕರ ನೀರಗಂಟಿ ಸುರೇಶ್ ಅವರನ್ನು ಕೆಲಸದಿಂದ ವಜಾ ಮಾಡಿ ಆದೇಶ ಹೊರಡಿಸಲಾಗಿದೆ. ಗುರುವಾರಷ್ಟೇ ನಗರಸಭೆಯ ನೀರು ಸರಬರಾಜು ಸಹಾಯಕ ಸಿ ಹೆಚ್ ಪ್ರಕಾಶಬಾಬು ಅವರನ್ನು ಅಮಾನತು ಮಾಡಿ ಆದೇಶ ನೀಡಲಾಗಿತ್ತು. ಪ್ರಕರಣ ಸಂಬಂಧ ಓರ್ವ ಗುತ್ತಿಗೆ ನೌಕರ ಸೇರಿದಂತೆ ಒಟ್ಟು ಐವರನ್ನು ಅಮಾನತು ಮಾಡಲಾಗಿದೆ.

ಗುರುವಾರ ಲ್ಯಾಬ್​ನಿಂದ ವರದಿ ಬಂದಿದ್ದು ಕುಡಿಯಲು ಯೋಗ್ಯವಲ್ಲದ ನೀರು ಎಂದು ವರದಿಯಲ್ಲಿ ಉಲ್ಲೇಖಗೊಂಡಿದೆ. ನೀರು ಕಲುಷಿತಕ್ಕೆ ನಿಖರವಾದ ಕಾರಣ ಕಂಡು ಹಿಡಿಯಲು ಅಸ್ವಸ್ಥಗೊಂಡವರು ಕುಡಿದ ನೀರು, ಮಲ – ಮೂತ್ರ ಮಾದರಿಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದರಲ್ಲಿ ಕಾಲರಾ ಮಾದರಿ ಅಂಶ ಪತ್ತೆಯಾಗಿದೆ ಎಂದು ಲ್ಯಾಬ್ ವರದಿ ಹೇಳಿದೆ. ಪ್ರಕರಣ ಸಂಬಂಧ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಾಕಿ ಇದೆ.

‘ಘಟನೆಗೆ ಕಾರಣ ತಿಳಿಯಲು ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕ ಈ ಬಗ್ಗೆ ಸ್ಪಷ್ಟ ಮಾಹಿತಿ ಹಾಗೂ ಸತ್ಯ ಹೊರಬೀಳಲಿದೆ. ಸದ್ಯ ಸರ್ಕಾರದಿಂದ ಮೃತ ವ್ಯಕ್ತಿಗಳ ಕುಟುಂಬಸ್ಥರಿಗೆ 10 ಲಕ್ಷ ರೂ. ಪರಿಹಾರ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ಹೇಳಿದ್ದಾರೆ. ಅದನ್ನು ಕೊಡಿಸುವಂತಹ ಕೆಲಸ ಮಾಡುತ್ತೇವೆ ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಕೆ.ಸಿ.ವಿರೇಂದ್ರ’ ಮಾಹಿತಿ ನೀಡಿದ್ದರು.

Source : https://m.dailyhunt.in/news/india/kannada/etvbhar9348944527258-epaper-etvbhkn/kavaadigarahatti+kalushita+niru+sevane+prakarana+saavina+sankhye+aidakke+erike+guttige+noukara+seri+aivara+amaanatu-newsid-n524952246?listname=newspaperLanding&topic=homenews&index=5&topicIndex=0&mode=pwa&action=click

Leave a Reply

Your email address will not be published. Required fields are marked *