Sridevi Google Doodle : ಇಂದು ದಿವಂಗತ ಬಾಲಿವುಡ್ ನಟಿ ಶ್ರೀದೇವಿ ಅವರ 60 ನೇ ಜನ್ಮ ವಾರ್ಷಿಕೋತ್ಸವ. ಈ ಪ್ರಯುಕ್ತ ಗೂಗಲ್ ವಿಶೇಷ ಡೂಡಲ್‌ನೊಂದಿಗೆ ಬಿಟೌನ್ ಸೂಪರ್ ಸ್ಟಾರ್ ನಟಿಯ ಹುಟ್ಟು ಹಬ್ಬವನ್ನು ಆಚರಿಸುತ್ತಿದೆ.

Sridevi Birth anniversary : ಬಾಲಿವುಡ್‌ನ ದಿವಂಗತ ನಟಿ ಶ್ರೀದೇವಿ ಅವರ 60ನೇ ಜನ್ಮದಿನವನ್ನು ಗೂಗಲ್ ವಿಶೇಷ ಡೂಡಲ್‌ನೊಂದಿಗೆ ಆಚರಿಸುತ್ತಿದೆ. 1963 ರಲ್ಲಿ ತಮಿಳುನಾಡಿನಲ್ಲಿ ಜನಿಸಿದ ಶ್ರೀದೇವಿ ಭಾರತೀಯ ಸಿನಿರಂಗದಲ್ಲಿ ನಾಲ್ಕು ದಶಕಗಳ ಅವಧಿಯಲ್ಲಿ ಸುಮಾರು 300 ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್ ಅವರನ್ನು ವಿವಾಹವಾದರು ಮತ್ತು ಪುತ್ರಿಯರಾದ ಜಾನ್ವಿ ಮತ್ತು ಖುಷಿ ಕಪೂರ್ ಅವರನ್ನು ಅಗಲಿದ್ದಾರೆ .
ಹೌದು.. ಸುಂದರಿ, ಅದ್ಭುತ ನಟಿ ಶ್ರೀದೇವಿಯವರು ತಮ್ಮ ನಾಲ್ಕನೇ ವರ್ಷಕ್ಕೆ ಸಿನಿಮಾದಲ್ಲಿ ನಟಿಸಲು ಪ್ರಾರಂಭಿಸಿದರು. 1967 ರಲ್ಲಿ ʼಕಂದನ್ ಕರುನೈʼ ಎಂಬ ತಮಿಳು ಚಲನಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರ ವೃತ್ತಿಜೀವನದ ಆರಂಭದಲ್ಲಿ ತಮಿಳು, ತೆಲುಗು ಮತ್ತು ಮಲಯಾಳಂ ಚಲನಚಿತ್ರಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದರು. ಹಲವಾರು ಸ್ಟಾರ್ ನಟರ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ.
1976 ರಲ್ಲಿ, ಕೆ. ಬಾಲಚಂದರ್ ಅವರ ʼಮೂಂಡ್ರು ಮುಡಿಚುʼ ಚಿತ್ರದಲ್ಲಿ ನಾಯಕಿಯಾಗಿ ಅವರು ರಾಷ್ಟ್ರೀಯ ಮನ್ನಣೆ ಗಳಿಸಿದರು. ನಂತರ 1983 ರಲ್ಲಿ, ಆಕ್ಷನ್ ಹಾಸ್ಯ ಹಿಮ್ಮತ್‌ವಾಲಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ ನಂತರ, ಶ್ರೀದೇವಿ ತನ್ನನ್ನು ರಾಷ್ಟ್ರೀಯ ಐಕಾನ್ ಮತ್ತು ಬಾಲಿವುಡ್‌ನಲ್ಲಿ ಬಾಕ್ಸ್ ಆಫೀಸ್ ಆಕರ್ಷಣೆಯ ಕೇಂದ್ರ ಬಿಂದುವಾಗಿ ಹೊರ ಹೊಮ್ಮಿದರು. ಸದ್ಮಾ, ಚಾಲ್‌ಬಾಜ್, ಮಿಸ್ಟರ್ ಇಂಡಿಯಾ, ನಗೀನಾ, ಚಾಂದಿನಿ, ಲಮ್ಹೆ ಸೇರಿದಂತೆ ಹಲವು ಸಿನಿಮಾಗಳು ಶ್ರೀದೇವಿ ಹಿಟ್ ಲಿಸ್ಟ್‌ನಲ್ಲಿವೆ. “ಸಾಂಪ್ರದಾಯಿಕವಾಗಿ ಪುರುಷ ಪ್ರಾಬಲ್ಯ ಹೊಂದಿರುವ ಉದ್ಯಮದಲ್ಲಿ ಪುರುಷ ನಟರಿಲ್ಲದೆ ಬ್ಲಾಕ್‌ಬಸ್ಟರ್ ಚಲನಚಿತ್ರಗಳಲ್ಲಿ ಅಭಿನಯಿಸಿದ ಏಕೈಕ ಬಾಲಿವುಡ್ ನಟಿಯರಲ್ಲಿ ಒಬ್ಬರು ಎಂದು ಗೂಗಲ್ ಹೇಳಿದೆ.
2000 ರ ದಶಕದ ಆರಂಭದಲ್ಲಿ, ಶ್ರೀದೇವಿ ಅವರು ನಟನೆಯಿಂದ ವಿರಾಮ ತೆಗೆದುಕೊಂಡರು ಮತ್ತು 2012 ರ ಇಂಗ್ಲಿಷ್ ವಿಂಗ್ಲಿಷ್ ಚಲನಚಿತ್ರದೊಂದಿಗೆ ಕಮ್‌ಬ್ಯಾಕ್ ಮಾಡಿದರು. 2013 ರಲ್ಲಿ, ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ನಂತರ 2017 ರಲ್ಲಿ, ಅವರ ಕ್ರೈಮ್ ಥ್ರಿಲ್ಲರ್ ‘ಮಾಮ್’ ಸಿನಿಮಾದಲ್ಲಿನ ಅತ್ಯುತ್ತಮ ನಟನೆಗಾಗಿ ಅವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿತು.
ಅಷ್ಟೇ ಅಲ್ಲ, ಭಾರತೀಯ ಚಿತ್ರರಂಗಕ್ಕೆ ಪ್ರವೇಶಿಸಿವು ಹೊಸ ನಟಿಯರಿಗೆ ಇವರ ಸಿನಿಮಾಗಳು ಸ್ಪೂರ್ತಿದಾಯಕವಾಗಿವೆ. ಶ್ರೀದೇವಿ ಚಿತ್ರರಂಗದಲ್ಲಿ ಶಾಶ್ವತವಾಗಿ ತಮ್ಮ ಛಾಪು ಮೂಡಿಸಿದ್ದಾರೆ. 2018 ರಲ್ಲಿ, ನಟಿ ಪ್ರಜ್ಞೆ ಕಳೆದುಕೊಂಡು ತಮ್ಮ ಹೋಟೆಲ್ ಬಾತ್‌ಟಬ್‌ನಲ್ಲಿ ಆಕಸ್ಮಿಕವಾಗಿ ಮುಳುಗಿ ಸಾವನ್ನಪ್ಪಿದರು ಎಂದು ದುಬೈ ಸರ್ಕಾರ ತಿಳಿಸಿದೆ. ಶ್ರೀದೇವಿಯ ಹಠಾತ್ ಸಾವು ಅವರ ಅಭಿಮಾನಿಗಳು ಮತ್ತು ಉದ್ಯಮದ ಸಹೋದ್ಯೋಗಿಗಳನ್ನು ದಿಗ್ಭ್ರಮೆಗೊಳಿಸಿದೆ. ಫೆಬ್ರವರಿ 28 ರಂದು, ಬಾಲಿವುಡ್ ನಟಿಯ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ಮಾಡಲಾಯಿತು.