Chitradurga accident: ಚಿತ್ರದುರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ನಾಲ್ವರ ದುರ್ಮರಣ

Chitradurga Accident: ಚಿತ್ರದುರ್ಗ ಜಿಲ್ಲೆಯ ಮಲ್ಲಾಪುರ ಗ್ರಾಮದ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿ, ಮೂವರು ಗಾಯಗೊಂಡಿದ್ದಾರೆ.

ಚಿತ್ರದುರ್ಗ: ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದುಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ದಂಪತಿ ಸೇರಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ದುರ್ಘಟನೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್​ ಠಾಣೆ ವ್ಯಾಪ್ತಿಯ ಮಲ್ಲಾಪುರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ನಡೆದಿದೆ. ಮೃತರನ್ನು ಸಂಗನಬಸವ (36), ರೇಖಾ (29), ಅಗಸ್ತ್ಯ (7) ಹಾಗೂ ಭೀಮಾಶಂಕರ್ (26) ಎಂದು ಗುರುತಿಸಲಾಗಿದೆ.

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಕುದರಿ ಸಾಲವಡಗಿ ಗ್ರಾಮದ ನಿವಾಸಿಗಳಾದ ಖಾಸಗಿ ಬ್ಯಾಂಕ್​​ ನೌಕರರಾಗಿರುವ ಸಂಗನಬಸವ, ಅವರ ಪತ್ನಿ ರೇಖಾ, ಮಕ್ಕಳಾದ ಅಗಸ್ತ್ಯ, ಆದರ್ಶ್, ಪುತ್ರಿ ಅನ್ವಿಕಾ ಹಾಗೂ ಸಂಬಂಧಿ ಭೀಮಾಶಂಕರ್ ಹಾಗೂ ಕಾರು ಚಾಲಕ ಎಲ್ಲರೂ ಸೇರಿಕೊಂಡು ಚಿಕ್ಕಮಗಳೂರು ಜಿಲ್ಲೆಗೆ ಪ್ರವಾಸಕ್ಕೆಂದು ತೆರಳುತ್ತಿದ್ದರು. ಮನೆಯಿಂದ ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಕಾರಿನಲ್ಲಿ ಹೊರಟಿದ್ದರು.

ಭಾನುವಾರ ಬೆಳಗಿನ ಜಾವ 3:30ರ ವೇಳೆಗೆ ಚಿತ್ರದುರ್ಗದ ಮಲ್ಲಾಪುರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ನಿಯಂತ್ರಣ ಕಳೆದುಕೊಂಡ ಕಾರು ಹಿಂಬದಿಯಿಂದ ಲಾರಿಗೆ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಕಾರಿನಲ್ಲಿದ್ದ ಸಂಗನಬಸವ, ರೇಖಾ, ಅಗಸ್ತ್ಯ, ಭೀಮಾಶಂಕರ್ ಮೃತಪಟ್ಟಿದ್ದಾರೆ. ಆದರ್ಶ್, ಅನ್ವಿಕಾ ಹಾಗೂ ಕಾರು ಚಾಲಕನಿಗೆ ಗಂಭೀರ ಗಾಯಗಳಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಗಾಯಾಳುಗಳನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ‌ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ. ಪರಶುರಾಮ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Source : https://m.dailyhunt.in/news/india/kannada/etvbhar9348944527258-epaper-etvbhkn/chitradurga+accident+chitradurgadalli+bhikara+raste+apaghaata+onde+kutumbadha+naalvara+durmarana-newsid-n527633922?listname=newspaperLanding&topic=homenews&index=0&topicIndex=0&mode=pwa&action=click

Leave a Reply

Your email address will not be published. Required fields are marked *